Health : ಆಯುಷ್ಮಾನ್ ಭಾರತ-ಖಾಸಗಿ ಆರೋಗ್ಯಸೇವೆ ಚಿರಾಯುವಾಗಲಿ!..

ರಾಷ್ಟ್ರೀಯ ಆರೋಗ್ಯ ರಕ್ಷಣೆಯ ಪ್ರಮುಖ ಕಾರ್ಯಕ್ರಮಾಂದೋಲನವಾಗಿರುವ ಆಯುಷ್ಮಾನ್ ಭಾರತ ಯೋಜನೆಯ ಬಾಳಿಕೆಯೇ ಪ್ರಶ್ನಾರ್ಹವಾಗಿದೆ.

ಆರೋಗ್ಯವಂತ ಜನರು ಒಂದು ದೇಶದ ಮಾನವ-ಬಂಡವಾಳದ ಅಭಿವೃದ್ಧಿಗೆ ಕೊಡುಗೆ ನೀಡುತ್ತಾರೆ. ಮತ್ತದು ಒಂದು ದೇಶದ ಬೆಳವಣಿಗೆಯ ಪ್ರಾಥಮಿಕ ಅಗತ್ಯವಾಗಿದೆ. ವಿಶ್ವಬ್ಯಾಂಕಿನ ಪ್ರಕಾರ ೨೦೧೫ರಲ್ಲಿ ಭಾರತವು ತನ್ನ ಒಟ್ಟಾರೆ ದೇಶಿಯ ಉತ್ಪನ್ನದ (ಜಿಡಿಪಿಯ)ಶೇ.೩.೮ರಷ್ಟನ್ನು ಮಾತ್ರ ಆರೋಗ್ಯ ಸೇವೆಗಳ ಮೇಲೆ ವೆಚ್ಚ ಮಾಡಿತ್ತು. ಆದರೆ ಆರೋಗ್ಯ ವೆಚ್ಚದ ಜಾಗತಿಕ ಸರಾಸರಿ ಶೇ.೯.೯ ಆಗಿದ್ದರೆ ಅಮೆರಿಕದಲ್ಲಿ ಈ ಪ್ರಮಾಣ ಶೇ.೧೬.೮ರಷ್ಟಿದೆ. ಭಾರತದ ಶೇ.೧೫ರಷ್ಟು ಜನರು ಮಾತ್ರ ಆರೋಗ್ಯ ವಿಮೆಯನ್ನು ಪಡೆದಿದ್ದಾರೆ ಮತ್ತು ದೇಶದಲ್ಲಿ ಶೇ.೯೪ರಷ್ಟು ವೆಚ್ಚವನ್ನು ಸ್ವಂತ ಕಿಸೆಯಿಂದಲೇ ಭರಿಸಲಾಗುತ್ತಿದೆ. ಹೀಗಾಗಿ ಯಾವುದಾದರೂ ಒಂದು ಅನಿರೀಕ್ಷಿತ ಆರೋಗ್ಯ ಸಂಬಂಧೀ ವೆಚ್ಚಗಳು ಇಡೀ ಕುಟುಂಬವನ್ನು ಶಾಶ್ವತ ಸಾಲಗಾರರನ್ನಾಗಿ ಮಾಡಿಬಿಡುವ ಸಾಧ್ಯತೆಯನ್ನು ಹೊಂದಿವೆ. ಬಡವರಿಗೆ ಆರೋಗ್ಯ ವಿಮೆಯನ್ನು ದೊರಕಿಸುವುದರಿಂದ ಕೇವಲ ವ್ಯಕ್ತಿಗಳ ಆರೋಗ್ಯ ಸುಧಾರಣೆಯಾಗುವುದು ಮಾತ್ರವಲ್ಲದೆ ಆ ಕುಟುಂಬಗಳನ್ನು ಬಡತನದ ವಿಷ ವರ್ತುಲದಿಂದ ಹೊರತರುವಂಥಾ ಇತರ ದೊಡ್ಡ ಸಕಾರಾತ್ಮಕ ಪರಿಣಾಮಗಳಿಗೂ ಕಾರಣವಾಗಬಹುದು.

