ನಕ್ಸಲರಿಗೆ ಬೆದರದ ಮತದಾರ : ಛತ್ತೀಸ್‌ಗಢದಲ್ಲಿ ಶೇ.70ರ ಭರ್ಜರಿ ಮತದಾನ

ಛತ್ತೀಸ್‌ಗಢದಲ್ಲಿ 8 ಜಿಲ್ಲೆಗಳ 18 ವಿಧಾನಸಭಾ ಕ್ಷೇತ್ರಗಳಿಗೆ ಸೋಮವಾರ ನಡೆದ ಮೊದಲ ಹಂತದ ಮತದಾನದಲ್ಲಿ ದಾಖಲೆಯ ಶೇ.70ರಷ್ಟು ಮತದಾನ ದಾಖಲಾಗಿದೆ. ಈ ಮೂಲಕ ನಕ್ಸಲರ ಬೆದರಿಕೆಗೆ ಸೊಪ್ಪು ಹಾಕದ ನಾಗರಿಕರು ಪ್ರಜಾತಂತ್ರಕ್ಕೆ ಜೈ ಎಂದಿದ್ದಾರೆ. ಈ ಮಧ್ಯೆ, ಬಿಜಾಪುರ ಹಾಗೂ ಸುಕ್ಮಾ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎರಡು ಎನ್‌ಕೌಂಟರ್‌ಗಳಲ್ಲಿ ಆರು ಮಂದಿ ಮಾವೋವಾದಿಗಳನ್ನು ಹೊಡೆದುರುಳಿಸಲಾಗಿದೆ.

ಖುಜಿ ಕ್ಷೇತ್ರದಲ್ಲಿ ಅತ್ಯಧಿಕ ಶೇ.72 ಹಾಗೂ ದಾಂತೇವಾಡ ಕ್ಷೇತ್ರದಲ್ಲಿ ಅತಿಕಡಿಮೆ ಶೇ.49 ಮತದಾನವಾಗಿದೆ. ಕೊಂಡಗಾಂವ್‌ನಲ್ಲಿ ಶೇ.61.7, ಕೇಶ್ಕಲ್‌ನಲ್ಲಿ ಶೇ.63.51, ಬಸ್ತಾರ್‌ನಲ್ಲಿ ಶೇ.58, ಖೈರಾಗಢದಲ್ಲಿ ಶೇ.70.17 ಹಾಗೂ ಡೊಂಗಾರ್‌ಗಢ ಹಾಗೂ ಡೊಂಗಾರ್‌ಗಾಂವ್‌ನಲ್ಲಿ ತಲಾ ಶೇ.71ರಷ್ಟು ಹಕ್ಕು ಚಲಾವಣೆಯಾಗಿದೆ.

ಶೇ.1ರಷ್ಟು ಮತಯಂತ್ರ ದೋಷ ಹಾಗೂ ಶೇ.1.9ರಷ್ಟು ವಿವಿಪ್ಯಾಟ್ ದೋಷಗಳು ಕಂಡುಬಂದಿದ್ದು, ಅವುಗಳನ್ನು ಕೂಡಲೇ ಬದಲಾಯಿಸಿ ಮತದಾನ ಪ್ರಕ್ರಿಯೆ ಮುಂದುವರಿಸಲಾಯಿತು ಎಂದು ಹಿರಿಯ ಉಪ ಚುನಾವಣಾ ಆಯುಕ್ತ ಉಮೇಶ್ ಸಿನ್ಹಾ ಮಾಹಿತಿ ನೀಡಿದ್ದಾರೆ.

ಮಾವೋವಾದಿ ನಕ್ಸಲರು ಚುನಾವಣೆ ಬಹಿಷ್ಕರಿಸುವಂತೆ ಜನರಿಗೆ ಕರೆ ನೀಡಿದ್ದರು. ಜನರನ್ನು ಭಯಭೀತಗೊಳಿಸಲು ಕಳೆದ 15 ದಿನಗಳಿಂದ ಅಲ್ಲಲ್ಲಿ ಸ್ಫೋಟ ಹಾಗೂ ದಾಳಿಗಳನ್ನು ನಡೆಸುತ್ತಿದ್ದರು. ನಕ್ಸಲರ ದಾಳಿಯಿಂದ ಈ ಅವಧಿಯಲ್ಲಿ 14 ಮಂದಿ ಸಾವನ್ನಪ್ಪಿದ್ದರು. 90 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಛತ್ತೀಸ್‌ಗಢದಲ್ಲಿ 2ನೇ ಹಂತದ ಮತದಾನ ನ.20ರಂದು ನಡೆಯಲಿದೆ.

Leave a Reply

Your email address will not be published.

Social Media Auto Publish Powered By : XYZScripts.com