ಕಾಶ್ಮೀರದ ಸ್ಥಳೀಯ ರಾಜಕೀಯದಿಂದ ಒಂದು ಗೌರವಯುತ ಅಂತರವಿರಲಿ….

ಜಮ್ಮು-ಕಾಶ್ಮೀರದ ಸ್ಥಳೀಯ ರಾಜಕೀಯದಲ್ಲಿ ಮೂಗುತೂರಿಸುವುದರಿಂದ ಪ್ರಧಾನಧಾರೆ ರಾಜಕಾರಣಕ್ಕೆ ಅವಕಾಶವು ಕಿರಿದಾಗುವುದಲ್ಲದೆ ಪ್ರತ್ಯೇಕತಾವಾದಿ ರಾಜಕೀಯ ಹೆಚ್ಚಾಗುತ್ತದೆ.

ಪಿಡಿಪಿ-ಬಿಜೆಪಿ ಮೈತ್ರಿಕೂಟದ ಸರ್ಕಾರ ಪತನವಾಗಿ ಐದು ತಿಂಗಳ ನಂತರ ಜಮ್ಮು ಕಾಶ್ಮೀರದ ರಾಜ್ಯಪಾಲರು ಶಾಸನಸಭೆಯನ್ನು ವಿಸರ್ಜನೆ ಮಾಡಲು ತೆಗೆದುಕೊಂಡ ತೀರ್ಮಾನವು ಕಾಶ್ಮೀರದ ರಾಜಕೀಯದಲ್ಲಿ ಮತ್ತೊಂದು ಪ್ರಮುಖ ರಾಜಕೀಯ ಗಳಿಗೆಯಾಗಿದೆ. ಇದಕ್ಕೆ ಕಾರಣ ಈ ಬೆಳವಣಿಗೆಯಿಂದಾಗಿ ರಾಜ್ಯದ ವಿವಿಧ ರಾಜಕೀಯ ಪಕ್ಷಗಳ ಮೇಲೆ ಯಾವ ಬಗೆಯ ಪರಿಣಾಮ ಬೀರಬಹುದು ಎಂಬುದು ಮಾತ್ರವಲ್ಲ. ಬದಲಿಗೆ ಈಗಾಗಲೇ ಅತ್ಯಂತ ಸೂಕ್ಷ್ಮ ಪರಿಸ್ಥಿತಿಯನ್ನು ಮುಟ್ಟಿರುವ ಅಲ್ಲಿನ ಪ್ರಜಾತಂತ್ರದ ಪರಿಸ್ಥಿತಿ ಹಾಗೂ ಕೇಂದ್ರ ಸರ್ಕಾರದ ಬಗ್ಗೆ ಅಲ್ಲಿನ ಜನತೆಯ ಅಭಿಪ್ರಾಯದ ಹಿನ್ನೆಲೆಯಲ್ಲೂ ಈ ಬೆಳವಣಿಗೆಯು ಮಹತ್ವದ್ದಾಗಿದೆ.

ಪಿಡಿಪಿಯ ನಾಯಕಿಯಾದ ಮೆಹಬೂಬ ಮುಫ್ತಿ ಸೈಯದ್ ಅವರು ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ (ಜೆಕೆಎನ್‌ಸಿ) ಮತ್ತು ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಸರ್ಕಾರ ರಚಿಸುವ ಹಕ್ಕನ್ನು ಪ್ರತಿಪಾದಿಸಿದ ಕೂಡಲೇ ರಾಜ್ಯಪಾಲರು ಈ ತೀರ್ಮಾನ ತೆಗೆದುಕೊಂಡಿದ್ದರಿಂದ ಅದು ಮತ್ತಷ್ಟು ವಿವಾದಾಸ್ಪದವಾಯಿತು. ಈ ಮಧ್ಯೆ ಇದಕ್ಕೆ ಪ್ರತಿಯಾಗಿ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸ್‌ನ (ಜೆಕೆಪಿಸಿ)ನ ಸಜ್ಜಾದ್ ಗನಿ ಲೋನ್ ಅವರು ಬಿಜೆಪಿಯ ಬೆಂಬಲದೊಂದಿಗೆ ಸರ್ಕಾರ ಮಾಡುವ ಹಕ್ಕನ್ನು ಪ್ರತಿಪಾದಿಸಿದ್ದರು.

