ಸುಳ್ಳು ಸುದ್ದಿಗಳು, ಪ್ರಚಾರ, ಧ್ರುವೀಕರಣ – ನಾನು ಬಿಜೆಪಿ ತೊರೆಯಲು ಇದೇ ಕಾರಣ – ಶಿವಂ ಶಂಕರ್ ಸಿಂಗ್

ಮಹಾ ಚುನಾವಣೆಗೆ ಇನ್ನು ಕೇವಲ ಆರು ತಿಂಗಳುಗಳಷ್ಟೇ ಬಾಕಿ ಇವೆ. ಬಿಜೆಪಿಯ ತಂತ್ರಗಾರಿಕೆ ತಂಡದ ಪ್ರಮುಖ ಸದಸ್ಯರಾಗಿದ್ದ, ತ್ರಿಪುರ ಚುನಾವಣೆ ಗೆಲ್ಲಲು ಬಿಜೆಪಿಗೆ ನೆರವಾಗಿದ್ದ ಶಿವಂ ಶಂಕರ್ ಸಿಂಗ್ ಪಕ್ಷ ತೊರೆದಿದ್ದಾರೆ. ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಸಂಚಲನ ಉಂಟು ಮಾಡಿದೆ.
ಸಿಂಗ್ ಡಾಟಾ ವಿಜ್ಞಾನಿಯಾಗಿದ್ದಾರೆ ಹಾಗೂ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರ ಜತೆ ನಿಕಟವಾಗಿ ಕೆಲಸ ಮಾಡಿದ್ದರು. ಮಿಚಿಗನ್ ಯುನಿವರ್ಸಿಟಿಯಲ್ಲಿ ಅಭ್ಯಸಿಸಿದ ಬಳಿಕ ಭಾರತಕ್ಕೆ ಬಂದು 2013ರಲ್ಲಿ ಬಿಜೆಪಿ ಸೇರಿ ಮೋದಿಯ ಚುನಾವಣಾ ಪ್ರಚಾರದಲ್ಲಿ ಕೆಲಸ ಮಾಡಿದ್ದರು.
ಇದೀಗ ಬಿಜೆಪಿಯನ್ನು ತಾವು ತೊರೆಯಲು ಕಾರಣವಾಗಿರುವ ಅನೇಕ ಸಂಗತಿಗಳ ಕುರಿತು ಇವರು ಬರೆದ ಬರಹವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಅದರ ಪ್ರಮುಖ ಸಂಗತಿಗಳನ್ನು ನಾವಿಲ್ಲಿ ನೋಡೋಣ : ದೇಶದಲ್ಲಿ ರಾಜಕೀಯ ಸಂವಾದ ಅತ್ಯಂತ ತಳಮಟ್ಟದಲ್ಲಿದೆ. ಒಂದು ಪಕ್ಷದ ಪರವಾದ ನಿಲುವನ್ನು ಊಹಿಸಲೂ ಸಾಧ್ಯವಿಲ್ಲ. ಸಾಕ್ಷಿಗಳೇನೇ ಇದ್ದರೂ, ಜನರು ತಮ್ಮ ಪಕ್ಷದ ಪರ ಬೆಂಬಲ ಮುಂದುವರಿಸುತ್ತಾರೆ. ತಾವು ಹಬ್ಬಿಸುವುದು ಸುಳ್ಳು ಸುದ್ದಿಗಳೆಂದು ಸಾಬೀತಾದರೂ ನಿಲ್ಲಿಸುವುದಿಲ್ಲ. ನಿರ್ದಿಷ್ಟ ಸಂದೇಶಗಳನ್ನು ಪರಿಣಾಮಕಾರಿ ಪ್ರಚಾರದೊಂದಿಗೆ ಹರಡಿಸುವಲ್ಲಿ ಬಿಜೆಪಿಯದ್ದು ಎತ್ತಿದ ಕೈ. ಇಂತಹ ಸಂದೇಶಗಳೇ ನಾನು ಪಕ್ಷವನ್ನು ಬೆಂಬಲಿಸಲು ಸಾಧ್ಯವಾಗದಂತಹ ಸ್ಥಿತಿಗೆ ಕಾರಣವಾಗಿವೆ. ಆದರೆ ಒಂದು ಸಂಗತಿ ನಾನು ಹೇಳಬೇಕು, ಯಾವುದೇ ಪಕ್ಷ ಸಂಪೂರ್ಣ ಕೆಟ್ಟದಲ್ಲ. ಯಾವುದೇ ಪಕ್ಷ ಸಂಪೂರ್ಣ ಒಳ್ಳೆಯದೂ ಅಲ್ಲ ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು. ಎಲ್ಲಾ ಸರ್ಕಾರಗಳೂ ಕೆಲವು ಉತ್ತಮ ಕಾರ್ಯ ಮಾಡಿವೆ, ಕೆಲವು ವಿಷಯಗಳಲ್ಲಿ ಎಡವಿವೆ. ಈ ಸರ್ಕಾರವೂ ಭಿನ್ನವೇನಲ್ಲ.
