ರಾಜೀನಾಮೆ ನೀಡಲು ಮುಂದಾಗಿದ್ದಾರಾ RBI ಗವರ್ನರ್ ಊರ್ಜಿತ್ ಪಟೇಲ್..?

ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಸಿಬಿಐನಲ್ಲಿ ರಾಜಕೀಯ ಮೇಲಾಟದಿಂದಾಗಿ ಅಲ್ಲೋಲ ಕಲ್ಲೋಲ ಆಗಿದ್ದಾಯ್ತು. ಇದೀಗ ರಿಸರ್ವ್ ಬ್ಯಾಂಕ್ ಸರದಿ. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಟೀಕೆಯಿಂದ ಬೇಸತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಊರ್ಜಿತ್ ಪಟೇಲ್ ಅವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಸರ್ಕಾರ ಹಾಗೂ ಆರ್‌ಬಿಐ ಗವರ್ನರ್ ಮಧ್ಯೆ ಪರಿಹರಿಸಲಾಗದಂತಹ ಬಿಕ್ಕಟ್ಟು ಸೃಷ್ಟಿಯಾಗಿದೆ. ಪಟೇಲ್ ಅವರ ಮುಂದೆ ರಾಜೀನಾಮೆ ನೀಡುವುದರ ಸಹಿತ ಎಲ್ಲಾ ಆಯ್ಕೆಗಳು ಮುಕ್ತವಾಗಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ಸಿಎನ್‌ಬಿಸಿ ಟಿವಿ18 ವರದಿ ಮಾಡಿದೆ.
2008- 2014ರ ಮಧ್ಯೆ ಸಾಲ ನೀಡುವಿಕೆಯನ್ನು ತಡೆಯಲು ಆರ್‌ಬಿಐ ವಿಫಲವಾಗಿತ್ತು. ಇದರಿಂದಾಗಿಯೇ ಬ್ಯಾಂಕ್‌ಗಳ ಅನುತ್ಪಾದಿತ ಸಾಲದ ಹೊರೆಯಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮಂಗಳವಾರ ಟೀಕಿಸಿದ್ದರು.

ಶುಕ್ರವಾರವಷ್ಟೇ ಆರ್‌ಬಿಐ ಉಪ ಗವರ್ನರ್ ವಿರಳ್ ಆಚಾರ್ಯ ಅವರು, ಕೇಂದ್ರೀಯ ಬ್ಯಾಂಕ್‌ನ ಸ್ವತಂತ್ರತೆಯನ್ನು ತಗ್ಗಿಸುವ ಪ್ರಯತ್ನವು ಸಂಭಾವ್ಯ ದುರಂತವಾಗಬಹುದು ಎಂದು ಎಚ್ಚರಿಸಿದ್ದರು.
ಆರ್‌ಬಿಐ ಕಾಯ್ದೆಯ ಸೆಕ್ಷನ್ 7ರ ಅಡಿಯಲ್ಲಿ ಸರ್ಕಾರವು ಆರ್‌ಬಿಐ ಜತೆ ಸಮಾಲೋಚನೆ ನಡೆಸಲು ಆರಂಭಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿತ್ತು. ಈ ಬೆಳವಣಿಗೆ ಸಂಬಂಧ ಪ್ರತಿಕ್ರಿಯಿಸಿರುವ ಮಾಜಿ ಹಣಕಾಸು ಸಚಿವ, ಕಾಂಗ್ರೆಸ್ ನಾಯಕ ಪಿ.ಚಿದಂಬರಂ, ಆರ್‌ಬಿಐಗೆ ಸರ್ಕಾರ ನಿರ್ದೇಶನ ನೀಡಲು ಹೊರಟಿರುವುದು ಹಾಗೂ ಆರ್‌ಬಿಐ ಕಾಯ್ದೆಯ ಸೆಕ್ಷನ್ 7ರನ್ನು ಬಳಸಿರುವುದು ಕೆಟ್ಟ ಸುದ್ದಿ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com