ವಿಪರ್ಯಾಸವೆಂದರೆ ಪಿಡಿಪಿ-ಬಿಜೆಪಿ ಸರ್ಕಾರ ಪತನವಾದ ಮೇಲೆ ಅಮಾನತ್ತಿನಲ್ಲಿಟ್ಟಿದ್ದ ಜಮ್ಮು-ಕಾಶ್ಮೀರ ಶಾಸನಸಭೆಯನ್ನು ವಿಸರ್ಜಿಸಬೇಕೆಂದು ಜೆಕೆಎನ್‌ಸಿ ಮತ್ತು ಪಿಡಿಪಿ ಪಕ್ಷಗಳು ಗಟ್ಟಿಧ್ವನಿಯಲ್ಲಿ ಒತ್ತಾಯ ಹಾಕಿದ್ದವು. ಏಕೆಂದರೆ ಸಂದರ್ಭವನ್ನು  ಬಳಸಿಕೊಂಡು ಬಿಜೆಪಿಯು ಜೆಕೆಪಿಸಿ ಹಾಗೂ ಕಾಂಗ್ರೆಸ್ ಮತ್ತು ಪಿಡಿಪಿ ಪಕ್ಷದ ಭಿನ್ನಮತೀಯ ಸದಸ್ಯರ ಬೆಂಬಲದೊಂದಿಗೆ ಸರ್ಕಾರವನ್ನು ನಡೆಸುವ ಹುನ್ನಾರವನ್ನು ಮಾಡುತ್ತಿದೆ ಎಂಬ ಗುಮಾನಿಗಳು ಆಗ ದಟ್ಟವಾಗಿ ಹರಡಿತ್ತು. ಸಜ್ಜಾದ್ ಗನಿ ಲೋನ್ ಅವರು ಮೂರನೇ ರಂಗವೊಂದನ್ನು ಕಟ್ಟುವ ಪ್ರಸ್ತಾಪವನ್ನು ತೇಲಿಬಿಟ್ಟಾಗ ಪಿಡಿಪಿಯ ಕೆಲವು ಪ್ರಮುಖ ಸದಸ್ಯರು ಅದಕ್ಕೆ ಸೇರುವ ಇರಾದೆಯನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದರು.

