ಹಣ ಪಡೆದು ಜನರಿಗೆ ಪಂಗನಾಮ ಹಾಕಿದ ಕಂಪನಿ : ನ್ಯಾಯ ಬೇಕೆಂದು ಮೋಸಹೋದವರಿಂದ ಪ್ರತಿಭಟನೆ

ಮೈಸೂರು : ಪರಿಣಿತಾ ಪ್ರಾಪರ್ಟೀಸ್ & ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಯಲ್ಲಿ ಜನರಿಂದ ಹಣ ಪಡೆದುಕೊಂಡು ವಾಪಸ್​ ಹಣ ನೀಡದೆ ವಂಚಿಸಿದ್ದು, ಮೋಸಹೋದ ಜನರು ಕಂಪನಿಯ ಎದುರು ಪ್ರತಿಭಟನೆ ನಡೆಸುತ್ತಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.


ಕುವೆಂಪುನಗರ ಠಾಣಾ ವ್ಯಾಪ್ತಿಯಲ್ಲಿರುವ ಕಂಪನಿಯ ಮಾಲೀಕ ಶ್ರೀರಾಮಪುರ ಎರಡನೇ ಹಂತದ ನಿವಾಸಿ ಮಂಜುನಾಥ್ ಎಂಬಾತ ಜನರಿಂದ ಹಣ ಪಡೆದುಕೊಂಡು ಜನರಿಗೆ ಡಿವಿಡೆಂಟ್, ಇಂಟರೆಸ್ಟ್ ನೀಡದೇ ವಂಚಿಸಿದ್ದ ಎನ್ನಲಾಗಿದೆ. ಹಾರೋಹಳ್ಳಿ, ಮೈಸೂರು ಸೇರಿದಂತೆ ವಿವಿಧೆಡೆಯ ಮಂದಿ ಇಲ್ಲಿ ಹಣವನ್ನು  ತೊಡಗಿಸಿದ್ದರು.

ಆದರೆ ಈತ ಮರಳಿ ನೀಡದೆ ವಂಚಿಸಿದ್ದಾನೆ ಎಂದು ಮೋಸ ಹೋದ ಮಂದಿ ಪ್ರತಿಭಟನೆ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ಪ್ರತಿಭಟನಾಕಾರರು ಹಲವು ದಿನಗಳಿಂದ ಮಾಲೀಕ ಮಂಜುನಾಥ್ ನಮ್ಮ ಕೈಗೆ ಸಿಗುತ್ತಿಲ್ಲ. ತಪ್ಪಿಸಿಕೊಂಡು ಓಡಾಡುತ್ತಿದ್ದಾನೆ. ಮನೆಯವರಿಂದ ಇಲ್ಲವೆಂದು ಹೇಳಿಸುತ್ತಿದ್ದಾನೆ. ಕಷ್ಟಪಟ್ಟು ದುಡಿದ ಹಣವನ್ನು ಅವನ ಬಳಿ ಹೂಡಿಕೆ ಮಾಡಿದ್ದೆವು. ನಮ್ಮ  ಹಣವನ್ನು ಲಪಟಾಯಿಸಿದ್ದಾನೆ. ನಮಗೆ ನ್ಯಾಯ ಬೇಕು. ನಮ್ಮ ಹಣವನ್ನು ಮರಳಿ ನೀಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಕುವೆಂಪುನಗರ ಪೊಲೀಸರು ಆಗಮಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈಗಾಗಲೇ ಸರಸ್ವತಿಪುರಂ ಪೊಲೀಸ್ ಠಾಣೆ ಮತ್ತು ನಂಜನಗೂಡು ಪೊಲೀಸ್ ಠಾಣೆಗಳಲ್ಲಿ ಮಂಜುನಾಥನ ವಿರುದ್ಧ ದೂರು ದಾಖಲಾಗಿದೆ.

 

Leave a Reply

Your email address will not be published.