ಬಿಜೆಪಿಯ ನಕಲಿ ದೇಶಭಕ್ತಿಯೂ.. ಯುಜಿಸಿಯ ಬೌದ್ಧಿಕ ದಿವಾಳಿತನವೂ..

ಸೆಪ್ಟೆಂಬರ್ 29ನೇ ದಿನವನ್ನು ಎಲ್ಲ ವಿಶ್ವವಿದ್ಯಾಲಯಗಳು ಸರ್ಜಿಕಲ್ ದಾಳಿಯ ದಿನ ಎಂದು ಆಚರಣೆ ಮಾಡಬೇಕೆಂದು ಸೂಚಿಸುವ ಮೂಲಕ ಯುಜಿಸಿ ತನ್ನ ಬೌದ್ಧಿಕ ದಿವಾಳಿತನವನ್ನು ಪ್ರದರ್ಶಿಸಿದೆ. ಇನ್ನೊಂದು ಕಡೆ ಮುಂದಿನ ಚುನಾವಣೆಯನ್ನು ಗುರಿಯಾಗಿ ಇಟ್ಟುಕೊಂಡು ಇಂತಹ ನಕಲಿ ದೇಶಪ್ರೇಮದ ಆಟಗಳನ್ನು ಆಡಲಿರುವ ಮುನ್ಸೂಚನೆಯನ್ನು ಕೇಂದ್ರ ಸರ್ಕಾರ ನೀಡಿದೆ.
ನಮ್ಮ ಸೈನ್ಯದ ಬದ್ಧತೆಯನ್ನು ಅವಮಾನಿಸುವ ಕೆಲಸ ಇದಾಗಿದ್ದು, ರಾಜಕೀಯ ಲಾಭಕ್ಕಾಗಿ ತಾವು ಯಾವ ಮಟ್ಟಕ್ಕಾದರೂ ಇಳಿಯಬಹುದು ಎಂಬುದನ್ನು ಬಿಜೆಪಿ ಮತ್ತೊಮ್ಮೆ ಪ್ರದರ್ಶಿಸಿದೆ.
ಭಾರತ-ಪಾಕ್ ಗಡಿಯ ನಿಯಂತ್ರಣ ರೇಖೆಯ ಸಮೀಪ ಇಂತಹ ಹತ್ತಾರು ಸರ್ಜಿಕಲ್ ದಾಳಿಗಳನ್ನು ನಮ್ಮ ಸೇನೆ ಹಿಂದಿನಿಂದಲೂ ನಡೆಸುತ್ತಲೇ ಬಂದಿದೆ. ಆದರೆ ಅದ್ಯಾವುದನ್ನು ಸರ್ಕಾರಗಳು ರಾಜಕೀಯ ಲಾಭಕ್ಕೆ ಬಳಸಿಕೊಂಡಿರಲಿಲ್ಲ. ಹಾಗೆ ನೋಡಿದರೆ ನಮ್ಮ ಸೇನೆಯ ಇತಿಹಾಸದಲ್ಲಿರುವ ಸಾಹಸಗಾಥೆಗಳಿಗೆ ಹೋಲಿಸಿದರೆ ಸೆಪ್ಟೆಂಬರ್ 29ರ ದಾಳಿ ಒಂದು ಸಣ್ಣ ಮತ್ತು ಸಹಜ ಸಾಹಸವಷ್ಟೇ.
ಯುಜಿಸಿ ಮತ್ತು ಈ ಸರ್ಕಾರಕ್ಕೆ ನಮ್ಮ ಸೇನೆಯ ಬಗ್ಗೆ ನಿಜಕ್ಕೂ ಗೌರವವಿದ್ದರೆ, ಆಚರಿಸಲು ಎಷ್ಟೊಂದು ನಿದರ್ಶನಗಳಿದ್ದವು? 1947ರ ಅಕ್ಟೋಬರ್‍ನಲ್ಲಿ ಪಾಕಿಸ್ತಾನದ ದಾಳಿಕೋರರಿಂದ ಶ್ರೀನಗರವನ್ನು ನಮ್ಮ ಸೇನೆ ರಕ್ಷಿಸಿದ್ದು ಕಡಿಮೆ ಸಾಧನೆಯೇ? 1948ರ ಅಂತ್ಯದಲ್ಲಿ ನಮ್ಮ ಸೇನೆಯು ಅತ್ಯಂತ ಜಾಣ್ಮೆ ಮತ್ತು ಶೌರ್ಯದಿಂದ ಝೋಜಿ ಲಾ ಪ್ರದೇಶವನ್ನು ವಶಪಡಿಸಿಕೊಂಡಿದ್ದು ಯುಜಿಸಿಗೆ ಗೊತ್ತಿಲ್ಲವೇ? 1965ರ ಸಮರದಲ್ಲಿ ಹಾಜಿ ಪಿರ್ ಪ್ರದೇಶವನ್ನು ವಶಪಡಿಸಿಕೊಂಡಿದ್ದು ನಮ್ಮ ಸೇನೆಯ ಸಾಹಸವಲ್ಲವೇ?