ಹೀಗಾಗಿ ಜೆಕೆಎನ್‌ಸಿ, ಪಿಡಿಪಿ ಮತ್ತು ಕಾಂಗ್ರೆಸ್‌ಗಳ ಮಹಾ ಮೈತ್ರಿಕೂಟದ ಪ್ರಧಾನ ಉದ್ದೇಶ ಮೂರನೇ ರಂಗದ ಹೆಸರಿನಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರದಂತೆ ತಡೆಗಟ್ಟುವುದಾಗಿತ್ತು. ಆದ್ದರಿಂದಲೇ, ಶಾಸನಸಭೆಯನ್ನು ರದ್ದುಗೊಳಿಸಿದ ರಾಜ್ಯಪಾಲರ ನಿರ್ಧಾರವನ್ನು ಜೆಕೆಎನ್‌ಸಿ ಮತ್ತು ಪಿಡಿಪಿಗಳು ಟೀಕಿಸಿದ್ದರೂ ಆ ತೀರ್ಮಾನದಿಂದ ಆ ಪಕ್ಷಗಳಿಗೆ ಸಮಾಧಾನವೇ ಆಗಿದೆ.  ತಮ್ಮ ಮೇಲೆ ತೂಗುತ್ತಿದ್ದ ಅಸ್ಥಿರತೆಯ ತೂಗುಕತ್ತಿಯಿಂದ ಬಚಾವಾಗುವಲ್ಲಿ ಈ ಪಕ್ಷಗಳು ಯಶಸ್ವಿಯಾಗಿವೆ. ಕೇವಲ ಎರಡು ದಶಕಗಳ ಇತಿಹಾಸ ಹೊಂದಿರುವ ಪಿಡಿಪಿ ಪಕ್ಷವು ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಾಶವಾಗಿ ಹೋಗುವ ಅಥವಾ ಒಡೆದುಹೋಗುವ ಅಪಾಯವನ್ನಂತೂ ಇತರರಿಗಿಂತ ಹೆಚ್ಚಾಗಿಯೇ ಎದುರಿಸುತ್ತಿತ್ತು. ಜೆಕೆಎನ್‌ಸಿ ಯ ಪರಿಸ್ಥಿತಿ ಇಷ್ಟು ಬಿಗಡಾಯಿಸಿರಲಿಲ್ಲವಾದರೂ ಅಷ್ಟೇನೂ ಸಮಾಧಾನಕರವಾಗಿಯೂ ಇರಲಿಲ್ಲ. ಪಿಡಿಪಿ ಪಕ್ಷದ ಉದಯದೊಂದಿಗೆ ರಾಜ್ಯದಲ್ಲಿ ಜೆಕೆಎನ್‌ಸಿಯ ತನಗಿದ್ದ ಪ್ರಧಾನ ಸ್ಥಾನವನ್ನು ಕಳೆದುಕೊಂಡಿತ್ತು ಮತ್ತು ೨೦೧೪ರ ಚುನಾವಣೆಯ ನಂತರದಲ್ಲಿ ಕಣಿವೆಯಲ್ಲಿರುವ ಅತಿ ದೊಡ್ಡ ಪಕ್ಷವೆಂಬ ಸ್ಥಾನಕ್ಕೂದು ಎರವಾಗಿತ್ತು. ಹಾಗೂ ಜೆಕೆಪಿಸಿ ಪಕ್ಷವು ಒಂದು ಮೂರನೇ ಶಕ್ತಿಯಾಗಿ ಉದಯವಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮತ್ತಷ್ಟು ಮೂಲೆಗುಂಪಾಗುವ ಅಪಾಯವನ್ನು ಎದುರಿಸುತ್ತಿತ್ತು.

