ಬಿಜೆಪಿ ಒಡ್ಡುವ ಆಮಿಷಕ್ಕೆ ಬಲಿಯಾಗಿ, ಕೈ ಹಿಡಿದು ಬೆಳೆಸಿದ ಪಕ್ಷಕ್ಕೆ ದ್ರೋಹ ಬಗೆಯಲ್ಲ : ಸಿ.ಎಸ್ ಶಿವಳ್ಳಿ

ಹುಬ್ಬಳ್ಳಿ: ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟ ಬದನೆಕಾಯಿ ನಾನಲ್ಲ. ಜನರು ನನ್ನನ್ನು ಚುನಾವಣೆಯಲ್ಲಿ ಬಹುಮತದಿಂದ ಆಯ್ಕೆ ಮಾಡಿದ್ದಾರೆ. ಮತದಾರ ಪ್ರಭುವಿನ ವಿಶ್ವಾಸಕ್ಕೆ ಎಂದಿಗೂ ದ್ರೋಹ ಬಗೆಯಲಾರೆ ಎಂದು ಕುಂದಗೋಳ ಶಾಸಕ ಸಿ.ಎಸ್. ಶಿವಳ್ಳಿ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಶನ್ ಕಮಲಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು. ಬಿಜೆಪಿಗರು ಯಾವುದೇ ಆಸೆ ಆಮಿಷವೊಡ್ಡಿದ್ದರೂ ತಾವು ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ತಮಗೆ ಸಚಿವ ಸ್ಥಾನ ಸಿಗದೇ ಹೋದರೂ ಪಕ್ಷ ಬಿಡುವುದಿಲ್ಲ. ಪಕ್ಷದಲ್ಲಿದ್ದುಕೊಂಡೇ ಸಚಿವ ಸ್ಥಾನ ನೀಡುವಂತೆ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರುತ್ತೇನೆಂದರು.

ತಾವು 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದೇವೆ. ಪಕ್ಷದ ನ್ಯಾಯ ಕೇಳುವ ಹಕ್ಕು ತನಗೀದೆ. ಬಿಜೆಪಿಗರು ಒಡ್ಡುವ ಗೊಡ್ಡ ಆಸೆ ಆಮಿಷಗಳಿಗೊಳಗಾಗುವ ಜಾಯಮಾನ ತಮ್ಮದ್ದಲ್ಲ. ತಾವೊಬ್ಬ ಪಕ್ಷದ ಶಿಸ್ತಿನ ಸಿಪಾಯಿ. ಹೈಕಮಾಂಡ್ ಆದೇಶವನ್ನು ಚಾಚು ತಪ್ಪದೇ ಪಾಲಿಸುವ ಮೂಲಕ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಲು ಎಲ್ಲ ರೀತಿಯಿಂದ ಪ್ರಯತ್ನಿಸುತ್ತೇನೆ ಎಂದರು.

ಡಿ. 22 ರಂದು ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದ್ದು, ಈ ಬಾರಿ ತಾವು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದು ಖಚಿತ. ತಾವು ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು, ಮೂರು ಬಾರಿ ತಾವು ಶಾಸಕರಾಗಿ ಆಯ್ಕೆಯಾಗಿದ್ದೇವೆ ಮಾತ್ರವಲ್ಲದೇ ಪಕ್ಷ ಹಾಗೂ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಪಕ್ಷ, ಕಾರ್ಯಕರ್ತರ ಹಾಗೂ ಕ್ಷೇತ್ರದ ಮತದಾರರ ಗಮನ ಸೆಳೆದಿದ್ದೇವೆ. ಇದುವೇ ತಾವು ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್‌ನಲ್ಲಿ ಮನವಿ ಮಾಡಲು ತಮಗೆ ಅನುಕೂಲವಾಗಲಿದೆ ಎಂದರು,

ಬಿಜೆಪಿಗ ಗೊಡ್ಡು ಆಮಿಷಗಳಿಗೆ ಒಳಗಾಗಿ ಕೈಹಿಡಿದು ಬೆಳೆಸಿದ ಪಕ್ಷವನ್ನು ದ್ರೋಹ ಬಗೆಯುವ ಕೆಲಸ ಎಂದಿಗೂ ಮಾಡುವುದಿಲ್ಲ ಎಂದ ಶಿವಳ್ಳಿ, ಪಕ್ಷಕ್ಕೆ ದ್ರೋಹ ಬಗೆಯುವುದೆಂದರೇ ಹೆತ್ತ ತಾಯಿಗೆ ದ್ರೋಹ ಬಗೆದಂತೆ ಎಂದೂ ಅವರು ಹೇಳಿದರು.

Leave a Reply

Your email address will not be published.

Social Media Auto Publish Powered By : XYZScripts.com