ಕೊಡವ ಭಾಷೆಯಲ್ಲಿ ಬೈಬಲ್​ : ಕೊಡಗಿನವರಿಂದ ಪುಸ್ತಕವನ್ನು ರದ್ದು ಮಾಡುವಂತೆ ಆಗ್ರಹ..!

ಬೆಂಗಳೂರು :  ಕೊಡವ ಭಾಷೆಯಲ್ಲಿ ಹೊರತರಲಾಗಿರುವ ಬೈಬಲ್​ಗೆ ಕೊಡಗಿನಲ್ಲಿ ತೀವ್ರ ಆಕ್ಷೇಪ ಕೇಳಿಬರುತ್ತಿದೆ. ಕೊಡವ ಭಾಷೆಯಲ್ಲಿ ಕನ್ನಡ ಲಿಪಿಯನ್ನು ಬಳಸಿ ಕೊಡವ ತಕ್ಕ್ ಬೈಬಲ್​ ಹೊರತಂದಿದ್ದು, ಇದರಿಂದ ಕೊಡಗಿನವರು ಅಸಮಾಧಾನ ವ್ಯಕ್ತವಾಗಿದೆ.

ಇತ್ತೀಚೆಗೆ ಕೊಡವ ಭಾಷೆಯಲ್ಲಿ ಬೈಬಲ್ಅನ್ನು​ ಬೆಂಗಳೂರಿನ ಉದ್ಯಮಿ ರಾಬರ್ಟ್ ಕ್ರಿಸ್ಟೋಫರ್ ಎಂಬವರು ಕನ್ನಡ ಲಿಪಿಯಲ್ಲಿ ಬರೆದಿದ್ದು ಬೆಂಗಳೂರಿನಲ್ಲಿ ಬಿಡುಗಡೆಯೂ ಮಾಡಲಾಗಿತ್ತು.  ಗೂಗಲ್ ಪ್ಲೇ ಸ್ಟೋರ್​ನಲ್ಲಿ ಕೊಡವ ತಕ್ಕ್ ಬೈಬಲ್​ ಎಂಬ ಆ್ಯಪ್​ ಕೂಡಾ ಇದೆ. ಇದಕ್ಕೆ ಕೊಡವರು, ಕೊಡವ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿವೆ. ಕೊಡವ ಸಮುದಾಯದಲ್ಲಿ ಕ್ರೈಸ್ತರಿಲ್ಲ. ಕೊಡವ ಭಾಷೆಯಲ್ಲಿ ಬೈಬಲ್​ ಹೊರತರುವ ಮೂಲಕ ಮತಾಂತರ ಮಾಡುವ ಹುನ್ನಾರ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕೊಡವ ಮಕ್ಕಡ ಕೂಟ, ಕೊಡವ ಭಾಷೆಯ ಬೈಬಲ್​ಗೆ ಖಂಡನೆ ವ್ಯಕ್ತಪಡಿಸಿದ್ದು, ಈ ಬಗ್ಗೆ ಸಂಬಂಧಿಸಿದವರು ಕೂಡಲೇ ಎಚ್ಚೆತ್ತುಕೊಂಡು ಆ ಪುಸ್ತಕವನ್ನು ರದ್ದು ಮಾಡುವಂತೆ ಆಗ್ರಹಿಸಿದೆ. ಕೊಡವ ಜನಾಂಗದವರು ಪ್ರಕೃತಿಯ ಆರಾಧಕರಾಗಿದ್ದು, ಕೊಡವರ ಎಲ್ಲಾ ಹಬ್ಬಗಳು ಭೂಮಿಗೆ ಸಂಬಂಧಿಸಿದ್ದಾಗಿದೆ ಹಾಗೂ ಗುರು ಕಾರೋಣರನ್ನು ಪೂಜಿಸುವವರಾಗಿದ್ದೇವೆ. ಆದರೆ ಕೊಡವ ಭಾಷೆಯಲ್ಲಿ ಬೈಬಲ್ ಪ್ರಕಟಿಸುವ ಅವಶ್ಯಕತೆ ಏನಿತ್ತು ಎಂದು ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಪ್ರಶ್ನಿಸಿದ್ದಾರೆ.

ಆಗಸ್ಟ್ 14ರಿಂದ ಸತತ ಮಳೆಯಿಂದ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿ ಜನರು ಮನೆ, ಮಠ ಎಲ್ಲವನ್ನೂ ಕಳೆದುಕೊಂಡು ಬೀದಿ ಪಾಲಾಗಿದ್ದರು. ಇದೇ ಅವಧಿಯನ್ನು ಕೆಲವರು ಬಂಡವಾಳ ಮಾಡಿಕೊಂಡು ಅಮಾಯಕ ಜನರನ್ನು ಹಾದಿ ತಪ್ಪಿಸುವ ಉದ್ದೇಶದಿಂದ ಕೊಡವ ಭಾಷೆಯಲ್ಲಿ ಬೈಬಲ್ ಹೊರ ತಂದಿದ್ದಾರೆ. ಈ ಕೃತಿಯನ್ನು ರದ್ದು ಮಾಡದಿದ್ದಲ್ಲಿ ತೀವ್ರ ತೆರನಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದ್ದಾರೆ.

Leave a Reply

Your email address will not be published.