ಜಗತ್ತಿಗೆ ಆಘಾತ ನೀಡಿದ್ದ ಯೆಮೆನ್‌ನ ಅಪೌಷ್ಟಿಕ ಬಾಲಕಿ ಇನ್ನಿಲ್ಲ….!

ಕೆಲ ದಿನಗಳ ಹಿಂದೆ ಯುದ್ಧಪೀಡಿತ ಮಧ್ಯಪ್ರಾಚ್ಯ ರಾಷ್ಟ್ರ ಯೆಮೆನ್‌ನ 7ರ ಹರೆಯದ ಬಾಲೆಯೊಬ್ಬಳ ಫೊಟೋ ಇಡೀ ವಿಶ್ವಕ್ಕೇ ಆಘಾತವನ್ನು ತಂದಿತ್ತು. ಯುದ್ಧದ ಪರಿಣಾಮ ಅಲ್ಲಿನ ಜನರು ಅದೆಷ್ಟರಮಟ್ಟಿಗೆ ಬಳಲುತ್ತಿದ್ದಾರೆ ಎಂಬುದನ್ನು ಆ ಫೊಟೋ ಹೇಳುತ್ತಿತ್ತು. ಯೆಮೆನ್‌ನ ನರಕಸದೃಶ ಸ್ಥಿತಿಯನ್ನು ಜಗತ್ತಿನೆದೆರು ತೆರೆದಿಟ್ಟಿದ್ದ ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಅಮಲ್ ಹುಸೇನ್ ಎಂಬ ಬಾಲಕಿ ಇದೀಗ ಅಸುನೀಗಿದ್ದಾಳೆ.

Image result for yemeni girl

ನ್ಯೂಯಾರ್ಕ್ ಟೈಮ್ಸ್ ನಲ್ಲಿ ಮೊದಲು ಅಮಲ್ ಹುಸೇನ್‌ಳ ಫೊಟೋ ಪ್ರಕಟಗೊಂಡಿತು. ಫೊಟೋದಲ್ಲಿ ಅಮಲ್‌ಳ ದೇಹದಲ್ಲಿ ಮಾಂಸವೇ ಕಾಣುತ್ತಿರಲಿಲ್ಲ. ಬರೀ ಚರ್ಮ ಹಾಗೂ ಮೂಳೆಗಳು ಕಾಣುತ್ತಿದ್ದವು. ಅಪೌಷ್ಟಿಕತೆಯ ತೀವ್ರತೆಯನ್ನು ಅದು ಸಾರಿ ಹೇಳುತ್ತಿತ್ತು. ಜಗತ್ತಿನಾದ್ಯಂತ ಬಹುತೇಕ ಮಾಧ್ಯಮಗಳಲ್ಲಿ ಈ ಫೊಟೋ ಮರು ಪ್ರಕಟಗೊಂಡಿತು. ಆಕೆಯ ಸಂಕಷ್ಟಕ್ಕೆ ಕರಗಿದ ಜಗತ್ತಿನ ವಿವಿಧೆಡೆಯ ಜನರು ಆಕೆಗೆ ಸಹಾಯ ಮಾಡಲು ಮುಂದೆ ಬಂದಿದ್ದರು. ಹಣವನ್ನೂ ನೀಡಿದ್ದರು. ಆದರೆ ಈ ಎಲ್ಲಾ ಸಹಾಯವು ತುಂಬಾ ತಡವಾಗಿತ್ತು.

ಅಕ್ಟೋಬರ್ 18ರಂದು ಯುನಿಸೆಫ್‌ನ ಮೊಬೈಲ್ ಕ್ಲಿನಿಕ್‌ನಲ್ಲಿ ಚಿಕಿತ್ಸೆಗೆಂದು ಅಮಲ್‌ಳನ್ನು ಆಕೆಯ ತಾಯಿ ಕರೆತಂದಿದ್ದ ವೇಳೆ ಪತ್ರಿಕಾ ಛಾಯಾಗ್ರಾಹಕರ ಕಣ್ಣಿಗೆ ಈಕೆ ಬಿದ್ದಿದ್ದಳು. ಅದಾದ ಬಳಿಕ ಉತ್ತಮ ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ವೈದ್ಯರು ಕಳಿಸಿಕೊಟ್ಟಿದ್ದರು. ಆದರೆ ಹಣ ಇಲ್ಲದ ಆಕೆಯ ತಂದೆ ತಾಯಿ ಮನೆಗೆ ಕರೆತಂದಿದ್ದರು. ನಿರಾಶ್ರಿತ ಶಿಬಿರದಲ್ಲಿ ಗುರುವಾರ ಆಕೆ ಸಾವನ್ನಪ್ಪಿದ್ದಾಳೆ ಎಂದು ಆಕೆಯ ಕುಟುಂಬ ಹೇಳಿಕೊಂಡಿದೆ. ನ್ಯೂಯಾರ್ಕ್ ಟೈಮ್ಸ್ ತಂಡ ಮತ್ತೆ ಅಮಲ್‌ಗಾಗಿ ಹುಡುಕಾಟ ನಡೆಸುತ್ತಾ ಹೋದಾಗ ಈ ಸಂಗತಿ ಬೆಳಕಿಗೆ ಬಂದಿದೆ.
ಮಧ್ಯಪ್ರಾಚ್ಯ ದೇಶ ಯೆಮೆನ್ ಸಂಕಷ್ಟದಲ್ಲಿದೆ. ಯುದ್ಧದಿಂದಾಗಿ 10,000 ಮಂದಿ ಸಾವನ್ನಪ್ಪಿದ್ದಾರೆ. ಮುಂದಿನ ದಿನಗಳಲ್ಲಿ ಯೆಮೆನ್ ದೇಶದ ಅರ್ಧದಷ್ಟು ಮಂದಿ ಅಂದರೆ, 1.4 ಕೋಟಿಯಷ್ಟು ಜನರು ಕ್ಷಾಮದ ಅಪಾಯ ಎದುರಿಸಲಿದ್ದಾರೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com