ಆಸ್ಟ್ರೇಲಿಯಾವನ್ನು ಬೆಚ್ಚಿ ಬೀಳಿಸಿದ್ದ ಸ್ಟ್ರಾಬೆರಿಯಲ್ಲಿ ಸೂಜಿ ಪ್ರಕರಣ : ಮಹಿಳೆ ಬಂಧನ

ಆಸ್ಟ್ರೇಲಿಯಾದ ಹಣ್ಣು ಉದ್ಯಮವನ್ನೇ ತಲ್ಲಣಗೊಳಿಸಿದ್ದ ಸ್ಟ್ರಾಬೆರಿ ಹಣ್ಣಿನೊಳಗಿನ ಸೂಜಿ ಪ್ರಕರಣದ ಸಂಬಂಧ ಕ್ವೀನ್ಸ್ ಲ್ಯಾಂಡ್ ಪೊಲೀಸರು ಮಹಿಳೆಯೊಬ್ಬಳನ್ನು ಬಂಧಿಸಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಈ ಪ್ರಕರಣದ ಕುರಿತು ದೇಶಾದ್ಯಂತ ತನಿಖೆ ನಡೆಸುತ್ತಿದ್ದ ಪೊಲೀಸರು ಕೊನೆಗೂ 50 ವರ್ಷದ ಮೈ ಉಟ್ ಟ್ರಿನ್ ಎಂಬಾಕೆಯನ್ನು ಸೆರೆ ಹಿಡಿದಿದ್ದಾರೆ. ಈಕೆ ಉತ್ತರ ಬ್ರಿಸ್ಬೇನ್‌ನ ಸ್ಟ್ರಾಬೆರಿ ತೋಟವೊಂದರಲ್ಲಿ ಸುಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ.

ಆಕರ್ಷಕ, ರಸಭರಿತ ಕೆಂಪು ಸ್ಟ್ರಾಬೆರಿಯನ್ನು ಮಾರುಕಟ್ಟೆಯಿಂದ ಕೊಂಡೊಯ್ದಾಗ ಅದರೊಳಗೆ ಹೊಲಿಗೆ ಸೂಜಿ ಕಂಡುಬರುತ್ತಿದ್ದವು. ಆಸ್ಟ್ರೇಲಿಯಾದ ವಿವಿಧೆಡೆಯಿಂದ ಈ ಕುರಿತು ದೂರುಗಳು ಬರುತ್ತಿದ್ದವು. 160 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ಮೌಲ್ಯದ (116 ಮಿಲಿಯನ್ ಅಮೆರಿಕನ್ ಡಾಲರ್) ಆಸ್ಟ್ರೇಲಿಯಾದ ಸ್ಟ್ರಾಬೆರಿ ಉದ್ಯಮಕ್ಕೇ ಕಪ್ಪು ಚುಕ್ಕೆ ತಂದಿತ್ತು ಈ ಸೂಜಿ ಕಲಬೆರಕೆ ಪ್ರಕರಣ.

ಸ್ಟ್ರಾಬೆರಿ ಹಣ್ಣುಗಳಿಗೆ ಸೂಜಿ ಚುಚ್ಚಿರುವ ಕುರಿತು ಸುಮಾರು 200ರಷ್ಟು ದೂರುಗಳು ಬಂದಿದ್ದವು. ದೈತ್ಯ ಸುಪರ್‌ಮಾರ್ಕೆಟ್‌ಗಳು ಹಣ್ಣುಗಳನ್ನು ವಾಪಸ್ ಮಾಡಿದ್ದವು. ಈ ಪ್ರಕರಣದಿಂದಾಗಿ ಹಣ್ಣುಗಳಿಗೆ ಬೇಡಿಕೆಯಿಲ್ಲದೆ ಕೆಲವು ಬೆಳೆಗಾರರು ಟನ್‌ಗಟ್ಟಲೆ ಸ್ಟ್ರಾಬೆರಿಗಳನ್ನು ತಿಪ್ಪೆಗೆ ಸುರಿಯಬೇಕಾಗಿ ಬಂದಿತ್ತು.
ಈ ಮಹಿಳೆ ಮಾಲೀಕನ ಮೇಲಿನ ದ್ವೇಷದಿಂದ ಈ ಕೃತ್ಯವೆಸಗಿಬರುದು ಎಂದು ಶಂಕಿಸಲಾಗಿದೆ. ಈಕೆಯ ಮೇಲಿನ ಆರೋಪ ಸಾಬೀತಾದರೆ, 10ರಿಂದ 15 ವರ್ಷಗಳ ಶಿಕ್ಷೆಯಾಗುವ ಸಾಧ್ಯತೆಯಿದೆ.

Leave a Reply

Your email address will not be published.

Social Media Auto Publish Powered By : XYZScripts.com