ಮೊದಲು ಉತ್ತಮ ಸಂಗತಿಗಳನ್ನು ನೋಡೋಣ. ರಸ್ತೆ ನಿರ್ಮಾಣ ಹಿಂದಿಗಿಂತ ವೇಗವಾಗಿ ನಡೆಯುತ್ತಿದೆ. ವಿದ್ಯುತ್ ಸಂಪರ್ಕ ಹೆಚ್ಚಿದೆ. ಹೆಚ್ಚು ಹಳ್ಳಿಗಳು ವಿದ್ಯುದೀಕೃತಗೊಂಡಿವೆ ಹಾಗೂ ಜನರು ಹೆಚ್ಚು ಗಂಟೆಗಳ ಕಾಲ ಕರೆಂಟ್ ಪಡೆಯುತ್ತಿದ್ದಾರೆ. ಮೇಲ್ಮಟ್ಟದ ಭ್ರಷ್ಟಾಚಾರ ಕಡಿಮೆಯಾಗಿದೆ. ಸದ್ಯದ ಮಟ್ಟಿಗೆ ಸಚಿವರ ಮಟ್ಟದಲ್ಲಿ ದೊಡ್ಡ ಪ್ರಕರಣಗಳಿಲ್ಲ. ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗಿದೆ. ಹಿಂದೆಗಿಂತ ಹೆಚ್ಚು ಶೌಚಾಲಯಗಳು ನಿರ್ಮಾಣಗೊಂಡಿವೆ. ಜತೆಗೆ ಜನರ ಮನಸ್ಸಿನಲ್ಲಿ ಸ್ವಚ್ಛತೆ ಎಂಬುದು ಸೇರಿಕೊಂಡಿದೆ. ಉಜ್ವಲ ಯೋಜನೆ ಒಂದು ಅದ್ಭುತವಾದ ಉಪಕ್ರಮವಾಗಿದೆ. ಮೊದಲ ಗ್ಯಾಸ್ ಸ್ಟವ್ ಹಾಗೂ ಸಿಲಿಂಡರ್ ಉಚಿತವಾಗಿದೆ. ಆದರೆ ಎಷ್ಟು ಮಂದಿ ಎರಡನೇ ಸಿಲಿಂಡರ್ ಹಣ ಕೊಟ್ಟು ಪಡೆಯುತ್ತಾರೆ ಎಂಬುದನ್ನು ನೋಡಬೇಕಿದೆ. ಈಶಾನ್ಯ ಭಾಗಗಳಿಗೆ ಸಂಪರ್ಕ ನಿಸ್ಸಂಶಯವಾಗಿ ಹೆಚ್ಚಿದೆ. ಹೆಚ್ಚು ರೈಲುಗಳು, ರಸ್ತೆಗಳು, ವಿಮಾನಗಳು ಆಗಿವೆ. ಅದಕ್ಕಿಂತ ಹೆಚ್ಚಾಗಿ ಮುಖ್ಯವಾಹಿನಿ ಸುದ್ದಿವಾಹಿನಿಗಳಲ್ಲಿ ಈ ಭಾಗದ ಕುರಿತು ಚರ್ಚೆಯಾಗುತ್ತಿದೆ. ಪ್ರಾದೇಶಿಕ ಪಕ್ಷಗಳಿಗಿಂತ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ.
