ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ : ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಆದೇಶ

ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್‌, ಧೂಮಪಾನದಿಂದ ಅಕ್ಕಪಕ್ಕದವರ ಆರೋಗ್ಯದ ಮೇಲೆ ಪರಿಣಾಮ ಹೆಚ್ಚಾಗುತ್ತಿದೆ, ಹೀಗಾಗಿ ಕರ್ನಾಟಕ ಧೂಮಪಾನ ನಿಷೇಧ ಹಾಗೂ ಧೂಮಪಾನಿಗಳಲ್ಲದವರ ಆರೊಗ್ಯ ರಕ್ಷಣೆ ಕಾಯ್ದೆ 2001 ರ ಪ್ರಕಾರ ಧೂಮಪಾನಕ್ಕೆ ನಿಷೇಧ ಹೇರಿ ಕಾನೂನು ಜಾರಿಗೊಳಿಸಲಾಗಿದೆ. ಒಂದು ವೇಳೆ ನಿಯಮವನ್ನು ಉಲ್ಲಂಘಿಸಿದರೆ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದಿದ್ದಾರೆ. ಇದನ್ನು ಹೊಟೇಲ್‌, ಬಾರ್‌, ರೆಸ್ಟೊರೆಂಟ್‌, ಕ್ಲಬ್‌ ಹಾಗೂ ಪಬ್‌ಗಳಲ್ಲಿ ಸಂಪೂರ್ಣ ಧೂಮಪಾನ ನಿಷೇಧಿಸಲು ಮುಂದಾಗಿರುವ ರಾಜ್ಯ ಸರ್ಕಾರ ನಡೆಯನ್ನು ವೈದ್ಯರು, ಹೋಟೆಲ್‌ ಉದ್ಯಮ ವಲಯ ಸೇರಿದಂತೆ ನಗರದ ಸಾರ್ವಜನಿಕರು ಸ್ವಾಗತಿಸಿದ್ದಾರೆ.

ಕ್ಯಾನ್ಸರ್‌ ಪ್ರಮಾಣ ಕುಗ್ಗಿಸಲು ಉತ್ತಮ ನಡೆಯಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸಂಪೂರ್ಣವಾಗಿ ಧೂಮಪಾನ ನಿಷೇಧಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಕಿದ್ವಾಯಿ ಕ್ಯಾನ್ಸರ್‌ ಸಂಸ್ಥೆಯು ಮೆಚ್ಚುಗೆ ವ್ಯಕ್ತಪಡಿಸಿದೆ. ಶೇ.50 ರಷ್ಟು ಕ್ಯಾನ್ಸರ್‌ಗೆ ಧೂಮಪಾನವೇ ಮುಖ್ಯಕಾರಣ. ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನವರಲ್ಲಿಯೇ ಶ್ವಾಸಕೋಶ, ಗಂಟಲು, ಬಾಯಿ ಕ್ಯಾನ್ಸರ್‌ ಪ್ರಮಾಣ ಹೆಚ್ಚಾಗುತ್ತಿದೆ. 27 ವರ್ಷದ ಯುವಕರು ಶ್ವಾಸಕೋಶ ಕ್ಯಾನ್ಸರ್‌ಗೆ ತುತ್ತಾಗಿರುವ ಪ್ರಕರಣಗಳಿವೆ. ಧೂಮಪಾನದಿಂದ ಅಕ್ಕಪಕ್ಕದವರ ಆರೋಗ್ಯದ ಮೇಲೆ ಹಾನಿ ಹೆಚ್ಚಾಗುತ್ತಿದೆ. ಅದರಲ್ಲೂ ಪುರುಷರು ಮಾಡುವ ಧೂಮಪಾನದಿಂದ ಅವರ ಪತ್ನಿಗೆ ಬಾಯಿ ಹಾಗೂ ಶ್ವಾಸಕೋಶ ಕ್ಯಾನ್ಸರ್‌ ಬರುತ್ತಿದೆ. ಹೀಗಾಗಿ, ಧೂಮಪಾನ ನಿಷೇಧ ತೀರ್ಮಾನವನ್ನು ಕಿದ್ವಾಯಿ ಸಂಸ್ಥೆ ಸ್ವಾಗತಿಸುತ್ತದೆ. ಜತೆಗೆ ಗುಟ್ಕ ಮತ್ತು ತಂಬಾಕುನ್ನು ನಿಷೇಧ ಮಾಡಬೇಕು ಎಂದು ಒತ್ತಾಯಿಸಲಾಗುತ್ತಿದೆ.

ಬಾರ್‌ಗಳಲ್ಲಿ ಸಿಗರೇಟ್‌ ಮಾರಾಟಕ್ಕೆ ಅವಕಾಶವಿಲ್ಲ. ಆದರೆ, ನಮ್ಮ ಗ್ರಾಹಕರು ಹೊರಗಿನಿಂದ ತಂದು ಸೇದಿದರೆ ನಾವು ವಿರೋಧಿಸಿ ಗ್ರಾಹಕರೊಡನೆ ಜಗಳ ಮಾಡಲಾಗದು. ಏಕಾಏಕಿ ಧೂಮಪಾನ ನಿಷೇಧ ಮಾಡಿರುವುದರ ಹಿಂದಿನ ಉದ್ದೇಶ ಅರ್ಥವಾಗುತ್ತಿಲ್ಲ. ಒಂದು ಕಡೆ ಲಿಕ್ಕರ್‌ ಖರೀದಿ ಜಾಸ್ತಿ ಮಾಡಿ ಎಂದು ಒತ್ತಡ ಹಾಕುತ್ತಾರೆ. ಇನ್ನೊಂದೆಡೆ ಇಂತಹ ಕಾನೂನು ಜಾರಿ ಮಾಡುತ್ತಾರೆ. ಇದರ ಬದಲು ಸಿಗರೇಟ್‌ ಉತ್ಪಾದನೆ ಹಾಗೂ ಮಾರಾಟವನ್ನೇ ನಿಷೇಧಿಸಬಹುದಲ್ಲ ಎಂದು ರಾಜ್ಯ ಮದ್ಯಮಾರಾಟಗಾರರ ಒಕ್ಕೂಟ ಅಭಿಪ್ರಾಯಪಟ್ಟಿದೆ.

Leave a Reply

Your email address will not be published.