ವಾಕ್ಮನ್ ಆಫ್ ಇಂಡಿಯಾ: ಪರಿಸರ ಜಾಗೃತಿಗೆ 3,800 ಕಿ.ಮೀ. ಕಾಲ್ನಡಿಗೆ..!

11 ರಾಜ್ಯಗಳನ್ನ ದಾಟಿ, 3,800 ಕಿಲೋ ಮೀಟರ್ ಅಂದರೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ, 260 ದಿನಗಳ ಕಾಲ ನಡೆದು ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಸಿಂಗಾಪುರದ 30 ವರ್ಷ ವಯಸ್ಸಿನ ಸುರೇಶ್ ಡೇನಿಯಲ್ ಆಯ್ಕೆ ಮಾಡಿಕೊಂಡಿದ್ದು ಕಾಲ್ನಡಿಗೆಯನ್ನ. ದೆಹಲಿ ಅಧಿಕಾರಿಗಳು ವಸತಿ ಅಭಿವೃದ್ಧಿಗಾಗಿ 16,500 ಮರಗಳನ್ನು ಕಡಿತಗೊಳಿಸಲು ಯೋಜಿಸುತ್ತಿದ್ದ ಭಾರತದ ಘಟನೆಯ ಬಗ್ಗೆ ಸಿಂಗಪುರದಲ್ಲಿ  ಡೇನಿಯಲ್ ಕೇಳಿದ್ದರು. ಈ ಸುದ್ದಿ ಸುರೇಶ್ ಡೇನಿಯಲ್ ಮೇಲೆ ಆಳವಾದ ಪ್ರಭಾವ ಬೀರಿತು. ಹೀಗಾಗಿ ಈ ಕಾಲ್ನೆಡಿಗೆ ಜಾಗೃತಿ ಕಾರ್ಯ ಮಾಡಲು ನಿರ್ಧರಿಸಿದರು. ಮೊದಲಿಗೆ ಇವರು ಕೆಲವು ತಿಂಗಳುಗಳಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ತಯಾರಿಯನ್ನ ಮಾಡಿಕೊಂಡರು. ಜೊತೆಗೆ ಅವರು ಜನರೊಂದಿಗೆ ಹೇಗೆ ಸಂಪರ್ಕ ಸಾಧಿಸಬಹುದು ಎಂಬುದರ ಕುರಿತು ಅನೇಕ ಸಂಶೋಧಕರಿಂದ ಸಲಹೆಗಳನ್ನು ತೆಗೆದುಕೊಂಡರು.

ಜುಲೈ 27, 2018 ರಂದು ಪರಿಸರ ಜಾಗೃತಿ ಕುರಿತ ಇವರ ಕಾಲ್ನಡಿಗೆ  ಪ್ರಾರಂಭವಾಗಿದೆ.  ಈಗಾಗಲೇ ಇವರು ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳ ಮೂಲಕ ನಡೆದಿದ್ದಾರೆ. ಮೊದಲಿಗೆ ದಿನಕ್ಕೆ 5 ರಿಂದ 10 ಕಿಲೋ ಮೀಟರ್ ವರೆಗೆ ನಡೆದ ಇವರು ಕ್ರಮೇಣ ನಡಿಗೆಯನ್ನು ಪ್ರತಿದಿನ 20-25 ಕಿಲೋ ಮೀಟರ್ ವರೆಗೆ ಸುಧಾರಿಸಿಕೊಂಡಿದ್ದಾರೆ.