ಈಗ ಕೆಟ್ಟ ಸಂಗತಿಗಳನ್ನು ನೋಡೋಣ. ವ್ಯವಸ್ಥೆಗಳು ಹಾಗೂ ದೇಶವನ್ನು ಕಟ್ಟಲು ಶತಮಾನಗಲೇ ಬೇಕಾಗುತ್ತವೆ. ಬಿಜೆಪಿಯ ಅತಿದೊಡ್ಡ ವೈಫಲ್ಯ ಎಂದರೆ, ಕೆಲವು ಅದ್ಭುತ ಸಂಗತಿಗಳನ್ನು ತೀರಾ ನಶಿಸುವ ನೆಲೆಯಲ್ಲಿ ಹಾಳು ಮಾಡಿರುವುದಾಗಿದೆ.

ಎಲೆಕ್ಟೋರಲ್ ಬಾಂಡ್‌ಗಳು ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸುತ್ತವೆ ಹಾಗೂ ನಮ್ಮ ರಾಜಕೀಯ ಪಕ್ಷಗಳನ್ನು ಕಾರ್ಪೊರೇಟ್‌ಗಳು ಹಾಗೂ ವಿದೇಶಿ ಶಕ್ತಿಗಳನ್ನು ಕೊಂಡುಕೊಳ್ಳಲು ಅವಕಾಶ ನೀಡುತ್ತವೆ.ಈ ಬಾಂಡ್‌ಗಳು ಅನಾಮಧೇಯವಾಗಿರುತ್ತವೆ. ಹಾಗಾಗಿ ಕಾರ್ಪೊರೇಟ್‌ಗಳು, ನಾನು 1,000 ಕೋಟಿ ಬಾಂಡ್ (10 ಶತಕೋಟಿ ರೂ.) ನೀಡುತ್ತೇನೆ, ಈ ನಿರ್ದಿಷ್ಟ ನೀತಿಯನ್ನು ಅಂಗೀಕರಿಸು ಎಂದು ಪಕ್ಷಕ್ಕೆ ಹೇಳುವ ಅಪಾಯವಿದೆ. ಯೋಜನಾ ಆಯೋಗದ ವರದಿಗಳನ್ನು ಡಾಟಾದ ಪ್ರಮುಖ ಮೂಲವೆಂದು ಉಪಯೋಗಿಸಲಾಗುತ್ತಿತ್ತು. ಅದು ಸರ್ಕಾರದ ಯೋಜನೆಗಳನ್ನು ಅಡಿಟ್ ಮಾಡುತ್ತಿತ್ತು ಹಾಗೂ ಸಂಗತಿಗಳು ಹೇಗಿವೆ ಎಂದು ಹೇಳುತ್ತಿತ್ತು. ಆದರೆ ಈಗ ಸರ್ಕಾರ ಹೇಳಿದ್ದನ್ನೇ ನಂಬಬೇಕು. ನೀತಿ ಆಯೋಗವೆಂಬುದು ಒಂದು ಚಿಂತಕರ ಚಾವಡಿಯಷ್ಟೇ, ಅದೊಂದು ಪಿಆರ್ ಏಜೆನ್ಸಿ.