ಈ ಹಿನ್ನೆಲೆಯಲ್ಲಿ ಮೋದಿಕೇರ್ ಎಂದು ಕರೆಯಲ್ಪಡುವ ಆಯುಷ್ಮಾನ್ ಭಾರತ್- ರಾಷ್ಟ್ರೀಯ ಆರೋಗ್ಯ ರಕ್ಷಣಾ ಆಂದೋಲನವು (ಎಬಿ-ಎನ್‌ಎಚ್‌ಪಿಎಮ್) ಬಹುದೊಡ್ಡ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಈ ಎಬಿ-ಎನ್‌ಎಚ್‌ಪಿಎಮ್ ಯೋಜನೆಯನ್ವಯ ಸಾಮಾಜಿಕ-ಆರ್ಥಿಕ ಜಾತಿ ಸೆನ್ಸಸ್ ನೀಡಿರುವ ದತ್ತಾಂಶಗಳನ್ನು ಆಧರಿಸಿ ಗುರುತಿಸಲಾಗಿರುವ ದೇಶದ ೧೦ ಕೋಟಿ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ ೫ ಲಕ್ಷ ರೂ.ಗಳಷ್ಟು ಆರೋಗ್ಯ ವಿಮೆಯನ್ನು ಒದಗಿಸಲಾಗುವುದೆಂದು ಘೋಷಿಸಲಾಗಿದೆ. ಈ ಹಿಂದಿನ ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆಗಿಂದ ಭಿನ್ನವಾಗಿ ಈ ಎಬಿ-ಎನ್‌ಎಚ್‌ಪಿಎಮ್ ಯೋಜನೆಯಡಿ ಸರ್ಕಾರಿ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ಪ್ರಾಥಮಿಕ ಆರೋಗ್ಯ ಸೇವೆಯನ್ನೂ ಸಹ ಒದಗಿಸಲಾಗುವುದು. ಹಾಗೂ ಈ ಯೋಜನೆಯಡಿ ಈ ಹಿಂದೆ ಇದ್ದ ವಿಮಾ ಮೊತ್ತವನ್ನು ೩೦,೦೦೦ ರೂ.ಯಿಂದ ೫ ಲಕ್ಷಕ್ಕೆ ಏರಿಸಲಾಗಿದೆ. ಹಾಗೂ ಆಂಧ್ರಪ್ರದೇಶದ ರಾಜೀವ್ ಆರೋಗ್ಯಶ್ರೀ ಆರೋಗ್ಯ ವಿಮಾ ಯೋಜನೆಯ ಮಾದರಿಯಲ್ಲಿ ಇಡೀ ಪ್ರಕ್ರಿಯೆಯನ್ನು ಡಿಜಿಟೀಕರಣಗೊಳಿಸಲಾಗುವುದು. ಮತ್ತು ಈ ಯೋಜನೆಯಡಿಯಲ್ಲಿ ದೇಶದ ಶೇ.೪೦ರಷ್ಟು ಜನತೆಯನ್ನು ಈ ಯೋಜನೆಯ ಫಲಾನುಭವಿಗಳನ್ನಾಗಿಸುವ ಉದ್ದೇಶವನ್ನು ಸರ್ಕಾರ ವ್ಯಕ್ತಪಡಿಸಿದೆ.

