ಬಿಜೆಪಿಯ ನಿರ್ಲಜ್ಜ ಸುಳ್ಳು..! ‘ಯುಪಿಎ ಒಪ್ಪಂದದಲ್ಲೇ ರಿಲಾಯನ್ಸ್ ಇತ್ತಂತೆ..!’

ಪಿ ಕೆ ಮಲ್ಲನಗೌಡರ

‘2013ರಲ್ಲೇ ರಿಲಾಯನ್ಸ್ ಮತ್ತು ಡಸಾಲ್ಟ್ ನಡುವೆ ಡಿಫೇನ್ಸ್ ಕ್ಷೇತ್ರದಲ್ಲಿ ಒಪ್ಪಂದವಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬರುವ ಮೊದಲೇ ರಿಲಾಯನ್ಸ್ ಮತ್ತು ಡಸಾಲ್ಟ್ ನಡುವೆ ‘ತಿಳುವಳಿಕೆಯ ಪತ್ರ’ (ಎಂಒಯು)ಕ್ಕೆ ಸಹಿ ಹಾಕಲಾಗಿತ್ತು. ಹಾಗಾಗಿ ಯುಪಿಎ-2ರ ರಫೇಲ್ ಒಪ್ಪಂದದಲ್ಲೇ ರಿಲಾಯನ್ಸ್ ಅದರ ಭಾಗವಾಗಿತ್ತು’ ಎಂದು ಬಿಜೆಪಿ ಜನರನ್ನು ದಾರಿ ತಪ್ಪಿಸುತ್ತಿದೆ. ಇದನ್ನೇ ಕಾನೂನು ಸಚಿವ ರವಿಶಂಕರ ಪ್ರಸಾದ್, ರಾಜ್ಯಸಭಾ ಸದಸ್ಯ ರಾಜೀವ ಚಂದ್ರಶೇಖರ್ ಟ್ವೀಟ್ ಮಾಡುತ್ತ ಸುಳ್ಳಿನ ಸರದಾರರಾಗುತ್ತಿದ್ದಾರೆ.
ಅಸಲಿ ಸತ್ಯ ಏನೆಂದರೆ, ಇವರು ಹೇಳುತ್ತಿರುವ ರಿಲಾಯನ್ಸ್ ಅನಿಲ್ ಅಂಬಾನಿಯದ್ದಲ್ಲ. ಅದು ಮುಖೇಶ್ ಅಂಬಾನಿಯ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್! 2012ರಲ್ಲಿ ಡಫಾಲ್ಟ್ ಮತ್ತು ಮುಖೇಶ ಅಂಬಾನಿಯ ರಿಲಾಯನ್ಸ್ ನಡುವೆ ರಕ್ಷಣಾ ಕ್ಷೇತ್ರದಲ್ಲಿ ಪಾಲುದಾರಿಕೆ ಹೊಂದಲು ಒಂದು ಒಪ್ಪಂದವಾಗಿತ್ತಷ್ಟೇ. ಇದಕ್ಕೂ ಯುಪಿಎ-2ರ ರಫೇಲ್ ಒಪ್ಪಂದಕ್ಕೂ ಯಾವುದೇ ಸಂಬಂಧವೇ ಇಲ್ಲ. ಅಲ್ಲದೇ ಮುಖೇಶರ ರಿಲಾಯನ್ಸ್ ರಕ್ಷಣಾ ಕ್ಷೇತ್ರದ ವ್ಯವಹಾರದಿಂದ ಹಿಂದೆ ಸರಿದಿತ್ತು. ಆ ಒಪ್ಪಂದವೂ ಅಲ್ಲಿಗೇ ಮುರಿದುಬಿದ್ದಿತ್ತು.


