ಚನ್ನಪಟ್ಟಣ : ನಗರಸಭೆ ಅಧಿಕಾರಿಗಳ ಮೀನಮೇಷ – ಮರೀಚಿಕೆಯಾಗೇ ಉಳಿದ ಇಂದಿರಾ ಕ್ಯಾಂಟೀನ್

ಮರೀಚಿಕೆಯಾಗೇ ಉಳಿದ ಇಂದಿರಾ ಕ್ಯಾಂಟೀನ್.. ಎಲ್ಲಾ ಸಿದ್ದವಿದ್ದರೂ ಆರಂಭಕ್ಕೆ ನೂರೆಂಟು ವಿಘ್ನ | ನಗರಸಭಾ ಅಧಿಕಾರಿಗಳ ಮೀನಾಮೇಷ
ಚನ್ನಪಟ್ಟಣ: ಬೊಂಬೆನಗರಿಯ ಜನತೆ ಬಹುನಿರೀಕ್ಷೆಯಿಂದ ಕಾಯುತ್ತಿರುವ ಇಂದಿರಾ ಕ್ಯಾಂಟೀನ್‌ಗೆ ಬಾಲಗ್ರಹ ಹಿಡಿದಿದೆ. ಪರಿಣಾಮ ಕಾಮಗಾರಿ ಆರಂಭ ಗೊಂಡು ವರ್ಷ ವಾಗುತ್ತಿದೆಯಾದರೂ ಕ್ಯಾಂಟೀನ್‌ಗೆ ಉದ್ಘಾಟನಾ ಭಾಗ್ಯ ದೊರೆತಿಲ್ಲ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ೨೦೧೭ರ ಬಜೆಟ್‌ನಲ್ಲಿ ಕಡಿಮೆ ಬೆಲೆಗೆ ನಗರ ಪ್ರದೇಶದ ಜನರಿಗೆ ಊಟ ಮತ್ತು ಉಪಹಾರ ಪೂರೈಕೆ ಮಾಡುವ ಇಂದಿರಾ ಕ್ಯಾಂಟೀನ್ ಅನ್ನು ಪರಿಚಯಿಸಿತ್ತು. ೨೦೧೭ ಆ.೧೫ ರಂದು ಬೆಂಗಳೂರು ಮಹಾ ನಗರದಲ್ಲಿ ಕ್ಯಾಂಟಿನ್ ಪ್ರಾರಂಭ ಗೊಂಡಿತು. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರಸಕ್ತ ವರ್ಷ ಜ.೧ ರಿಂದ ಇಂದಿರಾ ಕ್ಯಾಂಟೀನ್ ಆರಂಭಿಸುವುದಾಗಿ ಅಂದಿನ ಸರ್ಕಾರ ತಿಳಿಸಿತ್ತು.
ಸಿದ್ದರಾಮಯ್ಯ ಸರ್ಕಾರದ ನಿರ್ದೇಶನದಂತೆ ರಾಜ್ಯದ ಹಲವು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್ ಕಾರ್ಯಾರಂಭ ಮಾಡುತ್ತಿವೆಯಾದರೂ ತಾಲೂಕಿನಲ್ಲಿ ಮಾತ್ರ ಇಂದಿರಾ ಕ್ಯಾಂಟೀನ್‌ಗೆ ಉದ್ಘಾಟನೆ ಭಾಗ್ಯ ಕೂಡಿಬಂದಿಲ್ಲ. ಇಲ್ಲಿ ಕ್ಯಾಂಟೀನ್ ಆರಂಭಿಸುವುದಕ್ಕೆ ನೂರಾರು ವಿಘ್ನ ಎದುರಾಗಿರುವುದೇ ಇದಕ್ಕೆ ಕಾರಣ ವಾಗಿದೆ.
ಆರಂಭದಲ್ಲೇ ಅಪಶಕುನ: ನಗರದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುವ ವಿಷಯ ನಗರಸಭಾ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವಾದಾಗ ಸದಸ್ಯರು ಸಾಕಷ್ಟು ಗೊಂದಲ ಎಬ್ಬಿಸಿದರು. ನಗರಸಭೆ ವಶಕ್ಕೆ ಪಡೆದಿದ್ದ ಪಟೇಲರ ಸಂಘದ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಬೇಕು ಎಂಬುದು ಕೆಲ ಮಂದಿಯ ವಾದವಾದರೆ ಮತ್ತೆ ಕೆಲ ಸದಸ್ಯರು ಇಲ್ಲಿ ಬೇಡ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕೊನೆಗೂ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಪಟೇಲರ ಸಂಘದ ಜಾಗವೇ ಅಖೈರು ಗೊಂಡಿತಾದರೂ ಕಾಮಗಾರಿ ಮಾತ್ರ ಕುಟುಂತ್ತಾ ಸಾಗಿದ್ದು ರಾಜ್ಯದ ವಿವಿಧೆಡೆ ವರ್ಷಾಚರಣೆಗೆ ಇಂದಿರಾ ಕ್ಯಾಂಟೀನ್ ಸಿದ್ದವಾಗಿದ್ದರೆ ನಮ್ಮ ತಾಲೂಕಿನಲ್ಲಿ ಮಾತ್ರ ಇನ್ನೂ ಉದ್ಘಾಟನೆ ಭಾಗ್ಯವನ್ನೇ ಕಂಡಿಲ್ಲ.
ಸಾರ್ವಜನಿಕರ ಆಕ್ರೋಶ: ನಗರದಲ್ಲಿ ಇಂದಿರಾಕ್ಯಾಂಟೀನ್ ಆರಂಭ ಮಾಡದಿರುವ ಬಗ್ಗೆ ಸಾರ್ವಜನಿಕರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದಿರಾಕ್ಯಾಂಟೀನ್ ಆರಂಭ ಗೊಂಡಿದ್ದೇ ಆದಲ್ಲಿ ಕಡಿಮೆ ಬೆಲೆಯಲ್ಲಿ ದೊರೆಯುವ ಊಟವನ್ನು ಸಾಕಷ್ಟು ಮಂದಿ ಸವಿಯ ಬಹುದಾಗಿತ್ತು. ಇದರಿಂದ ಕೂಲಿ ಕಾರ್ಮಿಕರು ಮತ್ತು ಬಡ ಮಧ್ಯಮ ವರ್ಗದ ಜನತೆಗೆ ಅನುಕೂಲವಾಗುತಿತ್ತು ಎಂಬುದು ಹಲವಾರು ಸಾರ್ವಜನಿಕರ ಅಭಿಪ್ರಾಯವಾಗಿದೆ.
ನಗರಸಭಾ ಅಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಿ ನಗರ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದ್ದು, ಈ ಬಗ್ಗೆ ಹಿರಿಯ ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳು ಆಸಕ್ತಿ ವಹಿಸ ಬೇಕು ಎಂದು ಜನತೆಯ ಆಗ್ರಹವಾಗಿದೆ.
ಬಾಕ್ಸ್-೧
ತುಕ್ಕು ಹಿಡಿಯುತ್ತಿವೆ ಅಡುಗೆ ಸಾಮಾಗ್ರಿಗಳು
ಸರ್ಕಾರದ ಉದ್ದೇಶಿತ ಇಂದಿರಾ ಕ್ಯಾಂಟೀನ್‌ಗೆ ಅಗತ್ಯವಿರುವ ಅಡುಗೆ ಪಾತ್ರೆಗಳನ್ನು ಈಗಾಗಲೇ ಸರ್ಕಾರದಿಂದ ಗುತ್ತಿಗೆ ಪಡೆದಿರುವ ಸಂಸ್ಥೆ ಸರಬರಾಜು ಮಾಡಿದೆ. ಈ ಎಲ್ಲಾ ಅಡುಗೆ ಸಾಮಗ್ರಿಗಳನ್ನು ನಗರದ ಸಭೆ ಪುರಭವನದಲ್ಲಿ ಇರಿಸಿದೆ. 6 ತಿಂಗಳಿಂದ ಪುರಭವನದಲ್ಲಿ ಬಳಕೆ ಇಲ್ಲದೆ ಧೂಳು ತಿನ್ನುತ್ತಿರುವ ಪಾತ್ರೆ ಹಾಗೂ ಇನ್ನಿತರ ಅಡುಗೆ ಸಾಮಗ್ರಿಗಳು ಅವ್ಯವಸ್ಥೆಯ ಆಗರವಾಗಿವೆ. ಕೆಲ ಪಾತ್ರೆ ಹಾಗೂ ವಸ್ತುಗಳು ತುಕ್ಕು ಹಿಡಿಯಲಾರಂಭಿಸಿದ್ದು ಇವರು ಕ್ಯಾಂಟೀನ್ ಆರಂಭಿಸುವ ವೇಳೆಗೆ ಈ ಪಾತ್ರೆಗಳು ಉಳಿಯುತ್ತವಾ ಎಂಬುದು ಸಾರ್ವಜನಿಕರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.

– ಚಿನ್ನಗಿರಿಗೌಡ ಬಿ.ಪಿ

Leave a Reply

Your email address will not be published.