ಬಾಹ್ಯಾಕಾಶದಲ್ಲಿ ಚಿತಾಭಸ್ಮ ವಿಸರ್ಜನೆ ಮಾಡಿಕೊಡುತ್ತೆ ಈ ಸ್ಟಾರ್ಟಪ್..!

ಮರಣಾನಂತರ ಚಿತಾಭಸ್ಮವನ್ನು ಚಿರಸ್ಥಾಯಿಗೊಳಿಸಿಕೊಡುವ ಒಂದು ಸ್ಟಾರ್ಟಪ್ ಬಂದಿದೆ. ಇನ್ನು ಪ್ರೀತಿಪಾತ್ರರ ಅಸ್ಥಿ ವಿಸರ್ಜನೆಗೆ ನದಿಯೋ, ಪುಣ್ಯಕ್ಷೇತ್ರವೋ ಹುಡುಕಬೇಕಿಲ್ಲ. ಬಾಹ್ಯಾಕಾಶದಲ್ಲಿ ವಿಸರ್ಜನೆ ಮಾಡಿ ಬಳಿಕ ದಿನಾ ಮೇಲೆ ನೋಡಿ ಕೈ ಮುಗಿಯುತ್ತಾ ಸ್ಮರಿಸಿದರಾಯಿತು.

ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಇಲಿಸಿಯಂ ಸ್ಪೇಸ್ ಎಂಬ ಸ್ಟಾರ್ಟಪ್, 100 ಮಂದಿಯ ಚಿತಾಭಸ್ಮವನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ದು ಅಲ್ಲಿ ಉಪಗ್ರಹ ರೂಪಿ ಸ್ಮಾರಕ ನಿರ್ಮಿಸಿಕೊಡುವ ಯೋಜನೆ ಹಾಕಿಕೊಂಡಿದೆ. 100 ಮಂದಿಯ ಚಿತಾಭಸ್ಮಕ್ಕಾಗಿ 4 ಇಂಚಿನ ಚಚ್ಚೌಕದ ಉಪಗ್ರಹವೊಂದನ್ನು ಮಾಡಲಾಗಿದೆ. ಕ್ಯೂಬ್‌ಸ್ಯಾಟ್ ಎಂಬ ಹೆಸರಿನ ಆ ಉಪಗ್ರಹದಲ್ಲಿ ಚಿತಾಭಸ್ಮ ತುಂಬಲಾಗುತ್ತದೆ.
ಕುಟುಂಬವರ್ಗದವರು ತಮ್ಮ ಪ್ರೀತಿಪಾತ್ರದ ಚಿತಾಭಸ್ಮ ನೀಡಿ 2,500 ಡಾಲರ್ ಶುಲ್ಕ ನೀಡಬೇಕು. ಸ್ಪೇಸ್ ಎಕ್ಸ್ ಫಾಲ್ಕನ್9 ರಾಕೆಟ್‌ನಲ್ಲಿ ಈ ಉಪಗ್ರಹವನ್ನು ಉಡಾಯಿಸಲಾಗುತ್ತದೆ. ಅದನ್ನು ಕಕ್ಷೆಯಲ್ಲಿರಿಸಿ ಕ್ಯಾಪ್ಸೂಲ್ ಭೂಮಿಗೆ ಮರಳಲಿದೆ.
ಚಿತಾಭಸ್ಮವನ್ನು ಕೊಟ್ಟ ಕುಟುಂಬವು ಫೋನ್‌ನಲ್ಲೇ ಆಪ್ ಮೂಲಕ ಚಿತಾಭಸ್ಮ ನಭಕ್ಕೆ ಸಾಗುವುದನ್ನು, ಭೂಮಿಗೆ ಸುತ್ತುವುದನ್ನು ಟ್ರಾಕ್ ಮಾಡಬಹುದಾಗಿದೆ. 4 ವರ್ಷಗಳ ಕಾಲ ಈ ಬಾಹ್ಯಾಕಾಶ ಸಮಾಧಿ ಅರ್ಥಾತ್ ಉಪಗ್ರಹ ಭೂಮಿಯನ್ನು ಸುತ್ತುತ್ತಾ ಇರಲಿದೆ ಎಂದು ಇಲಿಸಿಯಂ ಸ್ಪೇಸ್ ಹೇಳಿಕೊಂಡಿದೆ. ಬಾಹ್ಯಾಕಾಶದಲ್ಲಿ ಅಸ್ಥಿ ವಿಸರ್ಜನೆ ಇದು ಮೊದಲಲ್ಲ. 2012ರಲ್ಲೂ ಇದೇ ರೀತಿಯ ಕಂಪನಿಯೊಂದು 320 ಮಂದಿಯ ಚಿತಾಭಸ್ಮವನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ದಿತ್ತು.

Leave a Reply

Your email address will not be published.

Social Media Auto Publish Powered By : XYZScripts.com