ಒಂದು ಅಲ್ಪಕಾಲಿನ ದೃಷ್ಟಿಯನ್ನಿಟ್ಟುಕೊಂಡು ಹೇಳುವುದಾದರೆ ಶಾಸನಸಭೆಯು ವಿಸರ್ಜನೆಯಾಗುವುದರ ಮೂಲಕ ಪಿಡಿಪಿಯು ಎದುರಿಸುತ್ತಿದ್ದ ಬಿಕ್ಕಟ್ಟು ತಾತ್ಕಾಲಿಕವಾಗಿ ಬಗೆಹರಿದಿದೆ ಮತ್ತು ತನ್ನ ಬದ್ಧಶತ್ರುವಾದ ಪಿಡಿಪಿಯ ಬೆಂಬಲಕ್ಕೆ ಮುಂದಾಗುವ ಮೂಲಕ ಮತ್ತು ಬಿಜೆಪಿಯನ್ನು ಅಧಿಕಾರದಿಂದ ದೂರವಿಟ್ಟು ಕಾಶ್ಮೀರದ ಹಿತಾಸಕ್ತಿಯನ್ನು ಉಳಿಸುವ ಮೂಲಕ ಜೆಕೆಎನ್‌ಸಿಯು ತನ್ನ ಬಗ್ಗೆ ಒಂದಷ್ಟು ಸಕಾರಾತ್ಮಕ ಅಭಿಪ್ರಾಯವನ್ನು ಮೂಡಿಸುವಲ್ಲೂ ಯಶಸ್ವಿಯಾಗಿದೆ. ಆದರೆ ಅಂತಿಮ ವಿಶ್ಲೇಷಣೆಯಲ್ಲಿ ಮಾತ್ರ ಈ ಬೆಳವಣಿಗೆಗಳು ಕಾಶ್ಮೀರದ ಪ್ರಜಾತಾಂತ್ರಿಕ ರಾಜಕೀಯದ ಮೇಲೆ ದೊಡ್ಡ ಪ್ರಹಾರವನ್ನು ಮಾಡಿರುವುದಂತೂ ಸತ್ಯ. ಕಳೆದ ಒಂದೂವರೆ ದಶಕದಲ್ಲಿ ಪ್ರಜಾತಾಂತ್ರಿಕ ರಾಜಕೀಯವು ಸಾಕಷ್ಟು ಮನ್ನಣೆಯನ್ನು ಪಡೆದುಕೊಂಡಿತ್ತು ಎಂಬುದನ್ನು ಇಲ್ಲಿ ಒತ್ತು ಕೊಟ್ಟು ಹೇಳಲೇಬೇಕು. ಒಂದೆಡೆ ಪ್ರತ್ಯೇಕತಾವಾದಿ ರಾಜಕಾರಣದ ಜೊತೆಜೊತೆಗೆ ಪ್ರಜಾತಾಂತ್ರಿಕ ರಾಜಕೀಯದ ಬಗೆಗಿನ ವಿಶ್ವಾಸವೂ ಬೆಳೆಯುತ್ತಿತ್ತು. ೧೯೮೯ರ ನಂತರದಲ್ಲಿ ಪ್ರಾರಂಭಗೊಂಡ ಮಿಲಿಟೆನ್ಸಿಯ ಹಿನ್ನೆಲೆಯಲ್ಲಿ ಪ್ರಧಾನಧಾರೆ ರಾಜಕಾರಣ ಸಂಪೂರ್ಣವಾಗಿ ವಿಫಲವಾಗಿದ್ದ ಹಿನ್ನೆಲೆಯಲ್ಲಿ ಇದೇನೂ ಸಾಮಾನ್ಯವಾದ ಬೆಳವಣಿಗೆಯಾಗಿರಲಿಲ್ಲ. ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ನ ಅತಿಯಾದ ಮಧ್ಯಪ್ರವೇಶ ಮತ್ತು ಕಾಶ್ಮೀರದ ರಾಜಕೀಯವನ್ನು ತನಗಿಷ್ಟಬಂದಂತೆ ದುರ್ಬಳಕೆ ಮಾಡಿಕೊಂಡಿದ್ದರಿಂದಲೇ ಜಮ್ಮು ಕಾಶ್ಮೀರದ ಪರಿಸ್ಥಿತಿ ಈ ಹಂತವನ್ನು ಮುಟ್ಟಿತು. ಕಾಶ್ಮೀರದ ರಾಜಕಾರಣವನ್ನು ನಿಯಂತ್ರಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ ಕಾಂಗ್ರೆಸ್ ಪಕ್ಷವು ೧೯೮೪ರಲ್ಲಿ ಜೆಕೆಎನ್‌ಸಿ ಪಕ್ಷದಲ್ಲಿ ಪಕ್ಷಾಂತರವನ್ನು ಪ್ರಚೋದಿಸಿ ಫರೂಖ್ ಅಬ್ದುಲ್ಲಾ ಸರ್ಕಾರವನ್ನು ವಜಾ ಮಾಡಿತ್ತು ಮತ್ತು  ಜಿಎಂ ಷಾ ನೇತೃತ್ವದಲ್ಲಿ ಪಕ್ಷಾಂತರಿಗಳ ಸರ್ಕಾರವನ್ನು ಸ್ಥಾಪಿಸಿತ್ತು. ನಂತರದಲ್ಲಿ ಜೆಕೆಎನ್‌ಸಿ -ಕಾಂಗ್ರೆಸ್ ಸರ್ಕಾರ ಜನಮಾನ್ಯತೆಯನ್ನು ಕಳೆದುಕೊಂಡಿದ್ದು ಮಾತ್ರವಲ್ಲದೆ ೧೯೮೭ರಲ್ಲಿ ನಡೆದ ಚುನಾವಣೆಗಳು ಅಧಿಕಾರಸ್ತರಿಂದ ಅತ್ಯಂತ ದುರ್ಬಳಕೆಯಾಗಲ್ಪಟ್ಟಿತ್ತು ಎಂಬ ಆರೋಪಕ್ಕೂ ಗುರಿಯಾದವು. ಈ ಬೆಳವಣಿಗೆಗಳು ಪ್ರಜಾತಾಂತ್ರಿಕ ರಾಜಕಾರಣದ ಬಗ್ಗೆ ಕಾಶ್ಮೀರಿಗಳಲ್ಲಿ ಸಂಪೂರ್ಣ ಭ್ರಮನಿರಸನವನ್ನುಂಟುಮಾಡಿತು. ಹೀಗಾಗಿಯೇ ಕಾಶ್ಮೀರಿಗಳಲ್ಲಿ ಮತ್ತೆ ಅಧಿಕಾರ ರಾಜಕಾರಣದ ಬಗ್ಗೆ ವಿಶ್ವಾಸವನ್ನು ಮೂಡಿಸಲು ಅಟಲ್ ಬಿಹಾರಿ ವಾಜಪೇಯಿಯವರು ಸಾಕಷ್ಟು ರಾಜಕೀಯ ಪ್ರಯತ್ನಗಳನ್ನು ಹಾಕಬೇಕಾಯಿತು. ಅವರು ೨೦೦೨ರಲ್ಲಿ ಮುಕ್ತ ಹಾಗೂ ನ್ಯಾಯೋಚಿತ ಚುನಾವಣೆಯ ಬಗ್ಗೆ ತಮ್ಮ ಬದ್ಧತೆಯನ್ನು ಸಾರಿದ್ದಲ್ಲದೆ ಆ ರಾಜ್ಯದ ಅಧಿಕಾರ ರಾಜಕಾರಣದಿಂದ ಕೇಂದ್ರವು ಗೌರವಯುತ ಅಂತರವನ್ನು ಕಾದುಕೊಳ್ಳುವುದೆಂಬ ಖಾತರಿಯನ್ನೂ ನೀಡಿದ್ದರು. ಅದು ಸ್ಥಳೀಯ ಗತಿಶೀಲತೆಗೆ ಅನುಗುಣವಾಗಿ ಅಲ್ಲಿ ಚುನಾವಣಾ ರಾಜಕಾರಣ ಬೇರೂರುವಂತೆ ಮಾಡುವಲ್ಲಿ ಮತ್ತು ಆ ಪ್ರಕ್ರಿಯೆಯಲ್ಲಿ ಪ್ರಜಾತಾಂತ್ರಿಕ ಪ್ರಕ್ರಿಯೆಗಳು ವಿಸ್ತಾರಗೊಳ್ಳುವಲ್ಲಿ ಒಂದು ದೀರ್ಘಕಾಲಿನ ಪಾತ್ರವನ್ನು ವಹಿಸಿತು.

