ರಾಜ್ಯ ಸರ್ಕಾರದ ಮಹತ್ವದ ‘ಬಡವರು ಬಂಧು’ ಯೋಜನೆಗೆ ಸಿಎಂ ಚಾಲನೆ

ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವ ಮೈತ್ರಿ ಸರ್ಕಾರದ ಮಹತ್ವದ ‘ಬಡವರ ಬಂಧು’ ಯೋಜನೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಇಂದು ಚಾಲನೆ ನೀಡಿದ್ದಾರೆ. ಬೆಳಗ್ಗೆ 11 ಗಂಟೆಗೆ ನಗರದ ಯಶವಂತಪುರದ ಎಪಿಎಂಸಿ ಯಾರ್ಡ್ ನಲ್ಲಿ ಮುಖ್ಯಮಂತ್ರಿಗಳು ‘ಬಡವರ ಬಂಧು’ ಯೋಜನೆಗೆ ಚಾಲನೆ ನೀಡಿದರು. ಈ ಸಮಯದಲ್ಲಿ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್, ಶಾಸಕ ಗೋಪಾಲಯ್ಯ, ಮುನಿರತ್ನ, ಮೇಯರ್ ಗಂಗಾಂಬಿಕೆ ಉಪಸ್ಥಿತರಿದ್ದರು. ಬೆಂಗಳೂರು ನಗರವೊಂದರಲ್ಲೇ ಮೊದಲ ದಿನವೇ 53 ಸಾವಿರ ವರ್ತಕರಿಗೆ ನೆರವು ನೀಡಲಾಗುವುದು. ಈಗಾಗಲೇ ರಾಜ್ಯಾದ್ಯಂತ ಬಡವರ ಬಂಧು ಯೋಜನೆಯಡಿ ಸಾಲಕ್ಕಾಗಿ ಭಾರಿ ಬೇಡಿಕೆ ಬಂದಿದೆ. ಈ ಯೋಜನೆಯಿಂದ ಖಾಸಗಿ ಲೇವಾದೇವಿದಾರರ ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಬೀಳುವ ಉದ್ದೇಶ ಇದೆ.

ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಬಡವರ ಬಂಧು ಯೋಜನೆಗೆ ಒಂದೊಂದು ನೋಡಲ್ ಬ್ಯಾಂಕ್ ಗುರುತಿಸಲಾಗಿದೆ. ಈ ಬ್ಯಾಂಕುಗಳು ಆಯಾ ಜಿಲ್ಲೆಗಳಲ್ಲಿನ ಸಾಲ ಸೌಲಭ್ಯದ ಬ್ಯಾಂಕ್‍ಗಳನ್ನು ಸೂಚಿಸುತ್ತವೆ. ಬೆಂಗಳೂರಿನಲ್ಲಿ ಸಿಟಿ ಕೋ-ಆಪರೇಟಿವ್ ಬ್ಯಾಂಕ್, ಜನತಾ ಕೋ-ಆಪರೇಟಿವ್ ಬ್ಯಾಂಕ್ ಹಾಗೂ ಬೆಂಗಳೂರು ಡಿಸಿಸಿ ಬ್ಯಾಂಕ್‍ಗಳನ್ನು ನೋಡಲ್ ಬ್ಯಾಂಕ್‍ಗಳಾಗಿ ಗುರುತಿಸಲಾಗಿದೆ. ಈ ಬ್ಯಾಂಕ್‍ಗಳು ಮೊಬೈಲ್ ಸರ್ವಿಸ್ ವ್ಯಾನ್‍ಗಳನ್ನು ಹೊಂದಲಿವೆ. ಸಣ್ಣ ವರ್ತಕರು ಬೆಳಗ್ಗೆ ಸಾಲ ಪಡೆದು ಸಂಜೆ ವಾಪಸ್ ಮಾಡಬಹುದಾಗಿದೆ.

ವರ್ತಕರಿಗೆ ಶೂನ್ಯ ಬಡ್ಡಿದರದಲ್ಲಿ 10 ಸಾವಿರ ರೂ.ವರೆಗೆ ಸಾಲ ನೀಡುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಮೀಟರ್ ಬಡ್ಡಿ ದಂಧೆಗೆ ಶಾಶ್ವತ ಪರಿಹಾರ ನೀಡುವ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ಬಡ್ಡಿ, ಸಾಲದ ಶೂಲಕ್ಕೆ ಸಿಲುಕಿರುವ ಜನರ ನೆರವಿಗೆ ಬರಲು ‘ಬಡವರ ಬಂಧು’ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಿಂದ ಬೀದಿ ಬದಿ ವ್ಯಾಪಾರಿಗಳಿಗೆ ಇನ್ನು ಮುಂದೆ ಬಡ್ಡಿಯೇ ಇಲ್ಲದ ದಿನದ ಸಾಲ ಲಭ್ಯವಾಗಲಿದೆ. ಬೀದಿಬದಿ, ತಳ್ಳುಗಾಡಿ, ತರಕಾರಿ ವ್ಯಾಪಾರಿಗಳು ಈ ಯೋಜನೆ ಲಾಭ ಪಡೆಯಲಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com