ಭಾರತದಲ್ಲಿ ಮರಗಳನ್ನು ಉಳಿಸಿ ಬೆಳೆಸುವ ಮತ್ತು ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ತನ್ನ ಕಲ್ಪನೆಯನ್ನು ರೂಪಿಸಲು ಅವರು ಸ್ವಚ್ ಭಾರತ್ ಅಭಿಯಾನ್ ತಂಡದೊಂದಿಗೆ ಸಂಪರ್ಕ ಹೊಂದಿದ್ದರು. ಸ್ವಚ್ ಭಾರತ್ ತಂಡ ಈ ಕಲ್ಪನೆಯನ್ನು ಶ್ಲಾಘಿಸಿ, ಅವರನ್ನು ಪ್ರೋತ್ಸಾಹಿಸಿರುವುದಾಗಿ  ಡೇನಿಯಲ್ ಹೇಳುತ್ತಾರೆ. ಶಾಲೆಗಳು, ಪಂಚಾಯತ್ಗಳು, ರೈಲ್ವೆ ನಿಲ್ದಾಣಗಳು, ಪೊಲೀಸ್ ಠಾಣೆಗಳು, ಮತ್ತು ಇತರ ಸರ್ಕಾರಿ ಕಟ್ಟಡಗಳಲ್ಲಿ ವಸತಿ ವ್ಯವಸ್ಥೆ ಮಾಡುವ ಮೂಲಕ ಸಹ ತಂಡವು ಅವರಿಗೆ ಸಹಾಯ ಮಾಡುತ್ತಿದೆಯಂತೆ. ಇದ್ಯಾವುದು ಸಿಗದೇ ಇದ್ದಾಗ ಟೆಂಟ್ ನಲ್ಲಿ ಕಾಲ ಕಳೆಯುತ್ತೇನೆಂದು ಅವರು ತಿಳಿಸಿದ್ದಾರೆ.

ಅದಾಗ್ಯೂ ವಾಕಿಂಗ್ ಅವರ ಏಕೈಕ ಗುರಿ ಅಲ್ಲ. ಬದಲಿಗೆ ಅವರು ಹಾದುಹೋಗುವ ಹಳ್ಳಿಗಳಲ್ಲಿ ಕಾರ್ಯಾಗಾರಗಳನ್ನು ನಡೆಸುತ್ತಾರೆ, ನೆಟ್ಟ ಮರಗಳ ಪ್ರಯೋಜನಗಳ ಬಗ್ಗೆ ಮಾತನಾಡುತ್ತಾರೆ, ಶಾಲೆಗಳು ಮತ್ತು ಕಾಲೇಜುಗಳಲ್ಲಿನ ಪರಿಸರದ ಮೇಲೆ ಪ್ಲಾಸ್ಟಿಕ್ನ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.  ಜೊತೆಗೆ ಪ್ರತಿ ವಾರ ಕನಿಷ್ಠ ಎರಡು ಕಾರ್ಯಾಗಾರಗಳನ್ನು ಆಯೋಜಿಸಲು ನಾನು ಪ್ರಯತ್ನಿಸುತ್ತೇನೆ ಎಂದಿದ್ದಾರೆ. ಸ್ವಚ್ ಭಾರತ ಮಿಷನ್ ಹಾಗೂ ಸ್ನೇಹಿತರಿಂದ ಹಣದ ಸಹಾಯ ಪಡೆದ ಇವರು ಜನರಿಗೆ ಸಸಿಗಳನ್ನು ಕೊಡುವುದು, ಬೀಜಗಳನ್ನು ವಿತರಿಸುವ ಕಾರ್ಯ ಮಾಡುತ್ತಿದ್ದಾರೆ. ಜೊತೆಗೆ ಪ್ರತಿದಿನ 50-60 ಕ್ಕಿಂತ ಹೆಚ್ಚಿನ ಜನರೊಂದಿಗೆ ಸಂವಹನ ನಡೆಸುತ್ತಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಸದ್ಯ ಮಧ್ಯಪ್ರದೇಶದಲ್ಲಿರುವ  ಸುರೇಶ್ ಡೇನಿಯಲ್ ಕಾಶ್ಮೀರದಲ್ಲಿ ತಮ್ಮ  ಕಾಲ್ನಡಿಗೆ ಮುಕ್ತಾಯಗೊಳ್ಳಲಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com