ಮುಖ್ಯಮಂತ್ರಿಗಳಿಂದ ಬೀದರನಲ್ಲಿ ನ.14ರಂದು ಸಹಕಾರ ಸಪ್ತಾಹ ಉದ್ಘಾಟನೆ : ಬಂಡೆಪ್ಪ ಖಾಶೆಂಪೂರ

ನ.14ರಂದು ಬೀದರ ಜಿಲ್ಲೆಯಲ್ಲಿ ರಾಜ್ಯಮಟ್ಟದ ಸಹಕಾರ ಸಪ್ತಾಹ ಉದ್ಘಾಟನಾ ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರು ಉದ್ಘಾಟಿಸಲಿದ್ದಾರೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಂಡೆಪ್ಪ ಖಾಶೆಂಪೂರ ಅವರು ಹೇಳಿದರು.

ಬೀದರನ ಪ್ರತಾಪನಗರದ ಶಾರದಾ ರೂಡಶೆಟ್ಡಿಯಲ್ಲಿ ಅ.26ರಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನ.14ರಿಂದ ನ.20ರವರೆಗೆ ದೇಶಾದ್ಯಂತ 65ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಇತ್ತಿಚೆಗೆ ತಮ್ಮ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಬೀದರನಲ್ಲಿ ಈ ಬಾರಿಯ ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಲಾಗಿತ್ತು ಎಂದು ತಿಳಿಸಿದರು. ದೇಶದ ನಾನಾ ಭಾಗಗಳಿಂದ ಸಹಕಾರಿ ಧರೀಣರು ಆಗಮಿಸಲಿದ್ದಾರೆ. ಅಂದಾಜು 40 ಸಾವಿರ ಜನಸಂಖ್ಯೆ ಸೇರುವ ನಿರೀಕ್ಷೆ ಇದೆ ಎಂದರು.

ಸಹಕಾರಿ ರಂಗದಲ್ಲಿ ಅದ್ಬುತ ಸೇವೆ ಸಲ್ಲಿಸಿದವರನ್ನು ಗುರುತಿಸಿ ವಿಭಾಗಕ್ಕೆ ಒಬ್ಬರಂತೆ ಒಟ್ಟು ಐದು ಜನರಿಗೆ ಈ ಕಾರ್ಯಕ್ರಮದಲ್ಲಿ
ಸಹಕಾರ ರತ್ನ ಪ್ರಶಸ್ತಿ ನೀಡಲಾಗುತ್ತಿದೆ ಎಂದು ತಿಳಿಸಿದರು. ಗ್ರಾಮೀಣ ಸಮೃದ್ದಿಗಾಗಿ ಸಹಕಾರ ಸಂಸ್ಥೆಗಳ ಮೂಲಕ ಉತ್ತಮ ಆಡಳಿತ ಮತ್ತು ಸರ್ವರನ್ನೊಳಗೊಂಡ ಬೆಳವಣಿಗೆ ಎಂಬುದು 65ನೇ ಸಹಕಾರ ಸಪ್ತಾಹದ ಧ್ಯೇಯವಾಗಿದೆ. ನ.14ರಂದು ಬೀದರನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಹಕಾರಿ ಮಾರಾಟ, ಸಂಸ್ಕರಣ ಮತ್ತು ಶೇಖರಣೆ ಎನ್ನುವ ಶೀರ್ಷಕೆಯಡಿ ಚರ್ಚೆ, ಚಿಂತನ ಮಂಥನ ನಡೆಯಲಿದೆ ಎಂದು ತಿಳಿಸಿದರು.

ನ.15ರಂದು ಶಿರಸಿಯಲ್ಲಿ ನಡೆಯುವ ಕಾರ್ಯಕ್ರಮವು ಸಾವಯವ ಕೃಷಿ ಮತ್ತು ಶೂನ್ಯ ಬಂಡವಾಳದ ಕೃಷಿಯಲ್ಲಿ ಸಹಕಾರ ಸಂಸ್ಥೆಗಳ ಪ್ರಮುಖ ಪಾತ್ರ ಎನ್ನುವ ವಿಷಯದ ಮೇಲೆ ಬೆಳಕು ಚೆಲ್ಲಲಿದೆ. ಸಹಕಾರ ಸಂಸ್ಥೆಗಳ ಮೂಲಕ ಮೌಲ್ಯವರ್ಧನೆ ಮತ್ತು ಬ್ರಾಂಡ್‌ ನಿರ್ಮಾಣ ವಿಷಯದ ಮೇಲೆ
ನ.16ರಾಯಚೂರ ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಚಿಂತನ ಮಂಥನ ನಡೆಯಲಿದೆ.

ನ.17ರಂದು ಮೈಸೂರಲ್ಲಿ ಕಾರ್ಯಕ್ರಮ ನಡೆಯಲಿದೆ. ನ.18ರಂದು ಹಾವೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಸರಕಾರಿ ಯೋಜನೆಗಳು ಮತ್ತು ಆದಾಯೋತ್ಪನ್ನ ಕುರಿತು ಜಾಗೃತಿ ಮೂಡಿಸುವ ಕುರಿತು ಚರ್ಚೆ ನಡೆಯಲಿದೆ. ಯುವಜನ, ಮಹಿಳಾ ಮತ್ತು ಅಬಲವರ್ಗಕ್ಕಾಗಿ ಸಹಕಾರ ಸಂಸ್ಥೆಗಳು ವಿಷಯದ ಮೇಲೆ 19ರಂದು ಚಿತ್ರದುರ್ಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವಲೋಕನ ನಡೆಯಲಿದೆ. ನ.20 ರಂದು ಶಿವಮೋಗ್ಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಕೌಶಲ್ಯ,‌ ತಾಂತ್ರಿಕತೆ ವೃದ್ದಿಪಡಿಸುವುದು ವಿಷಯದ ಮೇಲೆ ಚರ್ಚೆ ನಡೆಯಲಿದೆ ಎಂದು ಸಚಿವರು ಏಳೂ ದಿನಗಳ ಆಚರಣೆಯ ವಿಷಯಗಳನ್ನು ವಿವರಿಸಿದರು.

Leave a Reply

Your email address will not be published.