ಕಡ್ಲೆ ಕಾಯಿ ಪರಿಷೆಗೆ ಸಜ್ಜಾಗ್ತಾಯಿದೆ ಬೆಂಗಳೂರಿನ ಬಸವನಗುಡಿ

ಬಡವರ ಬಾದಾಮಿ ಕಡ್ಲೆ ಕಾಯಿ ಪರಿಷೆ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಪ್ರತಿವರ್ಷದಂತೆ  ಕಾರ್ತೀಕ ಮಾಸದ ಕೊನೆಯ ಸೋಮವಾರ ಬೆಂಗಳೂರಿನ ಬಸವನಗುಡಿಯಲ್ಲಿ ಪಾರಂಪರಿಕ ಕಡಲೆಕಾಯಿ ಪರಿಷೆ ನಡೆಯುತ್ತದೆ. ಈ ಬಾರಿ ಡಿಸೆಂಬರ್  3 ಮತ್ತು 4 ಕ್ಕೆ ಪರಿಷೆ ನಡೆಯಲಿದೆ.  ಅಂದಿನ ದಿನ ಭಕ್ತರಿಗೆಲ್ಲಾ ಉಚಿತವಾಗಿ ಕಡಲೆಕಾಯಿಯನ್ನು ಪ್ರಸಾದವಾಗಿ ನೀಡುವ, ವಿಶೇಷಪೂಜೆ ಹಾಗೂ ಹೂವಿನ ಅಲಂಕಾರವನ್ನು ಮಾಡುವ ಬಸವನಗುಡಿಯ ಬೃಹತ್ ದೇವಾಲಯದಕ್ಕೆ ಬಣ್ಣ ಹಚ್ಚಿವ ಕಾರ್ಯ ನಡೆದಿದೆ. ದೇವಸ್ಥಾನದ ಆವರಣವೆಲ್ಲಾ  ಕಡ್ಲೆ ಕಾಯಿ ಪರಿಷೆಗೆ ಸಜ್ಜುಗೊಳ್ಳುತ್ತಿದೆ.

ಕಡಲೆ ಕಾಯಿ ಪರಿಷೆ ಮಾತ್ರವಲ್ಲದೇ ರಾಟೆ, ಉಯ್ಯಾಲೆಗಳು, ಮೇರಿಗೋರೌಂಡ್ ಆಟಿಕೆ ಸ್ಟಾಲ್ಗಳನ್ನು ಹಾಕಲು ವ್ಯಾಪಾರಿಗಳು ತಯಾರಿ ನಡೆಸಿದ್ದಾರೆ. ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ, ಚಿಕ್ಕಬಳ್ಳಾಪುರ, ಮಾಗಡಿ, ಮಂಡ್ಯ, ಮೈಸೂರು, ತುಮಕೂರು, ಕುಣಿಗಲ್ ಹೀಗೆ ನಾನಾ ಭಾಗಗಳಿಂದ ಕಾಯಿಗಳನ್ನು ಹೊತ್ತು ತರುವ ರೈತರು ಮಳಿಗೆಗಳ ಏರ್ಪಾಟು ಮಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ನೆರೆಯ ಆಂಧ್ರಪ್ರದೇಶ, ತಮಿಳುನಾಡು ರೈತರು ಹಾಗೂ ವ್ಯಾಪಾರಿಗಳು ಕೂಡ ಪರಿಷೆಯಲ್ಲಿ ಭಾಗವಹಿಸಲಿದ್ದಾರೆ.

ಹೊರಗಿನ ಮಾರುಕಟ್ಟೆಗೆ ಹೋಲಿಸಿದರೆ ಕಡಲೆಕಾಯಿ ಪರಿಷೆಯಲ್ಲಿ ಮಾರಾಟವಾಗುವ ಕಡಲೆಕಾಯಿಯ ಬೆಲೆ ತುಸು ಹೆಚ್ಚಾಗಿಯೇ ಇರುತ್ತದೆ. ಆದರೆ ಇದು ನಮ್ಮ ಸಂಸ್ಕೃತಿಯ ಭಾಗವಾಗಿರುವುದರಿಂದ ಬಂದಿರುವ ಭಕ್ತರು ಕನಿಷ್ಠ ಒಂದು ಸೇರು ಕಡಲೆಕಾಯಿಯನ್ನಾದರೂ ಖರೀದಿಸಿ ಮನೆಗೆ ಒಯ್ಯುತ್ತಾರೆ. ಇದರಿಂದ ರೈತರಿಗೆ ಉತ್ತಮ ವ್ಯಾಪರಕ್ಕೆ ಮಾರುಕಟ್ಟೆ ದೊರೆಯುತ್ತದೆ.

ಒಟ್ಟಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕಡಲೆ ಕಾಯಿ ಪರಿಷೆಗೆ ಬಸವನಗುಡಿ ಸಜ್ಜಾಗುತ್ತಿದೆ.  ಬೆಂಗಳೂರು ಮಾತ್ರವಲ್ಲದೇ ನಗರದ ಸುತ್ತಮುತ್ತಲಿನ ಹಲವು ಪ್ರದೇಶಗಳಿಂದ ಬರುವ ಭಕ್ತರು ಕಡಲೆಕಾಯಿ ಪರಿಷೆಗೆ ಬಂದು ಬಸವಣ್ಣನ ಕೃಪೆಗೆ ಪಾತ್ರವಾಗಲಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com