ಆದರೆ ಈ ಯೋಜನೆಯನ್ನು ದೀರ್ಘಾವಧಿಯವರೆಗೆ ಹೇಗೆ ಬಾಳಿಕೆ ಬರುವಂತೆ ಮಾಡಬಹುದೆನ್ನುವುದೇ ಈ ಯೋಜನೆಯಲ್ಲಿರುವ ಅತಿದೊಡ್ಡ ತೊಡಕಾಗಿದೆ. ಸರ್ಕಾರದ ಪ್ರಕಾರ ಸರ್ಕಾರದ ಕಲ್ಯಾಣ ಯೋಜನೆಗಳ ಫಲಾನುಭವಿಗಳಿಗೆ ನೇರ ನಗದು ಹಸ್ತಾಂತರ ಮಾಡುವ ಮೂಲಕ ಉಳಿತಾಯವಾಗಿರುವ ೯೦,೦೦೦ ಕೋಟಿ ರೂಪಾಯಿಗಳನ್ನು ಈ ಯೋಜನೆಗೆ ಒದಗಿಸುವ ಮೂಲಕ ಅಗತ್ಯವಿರುವ ಸಂಪನ್ಮೂಲವನ್ನು ಕ್ರೂಢೀಕರಿಸಬಹುದಾಗಿದೆ. ಆದರೆ ದೇಶದ ಬಜೆಟ್ಟಿನ ವಿತ್ತೀಯ ಲೆಕ್ಕಾಚಾರಗಳಲ್ಲಿ ಈಗಾಗಲೇ ಈ ಉಳಿತಾಯದ ಮೊತ್ತವನ್ನು ಒಳಗೊಂಡಾಗಿದೆ. ಅಷ್ಟೇ ಅಲ್ಲದೆ ಈ ಯೋಜನೆಗೆ ತಗಲುವ ವೆಚ್ಚದ ಶೇ.೪೦ರಷ್ಟು ಮೊತ್ತವನ್ನು ರಾಜ್ಯ ಸರ್ಕಾರಗಳೇ ಭರಿಸಬೇಕಿದೆ. ಇದು ರಾಜ್ಯ ಸರ್ಕಾರಗಳ ಮೇಲೆ ಹೆಚ್ಚುವರಿ ವಿತ್ತೀಯ ಹೊರೆಯನ್ನು ಹಾಕುವುದರಿಂದ ಅವು ಹೆಚ್ಚುವರಿ ಸಂಪನ್ಮೂಲವನ್ನು ಒದಗಿಸುವಂತೆ ಕೇಂದ್ರ ಸರ್ಕಾರವನ್ನೇ ಕೇಳಬಹುದು. ಅದರಲ್ಲೂ ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನಸಂಖ್ಯೆಯನ್ನು ಹೊಂದಿರುವ ಬಡರಾಜ್ಯಗಳಿಗೆ ಇದು ಹೆಚ್ಚಿನ ಸಮಸ್ಯೆಯನ್ನೇ ಉಂಟುಮಾಡಲಿದೆ. ಹೀಗಾಗಿ ಈ ಯೋಜನೆಯು ಬಡರಾಜ್ಯಗಳಿಗೆ ಇನ್ನಷ್ಟು ಹೊರೆ ಮತ್ತು ಸಂಕಟವನ್ನು ತಂಡಿಡಲಿದೆ.

ಇದಲ್ಲದೆ ಆರೋಗ್ಯ ಸೇವೆಗಳಿಗೆ ಸಂಬಂಧಪಟ್ಟಂತೆ ಅಸ್ಥಿತ್ವದಲ್ಲಿರುವ ಮೂಲಭೂತ ಸೌಕರ್ಯಗಳ ಸ್ಥಿಗತಿಗಳೂ ಸಹ ದೊಡ್ಡ ಸಮಸ್ಯೆಯನ್ನು ಹುಟ್ಟುಹಾಕಲಿದೆ. ಈ ಸಮಸ್ಯೆ ವಿಶೇಷವಾಗಿ ನಗರ ಕೇಂದ್ರಗಳಿಂದ ದೂರವಿರುವ ಪ್ರದೇಶದಲ್ಲಿ ಹೆಚ್ಚು ಮಹತ್ವವನ್ನು ಪಡೆಯುತ್ತದೆ. ದೇಶದ ಶೇ.೮೦ರಷ್ಟು ವೈದ್ಯರು ಮತ್ತು ಶೇ.೭೫ರಷ್ಟು ಚಿಕಿತ್ಸಾಲಯಗಳು ನಗರ ಭಾರತದಲ್ಲಿದ್ದು ದೇಶದ ಶೇ.೨೮ರಷ್ಟು ಜನಸಂಖ್ಯೆಗೆ ಮಾತ್ರ ಆರೋಗ್ಯ ಸೇವೆ ಒದಗಿಸುತ್ತಿವೆ. ಇದರಿಂದಾಗಿ ಉಳಿದ ಭಾರತದಲ್ಲಿ ಮೂಲಭೂತ ಆರೋಗ್ಯ ಸೌಕರ್ಯಗಳ ತೀವ್ರವಾದ ಅಗತ್ಯವಿದೆ. ಭಾರತದ ಆಸ್ಪತ್ರೆಗಳಲ್ಲಿ ೧೦೦೦ ಜನಸಂಖ್ಯೆಗೆ ಒಂದು ಹಾಸಿಗೆ ಲಭ್ಯವಿದ್ದರೆ ಅಭಿವೃದ್ಧಿಹೊಂದಿದ ದೇಶಗಳಲ್ಲಿ ಇದು ಶೇ.೬.೫ ರಷ್ಟಿದೆ. ಭಾರತದಲ್ಲಿ ೧೦೦೦ ಜನರಿಗೆ  ೦.೬ರಷ್ಟು ವೈದ್ಯರು ಲಭ್ಯವಿದ್ದರೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ೩ ವೈದ್ಯರು ಲಭ್ಯವಿದ್ದಾರೆ. ಭಾರತದಲ್ಲಿ ಶೇ.೩೭ರಷ್ಟು ಜನರು ಮಾತ್ರ ವಾಸಸ್ಥಳದ ೫ ಕಿ.ಮೀ ಒಳಗೆ ಆಸ್ಪತೆಯಲ್ಲಿ ಒಳರೋಗಿಗಳಾಗಿ ಆರೋಗ್ಯ ಸೇವೆ ಪಡೆದುಕೊಳ್ಳುವ ಸೌಲಭ್ಯವನ್ನು ಪಡೆದಿದ್ದರೆ ಕೇವಲ ಶೇ.೬೮ರಷ್ಟು ಜನರಿಗೆ ಮಾತ್ರ ೫ ಕಿಮೀ ಒಳಗೆ ಹೊರರೋಗಿಗಳಾಗಿ ಆರೋಗ್ಯ ಸೇವೆ ಪಡೆದುಕೊಳ್ಳುವ ಸೌಕರ್ಯವಿದೆ. ವಿಶ್ವಬ್ಯಾಂಕಿನ ಪ್ರಕಾರ ೨೦೧೫ರ ವೇಳೆಗೂ ಭಾರತದ ಶೇ.೧೫ರಷ್ಟು ಮಕ್ಕಳು ವ್ಯಾಕ್ಸಿನ್ ಸೌಲಭ್ಯವನ್ನು ದಕ್ಕಿಸಿಕೊಳ್ಳುವ ಪರಿಸ್ಥಿಯಲ್ಲಿರಲಿಲ್ಲ.

