Cricket : ಶಿಖರ್ – ರೋಹಿತ್ ಶತಕಗಳ ಅಬ್ಬರ : ಪಾಕ್ ಮಣಿಸಿ ಫೈನಲ್‍ಗೆ ಲಗ್ಗೆಯಿಟ್ಟ ಭಾರತ

ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ರವಿವಾರ ನಡೆದ ಸೂಪರ್ – 4 ಹಂತದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ 9 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಜಯದ ಮೂಲಕ 4 ಅಂಕಗಳೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಏಷ್ಯಾಕಪ್ – 2018 ಟೂರ್ನಿಯ ಫೈನಲ್ ಪ್ರವೇಶಿಸಿದೆ.

ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಲಿಳಿದ ಪಾಕಿಸ್ತಾನ 50 ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ 237 ರನ್ ಮೊತ್ತ ಕಲೆಹಾಕಿತು. ಪಾಕ್ ತಂಡಕ್ಕೆ ಶೋಯೆಬ್ ಮಲಿಕ್ 78 ಹಾಗೂ ಸರ್ಫರಾಜ್ ಮೊಹಮ್ಮದ್ 44 ರನ್ ಗಳಿಸಿ ಇನ್ನೂರರ ಗಡಿ ದಾಟಲು ನೆರವಾದರು. ಭಾರತದ ಪರವಾಗಿ ಜಸ್ಪ್ರೀತ್ ಬುಮ್ರಾ, ಯಜುವೇಂದ್ರ ಚಹಲ್ ಹಾಗೂ ಕುಲದೀಪ್ ಯಾದವ್ 2 ವಿಕೆಟ್ ಪಡೆದರು.

ಗುರಿಯನ್ನು ಬೆನ್ನತ್ತಿದ ಭಾರತದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ರ ಆರಂಭಿಕ ಜೋಡಿ ಮೊದಲ ವಿಕೆಟ್ 210 ರನ್ ಜೊತೆಯಾಟವಾಡಿತು. ಅಮೋಘ ಶತಕ ದಾಖಲಿಸಿದ ಶಿಖರ್ ಧವನ್ (114) ಹಾಗೂ ರೋಹಿತ್ ಶರ್ಮಾ (111*) ಪಾಕ್ ಗೆಲುವಿನ ಕನಸಿಗೆ ತಣ್ಣೀರೆರಚಿದರು. ಅಂತಿಮವಾಗಿ ಭಾರತ 39.3 ಓವರುಗಳಲ್ಲಿ 1 ವಿಕೆಟ್ ನಷ್ಟಕ್ಕೆ 238 ರನ್ ಗಳಿಸಿ ಸುಲಭವಾಗಿ ಗೆಲುವಿನ ದಡ ಸೇರಿತು.

Leave a Reply

Your email address will not be published.