Adelaide Test : ಆಸೀಸ್ ಶಿಸ್ತಿನ ಬೌಲಿಂಗ್ ದಾಳಿ – ಕುಸಿದ ಭಾರತಕ್ಕೆ ಪೂಜಾರ ಶತಕದ ಆಸರೆ

ಅಡಿಲೇಡ್ ಓವಲ್ ಮೈದಾನದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಗುರುವಾರ ಬಾರ್ಡರ್-ಗವಾಸ್ಕರ್ ಸರಣಿಯ ಮೊದಲ ಟೆಸ್ಟ್ ಪಂದ್ಯ ಆರಂಭಗೊಂಡಿದೆ. ಶಿಸ್ತಿನ ಬೌಲಿಂಗ್ ದಾಳಿ ನಡೆಸಿದ ಆತಿಥೇಯ ಆಸ್ಟ್ರೇಲಿಯಾ ಪ್ರಥಮ ದಿನದಾಟದಲ್ಲಿ ಪ್ರಾಬಲ್ಯ ಮರೆಯಿತು. ಇಡೀ ದಿನದಾಟದಲ್ಲಿ ಒಂದೇ ಒಂದು ವೈಡ್, ಅಥವಾ ನೋಬಾಲ್ ಸಹ ಎಸೆಯದೇ ಇದ್ದದ್ದು ಆಸ್ಟ್ರೇಲಿಯಾ ಬೌಲಿಂಗ್ ಪಡೆಯ ಶಿಸ್ತಿನ ದಾಳಿಗೆ ಹಿಡಿದ ಕೈಗನ್ನಡಿ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ ಮೊದಲ ದಿನದಾಟದ ಅಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 250 ರನ್ ಗಳಿಸಿದೆ.  3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದ ಚೇತೇಶ್ವರ ಪೂಜಾರಾ ಶತಕ ಬಾರಿಸಿ ತಂಡಕ್ಕೆ ನೆರವಾದರು. 246 ಎಸೆತಗಳನ್ನು ಎದುರಿಸಿದ ಪೂಜಾರಾ 7 ಬೌಂಡರಿ ಹಾಗೂ 2 ಸಿಕ್ಸರ್ ಗಳನ್ನು ಬಾರಿಸಿ 123 ರನ್ ಗಳಿಸಿದರು.

ಕೆ.ಎಲ್ ರಾಹುಲ್ (2), ಮುರಳಿ ವಿಜಯ್ (11), ನಾಯಕ ವಿರಾಟ್ ಕೊಹ್ಲಿ (3), ಅಜಿಂಕ್ಯ ರಹಾನೆ (13) ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ದಿನದಾಟದ ಮುಕ್ತಾಯಕ್ಕೆ ಮೊಹಮ್ಮದ್ ಶಮಿ (6*) ಅಜೇಯರಾಗುಳಿದಿದ್ದಾರೆ. ಆಸ್ಟ್ರೇಲಿಯಾ ಪರವಾಗಿ ಮಿಚೆಲ್ ಸ್ಟಾರ್ಕ್ 2, ಜೊಶ್ ಹೇಜಲ್ವುಡ್ 2, ಪ್ಯಾಟ್ ಕಮಿನ್ಸ್ 2 ಹಾಗೂ ನೇಥನ್ ಲಾಯನ್ 2 ವಿಕೆಟ್ ಪಡೆದರು.

Leave a Reply

Your email address will not be published.

Social Media Auto Publish Powered By : XYZScripts.com