ರಂಗೇರಿದ ರಾಜಸ್ಥಾನ ಕಣ : ವಸುಂಧರಾ ರಾಜೇ ವರ್ಸಸ್ ಮಾನ್ವೇಂದ್ರ ಸಿಂಗ್

ರಾಜಸ್ಥಾನದ ಚುನಾವಣಾ ಕಣ ರಂಗೇರಿದೆ. ಬಿಜೆಪಿ ಮುಖ್ಯಮಂತ್ರಿ ವಸುಂಧರಾ ರಾಜೇ ವಿರುದ್ಧ ಇತ್ತೀಚೆಗಷ್ಟೇ ಬಿಜೆಪಿ ತೊರೆದು ಬಂದ ಜಸ್ವಂತ್ ಸಿಂಗ್ ಪುತ್ರ ಮಾನ್ವೇಂದ್ರ ಸಿಂಗ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಹೀಗಾಗಿ ಸಿಎಂ ವಸುಂಧರಾ ಅವರ ಝಲ್ರಾಪಟನ್ ಕ್ಷೇತ್ರ ರಜಪೂತರಿಬ್ಬರ ಸ್ಟಾರ್‌ವಾರ್‌ಗೆ ಸಜ್ಜಾಗಿದೆ. ಶನಿವಾರ ಕಾಂಗ್ರೆಸ್ ಮಾನ್ವೇಂದ್ರ ಸಹಿತ 32 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸಿತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾನ್ವೇಂದ್ರ, ಕಾಂಗ್ರೆಸ್ ಸಮಿತಿ ಹಾಗೂ ರಾಹುಲ್‌ಜೀ ಅವರಿಗೆ ಧನ್ಯವಾದ. ನನಗೆ ಹೊರಿಸಿದ ಜವಾಬ್ದಾರಿಯಿಂದ ಸಂತುಷ್ಟಗೊಂಡಿದ್ದೇನೆ. ಅದನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ ಎಂದಿದ್ದಾರೆ.
ಕಾಂಗ್ರೆಸ್‌ಗೆ ಬೇರೆ ಯಾವುದೇ ಅಭ್ಯರ್ಥಿ ಸಿಗಲಿಲ್ಲ. ಹಾಗಾಗಿ ಮನ್ವೇಂದ್ರರನ್ನು ಇಲ್ಲಿಗೆ ಕಳುಹಿಸಿದೆ ಎಂದು ಕಾಂಗ್ರೆಸ್‌ನ ಈ ನಡೆಗೆ ವಸುಂಧರಾ ವ್ಯಂಗ್ಯವಾಡಿದ್ದಾರೆ.

ಸಿಎಂ ರಾಜೇ ಅವರು 2003ರಿಂದ ಸತತವಾಗಿ ಝಲ್ರಾಪಟನ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು 2013ರಲ್ಲಿ ಇಲ್ಲಿ ಒಟ್ಟಾರೆ ಮತಗಳ ಶೇ.63.14 ಪಡೆದು 60,896 ಮತಗಳ ಅಂತರದಿಂದ ಗೆದ್ದುಕೊಂಡಿದ್ದರು. ಕಳೆದ ಬಾರಿ ಕಾಂಗ್ರೆಸ್ ಕೇವಲ ಶೇ.29.53 ಮತಗಳನ್ನಷ್ಟೇ ಗಳಿಸಿತ್ತು. ಈ ಬಾರಿ ಕಾಂಗ್ರೆಸ್‌ನಿಂದ ಪ್ರಬಲ ರಜಪೂತ ನಾಯಕನೇ ಇರುವುದರಿಂದ ಕಠಿಣ ಸ್ಪರ್ಧೆ ಏರ್ಪಟ್ಟಂತಾಗಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಕೇಂದ್ರ ಸಚಿವ, ಹಿರಿಯ ನಾಯಕ ಜಸ್ವಂತ್ ಸಿಂಗ್ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿತ್ತು. ಬಳಿಕ ಜಸ್ವಂತ್ ಅವರು ಸೋನಾರಾಮ್ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಿ ಸೋತಿದ್ದರು. ಇದೀಗ ರಾಜಸ್ಥಾನ ಚುನಾವಣೆ ಹೊಸ್ತಿಲಲ್ಲಿ ಅವರ ಪುತ್ರ ಮಾನ್ವೇಂದ್ರ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು.

Leave a Reply

Your email address will not be published.