ಗುಂಡಿಗಳನ್ನು ಮುಚ್ಚದಿದ್ದರೆ ಬಿಬಿಎಂಪಿಯನ್ನೇ ಮುಚ್ಚಿಸುತ್ತೇನೆ : ಅಧಿಕಾರಿಗಳ ಬೆವರಿಳಿಸಿದ ಹೈಕೋರ್ಟ್

ಬೆಂಗಳೂರು : ಫ್ಲೆಕ್ಸ್ ಅನ್ನು ತೆರವುಗೊಳಿಸಿದ ಹೈಕೋರ್ಟ್​ ಇದೀಗ  ಸ್ವಚ್ಛತಾ ಕಾರ್ಯಕ್ಕೆ ಕೈಹಾಕಿದೆ. ಹೌದು ರಸ್ತೆ ಗುಂಡಿಗಳನ್ನು ಮುಚ್ಚವ ಸಂಬಂಧ ಪಟ್ಟಂತೆ ಸಲ್ಲಿಕೆಯಾಗಿರುವ ಪಿಐಎಲ್​ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆದಿದೆ. ಬಿಬಿಎಂಪಿ ಅಧಿಕಾರಿಗಳಿಗೆ ಹೈಕೊರ್ಟ್​ ಖಡಕ್​ ವಾರ್ನಿಗ್​ ನೀಡಿದೆ.

ಈ ಹಿಂದೆ ಫ್ಲೇಕ್ಸ್ ಗಳನ್ನು ತೆರಲುಗೊಳಿಸುವಂತೆ ಹೈಕೋರ್ಟ್​ ಬಿಬಿಎಂಪಿಗೆ ವಾರ್ನಿಂಗ್​ ನೀಡಿದ್ದು, ಇದೀಗ ರಸ್ತೆ ಕಾಮಗಾರಿ ಸಲುವಾಗಿ ಹೈ ಕೋರ್ಟ್​ ವಾರ್ನ್​ ಮಾಡಿದೆ. ಬಿಬಿಎಂಪಿ ಕಾಮಗಾರಿಗೆ ಸಂಬಂಧಿಸಿದಂತೆ ಮೆಷರ್‌ಮೆಂಟ್ ಪುಸ್ತಕಗಳನ್ನು ಹೈಕೊರ್ಟ್​ಗೆ ಸಲ್ಲಿಸಿದ್ದು ಬಿಬಿಎಂಪಿ ಕಾಮಗಾರಿ ಪೂರ್ಣಗೊಂಡ ಬಳಿಕ ಅಳತೆ ಪುಸ್ತಕ ಸಿದ್ಧಪಡಿಸಲಾಗುವುದು ಎಂದು ಹೇಳಿದ್ದರು.

ಈ ಹೇಳಿಕೆಗೆ  ತೀವ್ರ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ಸಿಜೆ, ಮೆಷರ್‌ಮೆಂಟ್ ಇಲ್ಲದೇ ಕಾಮಗಾರಿಗಳನ್ನು ನಡೆಸುತ್ತೀರೇ?   ನ್ಯಾಯಾಲಯದ ಮುಂದೆ ಇಂಥ ಹೇಳಿಕೆಗಳನ್ನು ಹೇಗೆ ನೀಡುತ್ತೀರಿ? ನಾವೇನು ಇಲ್ಲಿ ತಮಾಷೆ ಮಾಡಲು ಕೂತಿದ್ದೇವೆ ಎಂದು ಕೊಂಡಿದ್ದೀರಾ? ಇದೇ ಏನು ನಿಮ್ಮ ಅಧಿಕಾರಿಗಳು ಮಾಡುವ ಕೆಲಸ? ನಿಮ್ಮ ಇಂಜಿನಿಯರ್ ಹಾಗೂ ಗುತ್ತಿಗೆದಾರರ ತಾಳಕ್ಕೆ ಕೋರ್ಟ್ ಕುಣಿಯುತ್ತದೆ ಎಂದು ಕೊಂಡಿದ್ದೀರಾ? ನಿಮ್ಮಿಂದ ಕೆಲಸ ಮಾಡಲಾಗುತ್ತಿಲ್ಲ ಎಂದೆನಿಸುತ್ತಿದೆ. ಈ ಕೆಲಸ  ಹೀಗೇ ಮುಂದುವರೆದಲ್ಲಿ ಬಿಬಿಎಂಪಿಯನ್ನೇ ಮುಚ್ಚಿಸಿ ಬಿಡುತ್ತೇನೆ. ಕೂಡಲೇ ಪಾಲಿಕೆಯನ್ನು ವಶಕ್ಕೆ ಪಡೆಯಲು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆದೇಶಿಸುತ್ತೇನೆ ಎಂದು ಸಿಜೆ  ಬಿಬಿಎಂಪಿಯ ಬೆವರಿಳಿಸಿದ್ರು.

ಬೆಂಗಳೂರು ಸ್ವಚ್ಛಗೊಳ್ಳಲೇಬೇಕು. ಫ್ಲೆಕ್ಸ್‌ನಿಂದ ಆರಂಭಗೊಂಡ ಸ್ವಚ್ಛತಾ ಕಾರ್ಯ, ರಸ್ತೆಗುಂಡಿ ಮುಚ್ಚುವುದರೊಂದಿಗೆ ಮುಗಿಯಬೇಕು. ನಗರದ ಯಾವೊಂದು ರಸ್ತೆಯಲ್ಲೂ ಒಂದೇ ಒಂದು ಗುಂಡಿಯೂ ಕಾಣಿಸಬಾರದು. ರಾತ್ರಿ ನೀವೇನು ಮಾಡುತ್ತೀರೋ ಗೊತ್ತಿಲ್ಲ. ನಾಳೆಯ ವಿಚಾರಣೆಯ ಒಳಗೆ ಗುಂಡಿ ಮುಚ್ಚಿ ನಂತರ ಗುಂಡಿ ಮುಕ್ತ ಪ್ರಮಾಣಪತ್ರ ಸಲ್ಲಿಸಿ ಎಂದು ಹೈಕೋರ್ಟ್ ತಾಕೀತು ಮಾಡಿತು.

Leave a Reply

Your email address will not be published.