ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಎನ್‌ಸಿಪಿ ಮುಖಂಡ ಶರದ್ ಪವಾರ್

52 ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಎನ್‌ಸಿಪಿ ಮುಖಂಡ ಶರದ್ ಪವಾರ್ ಇದೀಗ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಅವರು ಪ್ರಕಟಿಸಿದ್ದಾರೆ.

ಮಹಾರಾಷ್ಟ್ರದ ಎರಡನೇ ಅತಿದೊಡ್ಡ ನಗರವಾಗಿರುವ ಪುಣೆಯಲ್ಲಿ ಕಾಫಿ ಟೇಬಲ್ ಬುಕ್ ‘ಪುಣೆ ಎಕೇ ಕಾಲಿ’ ಎಂಬ ಪುಸ್ತಕದ ಬಿಡುಗಡೆ ವೇಳೆ ಸುಧೀರ್ ಗಾಡ್ಗೀಳ್ ಅವರು ಶರದ್ ಪವಾರ್ ಹಾಗೂ ತ್ರಿಪುರಾದ ಮಾಜಿ ರಾಜ್ಯಪಾಲ ಶ್ರೀನಿವಾಸ ಪಾಟೀಲ್ ಅವರ ಸಂದರ್ಶನ ನಡೆಸಿದರು.

ಸಂದರ್ಶನದ ವೇಳೆ ಶರದ್ ಪವಾರ್, ಪುಣೆ ಜತೆಗಿನ ತಮ್ಮ ಸಂಬಂಧವನ್ನು ಮೆಲುಕು ಹಾಕಿದರು. ಸ್ಥಳೀಯ ಕಾಲೇಜಿನಲ್ಲಿ ಕಲಿಯುತ್ತಿರುವ ವೇಳೆಯಲ್ಲಿ ಸತತ ನಾಲ್ಕು ವರ್ಷಗಳ ಕಾಲ ಚುನಾವಣೆಗಳನ್ನು ಗೆದ್ದಿದ್ದೆ ಎಂದರು.

ಬಹುಶಃ ಕಾಲೇಜು ಚುನಾವಣಾ ಗೆಲುವೇ ನನ್ನ 52 ವರ್ಷಗಳ ಚುನಾವಣಾ ರಾಜಕೀಯಕ್ಕೆ ಬುನಾದಿಯಾಯಿತು ಎಂದು ಎನ್‌ಸಿಪಿ ನಾಯಕ ಹೇಳಿದರು.
ನೀವು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂದು ಗಾಡ್ಗೀಳ್ ಕೇಳಿದಾಗ, ಇನ್ನೀಗ ಚುನಾವಣೆಯಿಲ್ಲ ಎಂದು ಒಂದೇ ಮಾತಿನಲ್ಲಿ ಪವಾರ್ ಹೇಳಿದರು.

ಮಹಾರಾಷ್ಟ್ರ ಮುಖ್ಯಮಂತ್ರಿ, ಕೇಂದ್ರ ರಕ್ಷಣೆ ಹಾಗೂ ಕೃಷಿ ಸಚಿವರಾಗಿಯೂ ಸೇವೆ ಸಲ್ಲಿಸಿದ ಹಿರಿಯ ರಾಜಕಾರಣಿ ಶರದ್ ಪವಾರ್ 1999ರಲ್ಲಿ ಕಾಂಗ್ರೆಸ್‌ನಿಂದ ಬೇರ್ಪಟ್ಟು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಕಟ್ಟಿದವರು. 77ರ ಹರೆಯದ ಇವರು ಸದ್ಯ ರಾಜ್ಯಸಭಾ ಸದಸ್ಯರಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com