ಜಿಸ್ಯಾಟ್-11 ಏರಿದೆ ನಭಕ್ಕೆ, ಇಂಟರ್ನೆಟ್ ಸ್ಪೀಡ್ ಏರಲಿದೆ 14 ಜಿಬಿಪಿಎಸ್‌ಗೆ!

ಭಾರತದ ಅತ್ಯಂತ ಭಾರದ ಉಪಗ್ರಹವಾದ ಜಿಸ್ಯಾಟ್-11 ಅನ್ನು ಇಸ್ರೋ ಯಶಸ್ವಿಯಾಗಿ ಬುಧವಾರ ಬೆಳಗಿನ ಜಾವ ಫ್ರೆಂಚ್ ಗಯಾನಾದಿಂದ ಉಡ್ಡಯನ ಮಾಡಿದೆ.

ದಕ್ಷಿಣ ಅಮೆರಿಕ ಕರಾವಳಿಯ ಪಕ್ಕದ ಫ್ರೆಂಚ್ ನೆಲದಿಂದ ಉಡ್ಡಯನಗೊಂಡ ಏರಿಯೇನ್-5 ವಾಹಕವು 33 ನಿಮಿಷಗಳಲ್ಲಿ ಜಿಸ್ಯಾಟ್-11 ಅನ್ನು ಕಕ್ಷೆಗೆ ತಲುಪಿಸಿತು. ಈ ಉಪಗ್ರಹವು 5,854 ಕೆಜಿ ತೂಕವಿದ್ದು, ಇಸ್ರೋ ಈ ತನಕ ನಿರ್ಮಿಸಿದ ಅತಿ ದೈತ್ಯ, ಅತಿ ಸುಧಾರಿತ ಉಪಗ್ರಹವೆನಿಸಿದೆ. ಅಂತರಿಕ್ಷದಲ್ಲಿ ಇದರ ಸಂವಹನ ಕಾರ್ಯವೂ ಘನವಾಗಿಯೇ ಇರಲಿದೆ. 15 ವರ್ಷಗಳಿಗೂ ಹೆಚ್ಚು ಕಾಲ ಬಾಳ್ವಿಕೆ ಬರಲಿದೆ ಎಂದು ಇಸ್ರೋ ಅಧ್ಯಕ್ಷ ಕೆ ಶಿವನ್ ಹೇಳಿದ್ದಾರೆ.

ಕರ್ನಾಟಕದ ಹಾಸನದ ಕೇಂದ್ರದಲ್ಲಿ ಈ ಉಪಗ್ರಹದ ನಿಯಂತ್ರಣ ನಡೆಯಲಿದೆ. ಜಿಸ್ಯಾಟ್-11 ಉಪಗ್ರಹವು ಉನ್ನತ ಡಾಟಾ ದರದ ಸಂಪರ್ಕವನ್ನು ಕೆಯು-ಬ್ಯಾಂಡ್‌ನಲ್ಲಿ 32 ಯೂಸರ್ ಬೀಮ್‌ಗಳು ಮತ್ತು ಕೆಎ ಬ್ಯಾಂಡ್‌ನಲ್ಲಿ 8 ಹಬ್ ಬೀಮ್‌ಗಳಲ್ಲಿ ಭಾರತೀಯರಿಗೆ ಒದಗಿಸಲಿದೆ. ಅಂದರೆ ಇಂಟರ್ನೆಟ್ ಸ್ಪೀಡ್ ಪ್ರತಿ ಸೆಕೆಂಡ್‌ಗೆ 14 ಗಿಗಾಬೈಟ್‌ನಷ್ಟು (14 ಜಿಬಿಪಿಎಸ್) ಆಗಲಿದೆ. ಭವಿಷ್ಯದ ಬ್ರಾಡ್‌ಬ್ಯಾಂಡ್ ಕ್ಷೇತ್ರದ ಪ್ರಗತಿಗೆ ಈ ಸ್ಯಾಟ್‌ಲೈಟ್ ಕೊಡುಗೆ ಮಹತ್ವದ್ದಾಗಿರಲಿದೆ.
ಡಿಜಿಟಲ್ ಇಂಡಿಯಾ ಮಿಶನ್‌ ಅಡಿ ದೇಶದಲ್ಲಿ 100 ಜಿಬಿಪಿಎಸ್‌ನ ಹೈ ಡಾಟಾ ಕನೆಕ್ಟಿವಿಟಿ ಒದಗಿಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ನಿಟ್ಟಿನಲ್ಲಿ 4 ಉಪಗ್ರಹಗಳ ಯೋಜನೆ ನಡೆಸಲಾಗಿದ್ದು, ಇದು ಆ ಸರಣಿಯಲ್ಲಿ ಮೂರನೆಯದಾಗಿದೆ ಎಂದು ಶಿವನ್ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com