ಸುಪ್ರೀಂನ ಪಟಾಕಿ ಗಡುವು ಆದೇಶ ‘ಧೂಮಲೀನ’ : ದೆಹಲಿಯಲ್ಲೀಗ ದಟ್ಟ ಹೊಗೆ

ದೀಪಾವಳಿಯಂದು ಪಟಾಕಿ ಸಿಡಿಸಲು ಸುಪ್ರೀಂ ಕೋರ್ಟ್ ನೀಡಿದ ಗಡುವಿಗೆ ಯಾರೂ ಕ್ಯಾರೇ ಅನ್ನಲಿಲ್ಲ. ಪರಿಣಾಮವಾಗಿ ರಾಜಧಾನಿ ದೆಹಲಿಯಲ್ಲೀಗ ದಟ್ಟ ಹೊಗೆ ಆವರಿಸಿದ್ದು, ವಾಯು ಗುಣಮಟ್ಟ ತೀರಾ ಕಳಪೆಯಾಗಿದೆ.

ಬುಧವಾರ ರಾತ್ರಿ 11ರ ವೇಳೆಗೆ ದೆಹಲಿಯಲ್ಲಿನ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 302 ದಾಖಲಾಗಿತ್ತು. ಇದು ತೀರಾ ಕಳಪೆ ಮಟ್ಟವಾಗಿದೆ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಇ (ಸಿಪಿಸಿಬಿ) ಹೇಳಿದೆ.

ಸಂಜೆ 7ರಿಂದಲೇ ವಾಯುಗುಣಮಟ್ಟ ಕುಸಿಯುತ್ತಾ ಹೋಯಿತು. 7ರ ಹೊತ್ತಿಗೆ 281 ಇದ್ದ ಎಕ್ಯೂಎಂ ರಾತ್ರಿ 8ರ ವೇಳೆಗೆ 291ಕ್ಕೇರಿತು. 9 ಗಂಟೆಗೆ 294 ಮತ್ತು ರಾತ್ರಿ 10ರ ವೇಳೆಗೆ 296 ತಲುಪಿತು ಎಂದು ಸಿಪಿಸಿಬಿ ಹೇಳಿದೆ.

ರಾಜಧಾನಿ ದೆಹಲಿಯ ವಾಯುಗುಣಮಟ್ಟವನ್ನು ದೃಷ್ಟಿಯಲ್ಲಿಟ್ಟುಕೊಂಡು ದೀಪಾವಳಿಯಂದು ರಾತ್ರಿ 8 ರಿಂದ 10 ರ ತನಕ ಮಾತ್ರ ಪಟಾಕಿ ಹೊಡೆಯಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಕಡಿಮೆ ಬೆಳಕು ಹಾಗೂ ಶಬ್ದವಿರುವ ಹಾಗೂ ಕಡಿಮೆ ಅಪಾಯಕಾರಿ ರಾಸಾಯನಿಕಗಳಿರುವ ಹಸಿರು ಪಟಾಕಿಗಳನ್ನು ಮಾತ್ರ ಉತ್ಪಾದಿಸಬೇಕು ಹಾಗೂ ಮಾರಾಟ ಮಾಡಬೇಕು ಎಂದೂ ಆದೇಶಿಸಿತ್ತು.

ಆದರೆ ಸುಪ್ರೀಂ ಕೋರ್ಟ್ ಆದೇಶ ಪಾಲನೆಯಾಗಲೇ ಇಲ್ಲ. ರಾತ್ರಿ 10 ಕಳೆದ ಮೇಲೂ ಭಾರೀ ಶಬ್ದದ ಪಟಾಕಿಗಳು ಸಿಡಿಯುತ್ತಲೇ ಇದ್ದವು. ಆನಂದ್ ವಿಹಾರ್, ಐಟಿಒ, ಜಹಾಂಗೀರ್‌ಪುರ ಅತ್ಯಧಿಕ ವಾಯುಮಾಲಿನ್ಯಕ್ಕೆ ಸಾಕ್ಷಿಯಾದವು. ಮಯೂರ್ ವಿಹಾರ್ ಎಕ್ಸ್ ಟೆನ್ಶನ್, ಲಜಪತ್ ನಗರ, ಲ್ಯೂಟೆನ್ಸ್ ಡೆಲ್ಲಿ, ಐಪಿ ಎಕ್ಸ್ ಟೆನ್ಶನ್, ದ್ವಾರಕಾ, ನೋಯ್ಡಾ ಸಹಿತ 78 ಸ್ಥಳಗಳಲ್ಲಿ ಸುಪ್ರೀಂ ಆದೇಶ ಉಲ್ಲಂಘನೆಯಾಗಿದ್ದು ವರದಿಯಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com