ಸರ್ಕಾರಿ ಆರೋಗ್ಯ ಸೇವೆಗಳ ಇಲ್ಲದಿರುವ ಪರಿಸ್ಥಿತಿಯು ಖಾಸಗಿ ಕ್ಷೇತ್ರದ ಮೇಲೆ ಅವಲಂಬನೆಯಾಗುವುದನ್ನು ಅನಿವಾರ್ಯಗೊಳಿಸುತ್ತದೆ. ಎಲ್ಲೆಲ್ಲಿ ಸಾರ್ವಜನಿಕ ಆರೋಗ್ಯ ಸೇವೆಯು ಅಭಿವೃದ್ಧಿಗೊಂಡಿದೆಯೋ ಅಲ್ಲೆಲ್ಲಾ ಖಾಸಗಿ ಆರೋಗ್ಯ ಸೇವೆಯ ದರಗಳು ಅಗ್ಗವಾಗಿಯೇ ಇರುತ್ತದೆಂಬುದು ಈಗ ಸರ್ವವಿದಿತವಾದ ಸಂಗತಿಯಾಗಿದೆ. ಉದಾಹರಣೆಗೆ ತಮಿಳುನಾಡಿನಲ್ಲಿ ಖಾಸಗಿ ಆಸ್ಪತ್ರೆಗಳು ಸರ್ಕಾರಿ ಆಸ್ಪತ್ರೆಗಳೊಂದಿಗೆ ಪೈಪೋಟಿ ನಡೆಸಬೇಕಾದ ಪರಿಸ್ಥಿಯಲ್ಲಿದ್ದು ಖಾಸಗಿ ಆಸ್ಪತ್ರೆಗಳು ನೀಡುವ ಸೇವೆಯ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಅವುಗಳ ದರವು ಅಗ್ಗವಾಗಿಯೇ ಇವೆ. ಇದಕ್ಕೆ ತದ್ವಿರುದ್ಧವಾಗಿ ಉತ್ತರದ ರಾಜ್ಯಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿನ ಆರೋಗ್ಯ ಸೇವಾದರಗಳು ಗಗನವನ್ನು ಮುಟ್ಟುತ್ತಿರುತ್ತವೆ. ಇದರ ಜೊತೆಗೆ ಅಂಥಾ ಆಸ್ಪತ್ರೆಗಳಲ್ಲಿ ನಡೆಯುವ ದುರ್ವ್ಯವಹಾರಗಳನ್ನು ಗಮನಿಸಿ ನಿಗ್ರಹಿಸಬಲ್ಲಂಥ ವಿಶ್ವಾಸಾರ್ಹ ಉಸ್ತುವಾರಿ ಸಂಸ್ಥೆಗಳು ಅಸ್ಥಿತ್ವದಲ್ಲಿಲ್ಲ. ಅಂಥಾ ದುರ್ವ್ಯವಹಾರಗಳನ್ನು ತಡೆಗಟ್ಟದಿದ್ದರೆ ಇಡೀ ವಿಮಾ ಹಣವು ಒಂದೇ ಏಟಿಗೆ ಮಾಯವಾಗಿಬಿಡಬಲ್ಲದು. ಉದಾಹರಣೆಗೆ ಮಾರಣಾಂತಿಕ ಸ್ಥಿತಿಯಲ್ಲಿರುವ ರೋಗಿಯ ಮೇಲೆ ಅನಗತ್ಯವಾಗಿ ಹಲವು ಶಸ್ತ್ರ ಚಿಕಿತ್ಸೆಗಳನ್ನು ನಡೆಸಬಹುದು. ಆ ರೋಗಿಯೂ ಹೇಗಿದ್ದರೂ ಸಾಯುತ್ತಾರೆ. ಆದರೆ ಆ ರೋಗಿಯ ಕುಟುಂಬಗಳು  ಆರೋಗ್ಯ ವಿಮೆ ಇಲ್ಲದ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿ ಖಾಸಗಿ ಸೂಪರ್ ಸ್ಪೆಷಾಲಿಟಿ ಅಸ್ಪತ್ರೆಗಳಲ್ಲಿ ಪಡೆದ ಚಿಕಿತ್ಸೆಯ ವೆಚ್ಚದಿಂದ ಇನ್ನೂ ದೊಡ್ಡ  ಸಾಲದ ಕೂಪಕ್ಕೆ ದೂಡಲ್ಪಡುತ್ತಾರೆ.

ಅದೇ ಸಮಯದಲ್ಲಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೈದ್ಯರ ನಡವಳಿಕೆಗಳ ಮೇಲೂ ಉಸ್ತುವಾರಿ ಇಡುವ ಅಗತ್ಯವಿದೆ. ಖಾಸಗಿ ಚಿಕಿತ್ಸಾಲಯವನ್ನು ನಡೆಸುವುದು ಹೆಚ್ಚು ಲಾಭಕಾರಿಯಾಗಿರುವುದರಿಂದ ಸರ್ಕಾರಿ ವೈದ್ಯರು ಪರ್ಯಾಯವಾದ ಖಾಸಗಿ ಚಿಕಿತ್ಸಾಲಯವನ್ನು ನಡೆಸುವುದು ಎಲ್ಲರೂ ಬಲ್ಲ ಸಂಗತಿಯೇ. ಆರೋಗ್ಯ ವಿಮೆಯು ಖಾಸಗಿ ಸಂಸ್ಥೆಗಳನ್ನು ತನ್ನ ತೆಕ್ಕೆಯಲ್ಲಿರಿಸಿಕೊಂಡಿರುವುದರಿಂದ ಅದು ಸರ್ಕಾರಿ ವೈದ್ಯರುಗಳು ಖಾಸಗಿ ವೃತ್ತಿ ನಡೆಸಲು ಅಥವಾ ಖಾಸಗಿ ನರ್ಸಿಂಗ್ ಹೋಮನ್ನೇ ತೆರೆಯಲು ಉತ್ತೇಜನವನ್ನು ಕೊಡಬಹುದು.