ಈ ಪರಿಪ್ರೇಕ್ಷ್ಯದಲ್ಲಿ ನೋಡುವುದಾದರೆ ಪ್ರಸ್ತುತ ಬೆಳವಣಿಗೆಗಳು ಕಾಶ್ಮೀರದಲ್ಲಿ ಪ್ರಜಾತಂತ್ರದ ಭವಿಷ್ಯಕ್ಕೆ ಒಳ್ಳೆಯದನ್ನಂತೂ ಮಾಡುವುದಿಲ್ಲ. ಸ್ಥಳೀಯ ರಾಜಕೀಯ ಪಕ್ಷಗಳನ್ನು ಒಡೆದು ಅಧಿಕಾರವನ್ನು ಪಡೆದುಕೊಳ್ಳಲು ಬಿಜೆಪಿ ನಡೆಸುತ್ತಿರುವ ಪ್ರಯತ್ನಗಳು ಮತ್ತೊಮ್ಮೆ ರಾಜ್ಯದ ರಾಜಕಾರಣದಲ್ಲಿ ವಂಚನೆಯ ತಂತ್ರಗಳ ಬಗೆಗೆ ಚರ್ಚೆಯನ್ನು ಹುಟ್ಟುಹಾಕಿದೆಯಲ್ಲದೆ ೧೯೮೪-೮೭ರ ಅವಧಿಯಲ್ಲಿ ಕಾಂಗ್ರೆಸ್ ವಹಿಸಿದ ವಂಚಕ ಪಾತ್ರದ ಜೊತೆ ಪ್ರಸ್ತುತ ಸನ್ನಿವೇಶವನ್ನು ರಾಜಕೀಯ ವಿಶ್ಲೇಷಕರು ಹೋಲಿಸುವಂತೆ ಮಾಡಿದೆ. ಕಾಶ್ಮೀರದಲ್ಲಿ ಮತ್ತೊಮ್ಮೆ ಮಿಲಿಟೆನ್ಸಿ ಹಾಗೂ ಪ್ರತ್ಯೇಕತಾವಾದಗಳು ವಿಜೃಂಭಿಸುತ್ತಿರುವ ಹೊತ್ತಿನಲ್ಲಿ ಇದು ಒಳ್ಳೆಯ ಬೆಳವಣಿಗೆಯೇನಲ್ಲ. ರಾಜಕೀಯ ಪರಿಸ್ಥಿತಿಗಳು ಅತ್ಯಂತ ಸೂಕ್ಷ್ಮವಾಗುತ್ತಿರುವ ಈ ಸನ್ನಿವೇಶದಲ್ಲಿ ಸ್ಥಳೀಯ ರಾಜಕಾರಣದಲ್ಲಿ ಈ ಬಗೆಯ ಮಧ್ಯಪ್ರವೇಶಗಳು ಪ್ರಜಾತಾಂತ್ರಿಕ ರಾಜಕೀಯದ ಅವಕಾಶಗಳನ್ನು ಕಿರಿದಾಗಿಸುವುದಲ್ಲದೆ ಪ್ರತ್ಯೇಕತಾವಾದಕ್ಕೆ ಪೂರಕವಾದ ಸನ್ನಿವೇಶವನ್ನು ನಿರ್ಮಾಣಮಾಡುತ್ತವೆ. ಇಂದಿನ ಪರಿಸ್ಥಿತಿಯಲ್ಲಿ ಪ್ರಜಾತಾಂತ್ರಿಕ ರಾಜಕೀಯವನ್ನು ಬಲಪಡಿಸಬೇಕೇ ವಿನಃ ಯಾವುದೋ ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ರಾಜಕೀಯ ಹಿತಾಸಕ್ತಿಗೆ ಪೂರಕವಾಗುವಂತೆ ರಾಜಕೀಯವನ್ನು ತಿರುಚಬಾರದು.

ರೇಖಾ ಚೌಧರಿಯವರು ಶಿಮ್ಲಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಪ್ ಅಡ್ವಾನ್ಸೆಡ್ ಸ್ಟಡೀಸ್ ನ ಫೆಲೋ ಆಗಿದ್ದಾರೆ ಮತ್ತು ಜಮ್ಮು ಅಂಡ್ ಕಾಶ್ಮೀರ್: ಪಾಲಿಟಿಕ್ಸ್ ಆಫ್ ಐಡೆಂಟಿಟಿ ಅಂಡ್ ಸೆಪರೇಟಿಸಮ್ (೨೦೧೬) ಎಂಬ ಪುಸ್ತಕದ ಲೇಖಕರೂ ಆಗಿದ್ದಾರೆ.

ಕೃಪೆ: Economic and Political Weekly

ರೇಖಾ ಚೌಧರಿ ಬರೆಯುತ್ತಾರೆ:      ಅನು: ಶಿವಸುಂದರ್

Leave a Reply

Your email address will not be published.

Social Media Auto Publish Powered By : XYZScripts.com