ಯಾವುದೇ ವೇಳೆ, ಯಾವುದೇ ಸ್ಥಳದಲ್ಲಿ ರಫೇಲ್ ಬಗ್ಗೆ ಚರ್ಚೆಗೆ ಸಿದ್ಧ : ಪ್ರಧಾನಿಗೆ ರಾಹುಲ್ ಸವಾಲು

ರಫೇಲ್ ಡೀಲ್ ವಿವಾದ ಹಾಗೂ ಸಿಬಿಐ ಅಂತರ್ಕಲಹ ಕುರಿತಂತೆ 15 ನಿಮಿಷಗಳ ಚರ್ಚೆಗೆ ಬರುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸವಾಲೆಸೆದಿದ್ದಾರೆ. ಯಾವುದೇ ಸ್ಥಳ ಹಾಗೂ ಯಾವುದೇ ಸಮಯದಲ್ಲಾದರೂ ಚರ್ಚೆ ನಡೆಸೋಣ ಎಂದು ತೊಡೆ ತಟ್ಟಿದ್ದಾರೆ.

ಚುನಾವಣಾ ಪ್ರಚಾರಕ್ಕಾಗಿ ಛತ್ತೀಸ್‌ಗಢಕ್ಕೆ ಬಂದಿದ್ದ ರಾಹುಲ್, ಸುದ್ದಿಗಾರರ ಜತೆ ಮಾತನಾಡುತ್ತಾ, ತಮ್ಮ ಪ್ರಶ್ನೆಗಳಿಗೆ ಪ್ರಧಾನಿಗೆ ಉತ್ತರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ನಾನು ಅನಿಲ್ ಅಂಬಾನಿ, ಎಚ್‌ಎಎಲ್, ಫ್ರೆಂಚ್ ಅಧ್ಯಕ್ಷರ ಹೇಳಿಕೆ ಹಾಗೂ ರಫೇಲ್ ಜೆಟ್‌ಗಳ ಬೆಲೆ ಕುರಿತಂತೆ ಮಾತನಾಡಲಿದ್ದೇನೆ. ರಫೇಲ್ ಡೀಲ್ ಅನ್ನು ಪ್ರಧಾನಿಯವರು ಮಾಡಿದ್ದು ಎಂದು ರಕ್ಷಣಾ ಸಚಿವರು ಸ್ಪಷ್ಟವಾಗಿ ಹೇಳಿದ್ದಾರೆ.

ಪ್ರಧಾನಿ ಕಾರ್ಯವಿಧಾನವನ್ನು ಅನುಸರಿಸಲಿಲ್ಲ. ತಡರಾತ್ರಿ 2 ಗಂಟೆಗೆ ಸಿಬಿಐ ನಿರ್ದೇಶಕರನ್ನು ಕಿತ್ತು ಹಾಕಲಾಗುತ್ತದೆ. ಅಂತಹ ಪ್ರಧಾನಿಗೆ ನನ್ನ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಇದಕ್ಕೂ ಮುನ್ನ ಪ್ರಚಾರ ಭಾಷಣದಲ್ಲಿ ರಾಹುಲ್, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ 10 ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡಲಿದೆ ಎಂದು ಆಶ್ವಾಸನೆ ನೀಡಿದರು.

Leave a Reply

Your email address will not be published.