ಸಿಬಿಐ ಮತ್ತು ಇಡಿಯನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಮೋದಿ, ಶಾ ವಿರುದ್ಧ ಯಾರೇ ಮಾತನಾಡಿದರೂ ಅವರ ವಿರುದ್ಧ ಈ ಸಂಸ್ಥೆಗಳನ್ನು ಛೂ ಬಿಡುವ ಆತಂಕದ ಸ್ಥಿತಿ ಇದೆ. ಕಲಿಕೋ ಪುಲ್‌ರ ಆತ್ಮಹತ್ಯಾ ಪತ್ರ, ನ್ಯಾಯಾದೀಶ ಲೋಯಾ ಅವರ ಸಾವು, ಸೊಹ್ರಾಬುದ್ದೀನ್ ಕೊಲೆಯ ತನಿಖೆಯ ವೈಫಲ್ಯ ಉಂಟಾಗಿದೆ, ಅತ್ಯಾಚಾರ ಆರೋಪಿ ಶಾಸಕನ ಪರ ವಾಕಲತ್ತು ವಹಿಸಿದೆ ಬಿಜೆಪಿ,
ಅಪನಗದೀಕರಣ ವಿಫಲಗೊಂಡಿದೆ. ಆದರೆ ಅದನ್ನು ಒಪ್ಪಿಕೊಳ್ಳಲು ಬಿಜೆಪಿ ಸಿದ್ಧವಿಲ್ಲ. ಉಗ್ರರ ಬಂಡವಾಳ ಕತ್ತರಿಸಲಾಗಿದೆ, ನಗದು ಕಡಿಮೆಯಾಗಿದೆ, ಭ್ರಷ್ಟಾಚಾರ ನಿರ್ಮೂಲನೆ ಮಾಡಲಾಗಿದೆ ಎಂದೆಲ್ಲಾ ಸುಳ್ಳು ಪ್ರಚಾರ ಮಾಡಲಾಯಿತು. ಇದು ಉದ್ಯಮಗಳ ಮೇಲೂ ಹೊಡೆತ ನೀಡಿತು. ಜಿಎಸ್‌ಟಿ ಅನುಷ್ಠಾನವನ್ನೂ ಆತುರಾತುರವಾಗಿ ಮಾಡಲಾಯಿತು. ಸಂಕೀರ್ಣ ಸಂರಚನೆ, ವಿವಿಧ ವಸ್ತುಗಳ ಮೇಲೆ ಬಹು ದರಗಳು, ಸಂಕೀರ್ಣ ರಿಟರ್ನ್ ಫೈಲಿಂಗ್‌ನಿಂದಾಗಿ ಉದ್ಯಮಗಳಿಗೆ ಧಕ್ಕೆಯಾಯಿತು. ಸ್ವಲ್ಪ ಸಮಯದ ಬಳಿಕ ಇದು ಸ್ಥಿರವಾಗಬಹುದು. ಆದರೆ ಆರಂಭದಲ್ಲಿ ಹಾನಿಯೆಸಗಿದೆ. ತಪ್ಪನ್ನು ಒಪ್ಪಿಕೊಳ್ಳದಂತಹ ಧಾರ್ಷ್ಟ್ಯ ಬಿಜೆಪಿಗಿದೆ.