ಆದರೆ ಈಗ ವಿವಾದದಲ್ಲಿರುವ ರಿಲಾಯನ್ಸ್ ಡಿಫೇನ್ಸ್ ಕಂಪನಿ ಅನಿಲ್ ಅಂಬಾನಿಗೆ ಸೇರಿದ್ದು, ಇದು 2015ರ ಎಪ್ರಿಲ್ 10ರಂದು ಮೋದಿ ಹೊಸ ರಫೇಲ್ ಒಪ್ಪಂದ ಘೋಷಿಸಿದ 13 ದಿನಗಳ ಹಿಂದಷ್ಟೇ ಹುಟ್ಟಿತ್ತು! ಮಾರ್ಚ್ 26, 2015ರಂದು ತರಾತುರಿಯಲ್ಲಿ ಈ ಕಂಪನಿ ಸಿಜೇರಿಯನ್ ವಿಧಾನದಲ್ಲಿ ಜನ್ಮ ತಾಳಿತ್ತು. ಈಗ ವಿವಾದದಲ್ಲಿ ಇರುವುದು ಈ ಅನಿಲ್ ಅಂಬಾನಿಯ ರಿಲಾಯನ್ಸೇ ಹೊರತು, ಮುಖೇಶ್ ಅಂಬಾನಿಯ ರಿಲಾಯನ್ಸ್ ಅಲ್ಲ.
ಈ ಸತ್ಯವನ್ನು ಮರೆಮಾಚಿದ ಬಿಜೆಪಿ, ‘2014ರಲ್ಲಿ ನಾವು ಅಧಿಕಾರಕ್ಕೆ ಬರುವ ಮೊದಲೇ ಡಸಾಲ್ಟ್ ಮತ್ತು ರಿಲಾಯನ್ಸ್ ನಡುವೆ ಒಪ್ಪಂದವಾಗಿತ್ತು’ ಎಂದಷ್ಟೇ ಹೇಳುತ್ತಿದೆ. ಆದರೆ ಅದು ಮುಖೇಶರ ರಿಲಾಯನ್ಸ್ ಎಂಬುದನ್ನು ಮತ್ತು ಇದಕ್ಕೂ ರಫೇಲ್ ಒಪ್ಪಂದಕ್ಕೂ ಯಾವ ಸಂಬಂಧವೂ ಇಲ್ಲ ಎಂಬುದನ್ನು ಬೇಕೆಂತಲೇ ಮುಚ್ಚಿಡುತ್ತಿದೆ.
ಫೇಕ್ ನ್ಯೂಸ್‍ಗಳಿಂದ ಚುನಾವಣೆಯಲ್ಲಿ ಒಂದಿಷ್ಟು ಮೇಲುಗೈ ಪಡೆದ ಅನುಭವವಿರುವ ಬಿಜೆಪಿ, 2019ರ ಚುನಾವಣೆಯನ್ನು ಫೇಕ್‍ನ್ಯೂಸ್‍ಗಳ ಸವಾರಿಯಿಂದಲೇ ಗೆಲ್ಲಲು ಹೊರಟದಂತಿದೆ!
ಅಂದಂತೆ, ಅದರ ಬಳಿ ಜನರ ಬಳಿ ಹೋಗಲು ಉಳಿದಿರುವ ಇಶ್ಯೂಗಳಾದರೂ ಎಲ್ಲಿವೆ? ಈಗ ಅದರ ಪಾಲಿಗೆ ಫೇಕ್‍ನ್ಯೂಸ್ ಮತ್ತು ಕೋಮುವಾದಗಳೇ ಅಸ್ತ್ರಗಳಾಗುವ ಸಾಧ್ಯತೆಗಳು ಈಗಲೇ ಗೋಚರಿಸತೊಡಗಿವೆ.
(ಮಾಹಿತಿಮೂಲ: ಅಲ್ಟ್‍ನ್ಯೂಸ್ ಪೋರ್ಟಲ್)

——————
ಫೋಟೊ 1: ಸಂಬಂಧವೇ ಇಲ್ಲದ ದಾಖಲೆ ತೋರಿಸಿ ದಾರಿ ತಪ್ಪಿಸಲು ಯತ್ನಿಸಿದ ಸಚಿವ ರವಿಶಂಕರ ಪ್ರಸಾದ್
ಫೋಟೊ2: ಈಗ ವಿವಾದದಲ್ಲಿರುವ ರಿಲಾಯನ್ಸ್ ಡಿಫೇನ್ಸ್ ಕಂಪನಿ ಸ್ಥಾಪನೆಯಾಗಿದ್ದು 28-03-2015ರಂದು ದಾಖಲೆ ತೋರಿಸುತ್ತಿರುವ ಕಾರ್ಪೊರೇಟ್ ವ್ಯವಹಾರ ಸಚಿವಾಲಯದ ವೆಬ್‍ಸೈಟ್.

Leave a Reply

Your email address will not be published.