ಸೌದಿ ರಾಜಕುವರನಿಂದಲೇ ಪತ್ರಕರ್ತ ಜಮಾಲ್ ಖಶೋಗ್ಗಿ ಕೊಲೆಗೆ ಆದೇಶ..!

ಸೌದಿ ಸರ್ಕಾರವನ್ನು ಸದಾ ಟೀಕಿಸುತ್ತಿದ್ದ ಪತ್ರಕರ್ತ ಜಮಾಲ್ ಖಶೋಗಿಯ ಕೊಲೆ ಮಾಡಿಸಿದ್ದು ಸ್ವತಃ ಸೌದಿಯ ರಾಜಕುವರ ಮೊಹಮ್ಮದ್ ಬಿನ್ ಸಲ್ಮಾನ್ ಎಂಬುದಾಗಿ ಅಮೆರಿಕದ ಕೇಂದ್ರೀಯ ಗುಪ್ತಚರ ಸಂಸ್ಥೆ (ಸಿಐಎ) ತೀರ್ಮಾನಿಸಿದೆ.

ರಾಜಕುವರನ ಆದೇಶದ ಪ್ರಕಾರ 15 ಸೌದಿ ಏಜೆಂಟ್‌ಗಳು ಸರ್ಕಾರಿ ವಿಮಾನದಲ್ಲಿ ಇಸ್ತಾಂಬುಲ್‌ಗೆ ತೆರಳಿ ಸೌದಿ ರಾಯಭಾರ ಕಚೇರಿಯಲ್ಲಿ ಖಶೋಗಿಯನ್ನು ಕೊಲೆಗೈದಿದ್ದಾರೆ ಎಂದು ಸಿಐಎ ತನಿಖೆಯನ್ನು ಉಲ್ಲೇಖಿಸಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಆದರೆ ಸಿಐಎ ಈ ಕುರಿತು ಅಧಿಕೃತ ಮಾಹಿತಿ ನೀಡಿಲ್ಲ.
2017ರಲ್ಲಿ ಸೌದಿಯಿಂದ ಸ್ವಯಂ ಗಡೀಪಾರುಗೊಂಡಿದ್ದ ಆ ಪತ್ರಕರ್ತ ಟರ್ಕಿಯ ಭಾವಿ ಪತ್ನಿಯನ್ನು ವರಿಸಲು ಅಗತ್ಯ ದಾಖಲೆಗಳನ್ನು ಪಡೆಯಲು ಆ ರಾಯಭಾರ ಕಚೇರಿಗೆ ಹೋಗಿದ್ದ. ಪತ್ರಕರ್ತ ಜಮಾಲ್ ಸೌದಿ ರಾಜಕುವರ ಹಾಗೂ ಸರ್ಕಾರವನ್ನು ಕಟುವಾಗಿ ಟೀಕಿಸುತ್ತಿದ್ದ. ಲೇಖನಗಳನ್ನು ಬರೆಯುತ್ತಿದ್ದ. ಸೌದಿ ಸರ್ಕಾರ ತನ್ನ ಮೇಲಿನ ಟ್ವಿಟರ್ ನಿರ್ಬಂಧ ಖಂಡಿಸಿ ಸೌದಿ ಬಿಟ್ಟು ತೆರಳಿದ್ದ.

ಅ.2ರಂದು ಈ ಕೊಲೆ ನಡೆದಿತ್ತು. ರಾಯಭಾರ ಕಚೇರಿಯ ಒಳಕ್ಕೆ ಹೋದ ಜಮಾಲ್ ಹೊರ ಬಂದಿರಲಿಲ್ಲ. ಈ ಪ್ರಕರಣದ ಸಂಬಂಧ ಸೌದಿ ಅರೇಬಿಯಾ ಸರ್ಕಾರ ಪದೇ ಪದೇ ತನ್ನ ಅಧಿಕೃತ ಹೇಳಿಕೆಯನ್ನು ಬದಲಿಸುತ್ತಲೇ ಬಂದಿದೆ. ಆರಂಭದಲ್ಲಿ ಖಶೋಗಿ ಎಲ್ಲಿದ್ದಾನೆ ಎಂದು ಗೊತ್ತಿಲ್ಲ ಎಂಬುದಾಗಿ ಹೇಳಿತ್ತು. ಬಳಿಕ ಆತನ ಕೊಲೆಯಾಗಿದೆ ಎಂದು ಹೇಳಿತ್ತು. ಸೌದಿಯ ತನಿಖಾಸಂಸ್ಥೆ ರಾಜಕುವರ ಪಾತ್ರವಿಲ್ಲ ಎಂದು ಹೇಳಿದ ಬೆನ್ನಲ್ಲೇ ಅಮೆರಿಕದ ಗುಪ್ತಚರ ಸಂಸ್ಥೆ ಆ ಕೊಲೆಯ ರೂವಾರಿಯೆಂದು ರಾಜಕುವರನತ್ತ ಬೊಟ್ಟು ಮಾಡಿದೆ.

Leave a Reply

Your email address will not be published.

Social Media Auto Publish Powered By : XYZScripts.com