ಸೊಹ್ರಾಬುದ್ದಿನ್ ಎನ್ಕೌಂಟರ್ ಕೇಸ್ – ಪ್ರಮುಖ ಸಾಕ್ಷಿ ಪೊಲೀಸ್ ಅಧಿಕಾರಿಗೆ ಬಿಜೆಪಿಯಿಂದ ಜೀವಭಯ..!

ಪಿ ಕೆ ಮಲ್ಲನಗೌಡರ

ದೇಶವನ್ನೇ ಬೆಚ್ಚಿಬೀಳಿಸಿದ್ದ ಸೊಹ್ರಾಬುದ್ದಿನ್, ಆತನ ಪತ್ನಿ ಕೌಸರ್ ಬೀ ಮತ್ತು ಸಹಪಾಠಿ ಪ್ರಜಾಪತಿ ಎನ್‍ಕೌಂಟರ್ ಕೇಸ್‍ಗಳನ್ನು ಭೇದಿಸಿದ್ದ ದಿಟ್ಟ ಪೊಲೀಸ್ ಅಧಿಕಾರಿ ವಸಂತ್ ಸೋಲಂಕಿ ಅವರಿಗೆ ಜೀವ ಬೆದರಿಕೆಯ ಕರೆ ಬರುತ್ತಿವೆ. ಅವರೇ ಹೇಳುತ್ತಿರುವ ಪ್ರಕಾರ, ಬಿಜೆಪಿ ಸರ್ಕಾರ ಮತ್ತು ಪೊಲೀಸ್ ಇಲಾಖೆಯಿಂದ ಅವರ ಹತ್ಯೆಗೆ ಸಂಚು ನಡೆದಿದೆ.
ನಿನ್ನೆ ಸೆಪ್ಟೆಂಬರ್ 21ರಂದು ಬಾಂಬೆಯ ಸಿಬಿಐ ಕೋರ್ಟಿನಲ್ಲಿ ಸಾಕ್ಷ್ಯ ನುಡಿಯಬೇಕಿದ್ದ ಅವರು, ಜೀವಭಯದಿಂದ ಕೋರ್ಟಿಗೆ ಹಾಜರಾಗಿಲ್ಲ. ಕೇವಲ ತಿಂಗಳ ಹಿಂದಷ್ಟೇ ಅವರಿಗೆ ನೀಡಿದ್ದ ಭದ್ರತೆಯನ್ನು ಗುಜರಾತ್ ಸರ್ಕಾರ ಹಿಂಪಡೆದಿದೆ. ಈಗ ಈ ಕೇಸಿನಲ್ಲಿ ಉಳಿದಿರುವ ಬಲವಾದ ಏಕೈಕ ಸಾಕ್ಷಿ ವಿಜಯ್ ಸೋಲಂಕಿ ಅವರೇ ಆಗಿದ್ದು, ಎನ್‍ಕೌಂಟರ್‍ನಕಲಿ ಎಂಬುದಕ್ಕೆ ಅವರ ಬಳಿ ಸಾಕಷ್ಟು ಮಾಹಿತಿಗಳಿವೆ.
13 ವರ್ಷದ ಹಿಂದೆ ಇದೇ ಪೊಲೀಸ್ ಅಧಿಕಾರು ವಸಂತ್ ಸೋಲಂಕಿಯವರಿಗೆ ಸೊಹ್ರಾಬುದ್ದಿನ್ ಎನಕೌಂಟರ್ ಕೇಸಿನ ತನಿಖೆಯ ಜವಾಬ್ದಾರಿಯನ್ನು ಗುಜರಾತ್ ಸರ್ಕಾರ ವಹಿಸಿತ್ತು. ದಿಟ್ಟ, ಪ್ರಾಮಾಣಿಕ ಸೋಲಂಕಿ ಅದೊಂದು ನಕಲಿ ಎನ್‍ಕೌಂಟರ್ ಎಂದು ಪ್ರೂವ್ ಮಾಡಲು ಸಾಕಷ್ಟು ಸಾಕ್ಷ್ಯಗಳನ್ನು ಕಲೆ ಹಾಕಿದ್ದರು. ತಮ್ಮದೇ ಇಲಾಖೆಯ ಕೆಲವು ಹಿರಿಯ ಅಧಿಕಾರಿಗಳು ಜೈಲಿಗೆ ಸೇರುವಂತೆ ಮಾಡಿದ್ದರು. ಈ ನಕಲಿ ಎನ್‍ಕೌಂಟರ್ ಹಿಂದೆ ಗುಜರಾತ್ ಸರ್ಕಾರದ ಪ್ರಮುಖ ಸಚಿವರ ಪಾತ್ರ ಇದೆ ಎಂದು ಅವರು ಪ್ರತಿಪಾದಿಸಿದ್ದರು. ಈ ಕಾರಣದಿಂದಾಗಿಯೇ ಅಂದಿನ ಗುಜರಾತ್ ಗೃಹ ಸಚಿವ ಅಮಿತ್ ಶಾ ಕೂಡ ಜೈಲು ಪಾಲಾಗಿದ್ದರು.