ಎಲ್ಲಕ್ಕಿಂತ ಮುಖ್ಯವಾಗಿ ಬಾಂಗ್ಲಾ ವಿಮೋಚನೆ ಮಾಡಿದ ಸೇನೆಯ ಶ್ರಮವನ್ನು ಇವರೆಲ್ಲ ಮರೆತುಬಿಟ್ಟರೆ? ಎನ್‍ಡಿಎ-1 ಸರ್ಕಾರದ ಮೂರ್ಖತನದ ಕಾರಣದಿಂದ ನಡೆದ ಕಾರ್ಗಿಲ್ ಯುದ್ಧದಲ್ಲಿ ನಮ್ಮ ಸೇನೆ ವಿಜಯ ಸಾಧಿಸಿದ್ದು ಈ ಸರ್ಕಾರಕ್ಕೆ ಮುಖ್ಯವೇ ಅಲ್ಲವೇ?
ಸೆಪ್ಟೆಂಬರ್ 29ರ ಸರ್ಜಿಕಲ್ ದಾಳಿಯ ಪೋಸ್ಟರ್‍ಗಳನ್ನು ಉತ್ತರಪ್ರದೇಶ ಚುನಾವಣೆಯಲ್ಲಿ ಬಳಸಿ ಸೇನೆಗೆ ಅವಮಾನಿಸಿದ ಬಿಜೆಪಿ, ಈಗ 2019ರ ಚುನಾವಣೆಯಲ್ಲೂ ಮತ್ತದೇ ಹುಸಿ ದೇಶಪ್ರೇಮದ ರಾಜಕಾರಣ ಆರಂಭಿಸಲು ಹೊರಟಿದೆಯೇ?
ರಫೇಲ್ ಹಗರಣ ಮುಚ್ಚಿ ಹಾಕಲು ಸುಳ್ಳುಗಳ ಬಲೆಯನ್ನೇ ಹೆಣೆಯುತ್ತಿರುವ ಬಿಜೆಪಿ, ಯುವಜನರ ಗಮನ ಸೆಳೆಯಲು ಸೇನೆಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲು ಹೊರಟಿದೆ. ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಜವಾಬ್ದಾರಿ ಮರೆತಿರುವ ಯುಜಿಸಿ ಹುಸಿ ದೇಶಭಕ್ತರ ಗುಲಾಮನಂತೆ ವರ್ತಿಸುತ್ತಿದೆ. ವಿಶ್ವವಿದ್ಯಾಲಯಗಳು ಯುಜಿಸಿಯ ಈ ಹೊಣೆಗೇಡಿತನವನ್ನು ಪ್ರಶ್ನಿಸುವ ಮೂಲಕ ತಮ್ಮ ಪ್ರತಿಭಟನೆಯನ್ನು ದಾಖಲಿಸಬೇಕಿದೆ.

Leave a Reply

Your email address will not be published.

Social Media Auto Publish Powered By : XYZScripts.com