ಹಿಂದೂ ಹಾಗು ಕ್ರೈಸ್ತ ಸಂಪ್ರದಾಯದಂತೆ ಪ್ರಿಯಾಂಕಾ ಚೋಪ್ರಾ ನಿಕ್ ಜೋನ್ಸ್ ಮದುವೆ..

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮದುವೆಯ ಸದ್ದು ತಣ್ಣಗಾಗುತ್ತಿದ್ದಂತೆ ಈಗ ಮತ್ತೊಂದು ಬಾಲಿವುಡ್ ನಟಿಯ ಮದುವೆಯ ಸುದ್ದಿ ಸದ್ದು ಮಾಡಲಾರಂಭಿಸಿದೆ. ಇದೀಗ ಪ್ರಿಯಾಂಕಾ ಸರದಿ. ಈಗ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಮತ್ತು ಅಂತಾರಾಷ್ಟ್ರೀಯ ಮ್ಯೂಸಿಕ್ ಸೆನ್‍ಸೇಷನ್ ನಿಕ್ ಜೋನ್ಸ್ ವಿವಾಹಕ್ಕೆ ರಾಜಸ್ಥಾನದ ಜೋಧಪುರ ಸಜ್ಜಾಗಿದೆ.

ಸದ್ಯ ತಾಯಿ ಮಧು ಚೋಪ್ರಾ ಜೊತೆ ಪ್ಯಾರಿಸ್‌ನಲ್ಲಿ ಮದುವೆ ಶಾಪಿಂಗ್‍ನಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕಾ, ಆ ಬಿಡುವಿನ ನಡುವೆಯೇ ತಮ್ಮ ಮದುವೆಯ ಆಮಂತ್ರಣವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಅಭಿಮಾನಿಗಳನ್ನು ಖುಷಿಪಡಿಸಿದ್ದಾರೆ. ವಿಶೇಷ ಎಂದರೆ ಬಾಕ್ಸ್ ನಂತಹ ಈ ಮದುವೆ ಕಾರ್ಡ್ ಒಳಗೆ ಅವರು ಲಾಡು ಬದಲು ಮಕರೂನ್(ಬಿಸ್ಕತ್‍ನಂಥ ಸಿಹಿ) ಇರಿಸಿದ್ದಾರೆ.

ಈಗ ನಿಕ್‍ಯಾಂಕಾ ವಿವಾಹ ಕೂಡ ಹಿಂದೂ ಮತ್ತು ಕ್ರಿಶ್ಚಿಯನ್‍ ಶೈಲಿಯಲ್ಲಿ ನಡೆಯುತ್ತಿರುವುದು ವಿಶೇಷ. ಡಿ.2 ರಂದು ಜೋಧಪುರದ ಉಮೈದ್ ಭವನದಲ್ಲಿ ಹಿಂದೂ ಶೈಲಿಯಲ್ಲಿ ಪಿಗ್ಗಿ-ನಿಕ್ ವಿವಾಹ ನೆರವೇರಲಿದೆ. ನಂತರ ಅಂದರೆ ಮರುದಿನ ಡಿ.3 ರಂದು ಈ ಜೋಡಿ ಕ್ರೈಸ್ತ ಸಂಪ್ರದಾಯದಂತೆ ಕಪಲ್‍ಗಳಾಗಲಿದ್ದಾರೆ.

ಹಿಂದೂ ಶೈಲಿಯ ವಿವಾಹಕ್ಕಾಗಿ ಅಬುಜಾನಿ-ಸಂದೀಪ್ ಕೋಸ್ಲಾ ವಿಶೇಷವಾಗಿ ವಿನ್ಯಾಸಗೊಳಿಸಿರುವ ವಸ್ತ್ರ ಧರಿಸಲಿದ್ದಾರೆ. ಕ್ರಿಶ್ಚಿಯನ್ ಸ್ಟೈಲ್ ಮ್ಯಾರೇಜ್‍ಗಾಗಿ ರಾಲ್ಫ್ ಲವ್ ಮ್ಯಾನ್ ಡಿಸೈನ್ ಮಾಡಿರುವ ದುಬಾರಿ ಗೌನ್ ಧರಿಸಲಿದ್ದಾರೆ.

ದೀಪಿಕಾ ಮತ್ತು ಪ್ರಿಯಾಂಕಾ ಪ್ರತಿಸ್ಪರ್ಧಿ ಎಂಬಂತೆ ಬಾಲಿವುಡ್‍ನಲ್ಲಿ ಬಿಂಬಿತವಾಗಿದ್ದು, ಉದ್ದೇಶಪೂರ್ವಕವೋ ಅಥವಾ ಕಾಕತಾಳೀಯವೋ ಎಂಬಂತೆ ಇಬ್ಬರ ಮಧ್ಯೆ ಎಲ್ಲದರಲ್ಲೂ ಸ್ಪರ್ಧೆ ನಡೆದುಕೊಂಡು ಬಂದಿದೆ. ಇದೀಗ ಮದುವೆ ವಿಷಯದಲ್ಲೂ ಹೆಚ್ಚೂ ಕಡಿಮೆ ಹಾಗೇ ಆಗುವ ಲಕ್ಷಣಗಳು ಗೋಚರಿಸಿವೆ.

Leave a Reply

Your email address will not be published.