ಆದರೆ, 2014ರಲ್ಲಿ ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ಮೇಲೆ ಸಿಬಿಐ ಈ ಕೇಸಿನಲ್ಲಿ ಆಸಕ್ತಿಯನ್ನು ಕಳೆದುಕೊಂಡಿತು. ಸಾಕ್ಷಿಗಳು ವ್ಯತಿರಿಕ್ತ ಹೇಳಿಕೆಗಳನ್ನು ನೀಡತೊಡಗಿದವು. ಇದರಿಂದಾಗಿ ಮೊದಲ ಆರೋಪಿ ಅಮಿತ್ ಶಾ, ಪೊಲೀಸ್ ಅಧಿಕಾರಿಗಳಾದ ವಂಜಾರಾ, ದಿನೇಶ್, ರಾಜಕುಮಾರ್ ಪಾಂಡಿಯನ್ ದೋಷಮುಕ್ತರಾದರು. ಒಟ್ಟು 38 ಆರೋಪಿಗಳ ಪೈಕಿ ಈಗ ಕೇವಲ 22 ಆರೋಪಿಗಳು ಮಾತ್ರ ಕೇಸ್ ಎದುರಿಸುತ್ತಿದ್ದಾರೆ. ಸ್ವತ: ಸೋಹ್ರಾನುದ್ದಿನ್ ಸಹೋದರರು ಕೂಡ ಹಿಂದಕ್ಕೆ ಸರಿಯುವಂತೆ ಒತ್ತಡ ಹೇರಲಾಗಿತು. ಆದರೆ ಪ್ರಮುಖ ಸಾಕ್ಷಿಯಾಗಿರುವ ಸೋಲಂಕಿ ಯಾವುದೇ ಬೆದರಿಕೆಗೂ ಬಗ್ಗದೇ ದೃಢವಾಗಿ ಉಳಿದಿದ್ದಾರೆ. ಸೋಲಂಕಿ ಸಾಕ್ಷ್ಯ ನುಡಿದರೆ ತಮಗೆ ಅಪಾಯ ಎಂದು ಅರಿತಿರುವ ಕೆಲವು ಶಕ್ತಿಗಳು ಅವರ ಹತ್ಯೆಗೆ ಸಂಚು ರೂಪಿಸಿವೆ.
‘ಈ ಕೇಸ್‍ನಲ್ಲಿ ನ್ಯಾಯಾಧೀಶರಾಗಿದ್ದ ಜಸ್ಟೀಸ್ ಲೋಯಾ ಅವರೇ ಸಂಶಯಾಸ್ಪದ ಸಾವಿಗೆ ಈಡಾದರು. ನಿವೃತ್ತನಾಗಿರುವ ನನ್ನಂತಹ ಪೊಲೀಸ್ ಅಧಿಕಾರಿಯನ್ನು ಕೊಲ್ಲದೇ ಬಿಟ್ಟಾರೆಯೇ?’ ಎಂದು ಸೋಲಂಕಿ ತಮ್ಮ ಪರಿಸ್ಥಿತಿಯನ್ನು ಕೋರ್ಟ್, ಸಿಬಿಐ ಗಮನಕ್ಕೆ ತಂದಿದ್ದಾರೆ. ಈಗ ಅವರ ಭದ್ರತೆಗೆ ಏರ್ಪಾಟು ಮಾಡುವಂತೆ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
ಅಂಬೇಡ್ಕರ್‍ವಾದಿಯಾಗಿರುವ ಸೋಲಂಕಿ ನಕಲಿ ಎನ್‍ಕೌಂಟರ್ ಹಿಂದಿರುವ ಜೈ ಪ್ರೊಫೈಲ್ ‘ಗಣ್ಯರ’ ಮುಖವಾಡವನ್ನು ಬಯಲುಗೊಳಿಸುವ ಶಪಥ ಮಾಡಿದ್ದಾರೆ. ಅವರಿಗೆ ಅವರ ಪತ್ನಿ, ಮಕ್ಕಳು ಬೆಂಬಲವಾಗಿ ನಿಂತಿದ್ದಾರೆ. ಆ ಕೆಲಸವನ್ನು ನಾವು-ನೀವು ಮಾಡಬೇಕಾದ ಅಗತ್ಯವಿದೆ ಕೂಡ.

Leave a Reply

Your email address will not be published.