ಚುನಾವಣೆಗಿನ್ನು ಸ್ಪರ್ಧಿಸಲ್ಲ ಎಂದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್

ಬಿಜೆಪಿಯ ಹಿರಿಯ ನಾಯಕಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. 9 ಬಾರಿ ಸಂಸತ್ ಸದಸ್ಯರಾಗಿರುವ ಸುಷ್ಮಾ ಆರೋಗ್ಯದ ಕಾರಣದಿಂದಾಗಿ ಇನ್ನು ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ.
ಚುನಾವಣೆ ಸ್ಪರ್ಧೆ ಬಗ್ಗೆ ಪಕ್ಷ ನಿರ್ಧರಿಸುತ್ತದೆ, ಆದರೆ ನಾನು ಸ್ಪರ್ಧಿಸದೇ ಇರಲು ಮನಸ್ಸು ಮಾಡಿದ್ದೇನೆ. ಈ ಕುರಿತು ಪಕ್ಷಕ್ಕೂ ಮಾಹಿತಿ ನೀಡಿದ್ದೇನೆ ಎಂದು 66 ವರ್ಷದ ಸುಷ್ಮಾ ಮಧ್ಯಪ್ರದೇಶದ ಇಂದೋರ್‌ನಲ್ಲಿ ಸುದ್ದಿಗಾರರಿಗೆ ಹೇಳಿದರು. ಸುಷ್ಮಾ ಅವರು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದು, ದೀರ್ಘ ಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದೇ ವೇಳೆ, ತಾವು ಸಕ್ರಿಯ ರಾಜಕಾರಣದಿಂದ ದೂರ ಸರಿಯುತ್ತಿಲ್ಲ, ಕೇವಲ ಚುನಾವಣಾ ರಾಜಕೀಯದಿಂದಷ್ಟೇ ನಿವೃತ್ತಿಯಾಗುತ್ತಿದ್ದೇ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ. ಸುಷ್ಮಾ ಅವರು ಮಧ್ಯಪ್ರದೇಶದ ವಿದಿಶಾ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಆದರೆ ಮಧ್ಯಪ್ರದೇಶದ ಚುನಾವಣಾ ಪ್ರಚಾರದಲ್ಲಿ ಅವರು ಸಕ್ರಿಯರಾಗಿ ಭಾಗವಹಿಸಿರಲಿಲ್ಲ. ಈ ಕುರಿತು ಮಾಧ್ಯಮಗಳಲ್ಲಿ ಹಾಗೂ ಜನರಲ್ಲಿ ಪ್ರಶ್ನೆ ಎದ್ದಿತ್ತು.
ಈ ಮಧ್ಯೆ ಸುಷ್ಮಾ ಅವರ ಪತಿ ಸ್ವರಾಜ್ ಕೌಶಲ್ ಅವರು ತಮ್ಮ ಪತ್ನಿಯ ಚುನಾವಣಾ ನಿವೃತ್ತಿ ನಿರ್ಧಾರವನ್ನು ಟ್ವಿಟರ್‌ನಲ್ಲಿ ಸ್ವಾಗತಿಸಿದ್ದಾರೆ. ‘ಮೇಡಮ್, ಚುನಾವಣೆಯಲ್ಲಿ ಸ್ಪರ್ಧಿಸದಿರುವ ನಿಮ್ಮ ಈ ನಿರ್ಧಾರಕ್ಕಾಗಿ ಧನ್ಯವಾದ. ಮಿಲ್ಖಾ ಸಿಂಗ್ ಅವರಿಗೂ ಓಟ ನಿಲ್ಲಿಸುವಂತಹ ಕಾಲ ಬಂದಿತ್ತು’ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com