ಅಂದು ಸರ್ದಾರ್‌ರನ್ನು ವಿರೋಧಿಸುತ್ತಿದ್ದ ಬಿಜೆಪಿ ಇಂದು ಪೂಜಿಸುತ್ತಿರುವುದೇಕೆ…?

ಇಂದು ಬಿಜೆಪಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯಿ ಪಟೇಲ್ ಅವರನ್ನು ಭಾರತದ ಅಭೂತಪೂರ್ವ ನಾಯಕನೆಂದು ಹಾಡಿ ಹೊಗಳುತ್ತಿದೆ. ಅತಿದೊಡ್ಡ ಮೂರ್ತಿ ನಿರ್ಮಿಸಿ ಪಟೇಲ್‌ರನ್ನು ತನ್ನ ಸ್ವತ್ತು ಎಂಬಂತೆ ಬಿಂಬಿಸುತ್ತಿದೆ.
ಆದರೆ ಕೆಲವೇ ವರ್ಷಗಳ ಹಿಂದೆ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಬಗ್ಗೆ ಬಿಜೆಪಿ ಯಾವ ಧೋರಣೆ ಹೊಂದಿತ್ತು ಎಂಬುದನ್ನು ನೆನಪಿಸಿಕೊಂಡರೆ, ಆ ಪಕ್ಷದ ದ್ವಿಮುಖ ನೀತಿ ಅರಿವಾಗುತ್ತದೆ. ಅದು 1996-97ನೇ ಇಸವಿ. ಗುಜರಾತ್‌ನಲ್ಲಿ ಶಂಕರ್ ಸಿಂಗ್ ವಘೇಲಾರ ರಾಷ್ಟ್ರೀಯ ಜನತಾ ಪಾರ್ಟಿ ಸರ್ಕಾರವಿತ್ತು. ಕೇಂದ್ರದಲ್ಲಿ ಎಚ್.ಡಿ.ದೇವೇಗೌಡ ಸರ್ಕಾರವಿತ್ತು. ಅಹಮದಾಬಾದ್‌ನ ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ದರ್ಜೆಗೇರಿತ್ತು. ಅದಕ್ಕೆ ಸರ್ದಾರ್ ವಲ್ಲಭಾಯಿ ಪಟೇಲ್ ಹೆಸರಿಡಲು ವಘೇಲಾ ಸರ್ಕಾರ ಶಿಫಾರಸು ಮಾಡಿತ್ತು. ಕೇಂದ್ರ ಸರ್ಕಾರ ಅನುಮೋದಿಸಿತ್ತು. ಆದರೆ ಅಂದು ಕಪ್ಪುಬಾವುಟ ಪ್ರದರ್ಶಿಸುವ ಮೂಲಕ ಬೀದಿಗಿಳಿದು ಸರ್ದಾರ್ ಪಟೇಲ್‌ರ ಹೆಸರಿಡಲು ವಿರೋಧಿಸಿತ್ತು ಬಿಜೆಪಿ. ಆಗ ಗುಜರಾತ್ ಬಿಜೆಪಿ ರಾಜಕೀಯದಲ್ಲಿ ಇದೇ ಮೋದಿ ಸಕ್ರಿಯರಾಗಿದ್ದರು.
ಅಂದು ವಿಮಾನ ನಿಲ್ದಾಣಕ್ಕೆ ಸರ್ದಾರ್ ಹೆಸರಿಡಲು ವಿರೋಧ ವ್ಯಕ್ತಪಡಿಸಿದ ಮಂದಿಯೇ ಇಂದು ಸರ್ದಾರ್ ಜಪದಲ್ಲಿ ತೊಡಗಿದ್ದಾರೆ. 182 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಿ ಸರ್ದಾರ್ ಪೂಜೆ ಮಾಡತೊಡಗಿದ್ದಾರೆ. ಸ್ವತಃ ಶಂಕರ್ ಸಿಂಗ್ ವಘೇಲಾ ಅವರು ಬಿಜೆಪಿಗೆ ಇದನ್ನು ನೆನಪಿಸಿದ್ದಾರೆ. ದಿಢೀರ್ ಆಗಿ ಸರ್ದಾರ್ ಪ್ರೇಮ ಯಾಕೆ ಬಂತೆಂದು ಕುಟುಕಿದ್ದಾರೆ. ರಾಜಕೀಯ ಲಾಭಕ್ಕಾಗಿ ಬಿಜೆಪಿ ಸರ್ದಾರ್ ಹೆಸರನ್ನು ಬಳಸಿಕೊಳ್ಳುತ್ತಿದೆ ಎಂದು ವಘೇಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.