ಸಂಸದ ಆದರ್ಶ ಗ್ರಾಮ ಯೋಜನೆ, ಮೇಕ್ ಇನ್ ಇಂಡಿಯಾ, ಕೌಶಲ್ಯಾಭಿವೃದ್ಧಿ, ಫಸಲ್ ಬಿಮಾ ಇವೆಲ್ಲವೂ ವಿಫಲಗೊಂಡ ಯೋಜನೆಗಳು. ಪ್ರತಿಯೊಂದು ಸಮಸ್ಯೆಯನ್ನು ಬೊಟ್ಟು ಮಾಡಿದಾಗ ಅದನ್ನು ವಿಪಕ್ಷಗಳ ಸ್ಟಂಟ್ ಎಂದೇ ಬಿಂಬಿಸಲಾಗುತ್ತದೆ. ಅಂದು ತೈಲ ಬೆಲೆಯೇರಿಕೆಯ ವಿರುದ್ಧ ಸ್ವತಃ ಮೋದಿ ಸಹಿತ ಬಿಜೆಪಿ ನಾಯಕರು ಕಾಂಗ್ರೆಸ್ ಅನ್ನು ಟೀಕಿಸಿದ್ದರು. ಆದರೆ ಈಗ ಅವರೇ ಪೆಟ್ರೋಲ್, ಡೀಸೆಲ್‌ನ ದುಬಾರಿ ಬೆಲೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಹೇಸಿಗೆ ಹುಟ್ಟಿಸುವ ಸಂಗತಿಗಳು ಇನ್ನಷ್ಟಿವೆ. ಬಿಜೆಪಿ ಸರ್ಕಾರವನ್ನು ಟೀಕಿಸುವ ಪತ್ರಕರ್ತರನ್ನು ಕಾಂಗ್ರೆಸ್‌ನ ಚೇಲಾಗಳೆಂದು ಜರಿಯಲಾಗುತ್ತದೆ. ಇದು ತಪ್ಪು. ಸಣ್ಣ ಕೆಲಸ ಮಾಡಿ ದೊಡ್ಡದಾಗಿ ಬಿಂಬಿಸುವ ಪ್ರವೃತ್ತಿ ನಡೆಯುತ್ತಿದೆ. ಜಾಹೀರಾತಿಗೆ ವಿಪರೀತ ಖರ್ಚು ಮಾಡಲಾಗುತ್ತಿದೆ. ಹಿಂದಿನ ಸರ್ಕಾರಗಳು ಏನೇನೂ ಕೆಲಸ ಮಾಡಿಲ್ಲ. ನಮ್ಮಿಂದಲೇ ಎಲ್ಲಾ ಸಾಧನೆಯಾಗಿದೆ ಎಂಬಂತೆ ಬಿಂಬಿಸಿಕೊಳ್ಳುವ ಪ್ರವೃತ್ತಿ ಹೆಚ್ಚಿದೆ. ಪಕ್ಷದಿಂದಲೇ ಧ್ರುವೀಕರಣಗೊಳಿಸುವಂತಹ ಸುಳ್ಳು ಸುದ್ದಿಗಳನ್ನು ಹರಿಬಿಡುವ ಕೆಲಸ ನಡೆಯುತ್ತಿದೆ. ಹಿಂದುಗಳು ಅಪಾಯದಲ್ಲಿದ್ದಾರೆ. ನಮ್ಮ ರಕ್ಷಣೆ ಮೋದಿಯೊಬ್ಬರಿಂದಲೇ ಸಾಧ್ಯ ಎಂಬ ಭಾವನೆಯನ್ನು ಜನರಲ್ಲಿ ಬಿಂಬಿಸಲಾಗುತ್ತಿದೆ. ಸರ್ಕಾರದ ವಿರುದ್ಧ ಮಾತನಾಡಿದ ತಕ್ಷಣ ರಾಷ್ಟ್ರ ವಿರೋಧಿ ಎಂದು ಹಣೆಪಟ್ಟಿ ಕಟ್ಟುವ ಪ್ರವೃತ್ತಿ ಕೂಡಾ ಹೆಚ್ಚುತ್ತಿದೆ. ಬಿಜೆಪಿಯ ಅಭಿವೃದ್ಧಿಯ ಮಂತ್ರಗಳೆಲ್ಲಾ ಹೊರಟು ಹೋದವು. ಈಗ ಧ್ರುವೀಕರಣವೊಂದೇ ತಂತ್ರವಾಗಿದೆ. ಹಿಂದು- ಮುಸ್ಲಿಂ ಧ್ರುವೀಕರಣ ಮಾಡುತ್ತಾ ಹುಸಿ ರಾಷ್ಟ್ರೀಯತೆಯನ್ನು ಬಿಂಬಿಸುವ ಕಾರ್ಯ ತೀವ್ರವಾಗಿದೆ.

Leave a Reply

Your email address will not be published.