ಈ ಯೋಜನೆಯ ಫಲಾನುಭವಿಗಳು ನೈತಿಕ ಅವಘಡದ ಶಿಕಾರಿಗಳು ಆಗಬಹುದು. ತಾವೀಗ ದುಬಾರಿ ಖಾಸಗಿ ಆಸ್ಪತ್ರೆಗಳಲ್ಲೂ ವೈದ್ಯಕೀಯ ಸೇವೆ ಪಡೆದುಕೊಳ್ಳಬಹುದು ಎಂಬ ಮನೋಭಾವದಿಂದ ಜನರು ಸಣ್ಣಪುಟ್ಟ ತೊಂದರೆಗಳಿಗೂ ಖಾಸಗಿ ಆಸ್ಪತ್ರೆಗಳ ಎಡತಾಕಬಹುದು. ಇದು ಜನರನ್ನು ಹೆಚ್ಚು ಉಳಿತಾಯ ಮಾಡುವಂತೆ ಉತ್ತೇಜಿಸುವ ಬದಲು ಸಿಗರೇಟ್ ಮತ್ತು ತಂಬಾಕುಗಳಂಥ ಅಪಾಯಕಾರಿ ವಸ್ತುಗಳ ಮೇಲೆ ಹೆಚ್ಚೆಚ್ಚು ವೆಚ್ಚ ಮಾಡುವಂತೆ ಪ್ರಚೋದಿಸಬಹುದು. ಈ ಎಲ್ಲಾ ಅಂಶಗಳ ಮೇಲೆ ನಿಗಾ ಇಡಬಹುದಾದ ಒಂದು ಉಸ್ತುವಾರಿ ಸಂಸ್ಥೆಯ ಅಗತ್ಯವಿದೆ. ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಿರುವ ಸಂಸ್ಥೆಗಳಿಗೆ ಈ ಸಂಭವನೀಯ ಸಮಸ್ಯೆಗಳ ಬಗ್ಗೆ ಅರಿವಿದೆಯೇ ಮತ್ತು ಅವುಗಳನ್ನು ತಡೆಗಟ್ಟಲು ಯಾವುದೇ ಕ್ರಮಗಳನ್ನು ತೆಗೆದುಕೊಂಡಿದ್ದಾರೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ.

ಹೀಗಾಗಿ ಈ ಎಬಿ-ಎನ್‌ಎಚ್‌ಪಿಎಮ್ ಯೋಜನೆಗೆ ಸಾಕಷ್ಟು ಸಾಧ್ಯತೆಗಳಿದ್ದರೂ ಅದನ್ನು ಎಚ್ಚರಿಕೆಯಿಂದ ಜಾರಿ ಮಾಡದಿದ್ದರೆ ದೊಡ್ಡ ಅನಾಹುತವನ್ನೇ ಮಾಡಬಹುದಾದ ಸಂಭವವೂ ಇದೆ. ಯೋಜನೆ ಮತ್ತು ನೀತಿಗಳನ್ನು ರೂಪಿಸುವವರು ಇವೆಲ್ಲವನ್ನೂ ಗಮನದಲ್ಲಿಟ್ಟುಕೊಳ್ಳುವುದು ಉಚಿತ. ಅಷ್ಟು ಮಾತ್ರವಲ್ಲದೆ ಈ ಯೋಜನೆಯ ವಿವಿಧ ಆಯಾಮಗಳ ಬಗ್ಗೆ ಸರಿಯಾದ ವಿಶ್ಲೇಷಣೆ ಮಾಡಲು ಇನ್ನೂ ಉತ್ತಮವಾದ ಮಾಹಿತಿ ಮತು ದತ್ತಾಂಶಗಳ ಅಗತ್ಯವೂ ಇದೆ.

ಕೃಪೆ: Economic and Political Weekly

ಅನು: ಶಿವಸುಂದರ್

Leave a Reply

Your email address will not be published.

Social Media Auto Publish Powered By : XYZScripts.com