ಪ್ಯಾನ್ ಆಫ್ರಿಕಾ ಬೈಕ್ ರ‍್ಯಾಲಿಯಲ್ಲಿ ಮೊದಲ ಸ್ಥಾನ ಪಡೆದ ಮೈಸೂರಿನ ಯುವಕ..!

ಭಾರತೀಯ ಯುವಕನೊರ್ವ ಪ್ಯಾನ್ ಆಫ್ರಿಕಾ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡು ಮೊದಲ ಸ್ಥಾನ ಗೆದ್ದು ಸಾಧನೆಗೈಯ್ದಿದ್ದಾನೆ. ಸಾಂಸ್ಕೃತಿಕ ನಗರಿ ಮೈಸೂರಿನ ಅಬ್ದುಲ್​ ವಾಹಿದ್ ತನ್ವೀರ್ ಸಾಧನೆ ಮಾಡಿದ ಯುವಕ. ಈತ ಆಫ್ರಿಕಾ ಖಂಡದಲ್ಲಿ ನಡೆದ ಬೈಕ್ ರ್ಯಾಲಿಯಲ್ಲಿ ಮೊದಲ ಸ್ಥಾನ ಗೆದ್ದು ದೇಶಕ್ಕೆ ಹಾಗೂ ಕರ್ನಾಟಕಕ್ಕೆ ಗೌರವ ತಂದಿತ್ತಿದ್ದಾನೆ.

ಈ ಸಾಧನೆ ಬಳಿಕ ಹುಟ್ಟೂರಿಗೆ ಹಿಂತಿರುಗಿದ ಅಬ್ದುಲ್​ ಗೆ ಮೈಸೂರಿನಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು. ಆತನ ಕುಟುಂಬಸ್ಥರು, ಸ್ನೇಹಿತರು ಸ್ವಾಗತಿಸಿ ಬರಮಾಡಿಕೊಂಡರು. ಕಳೆದ ನಾಲ್ಕು ವರ್ಷಗಳಿಂದ ಟಿವಿಎಸ್ ಕಂಪನಿ ಬೈಕ್ ರೈಡ್ ಮಾಡ್ತಿರೋ ತನ್ವೀರ್ ಈ ಬಾರಿಯ ಆಫ್ರಿಕಾ ಖಂಡದ ಬೈಕ್ ರೇಸ್ ನಲ್ಲಿ ಭಾಗಿಯಾಗಿದ್ದರು.

ಒಟ್ಟು ಮೂರು ಜನ ಭಾರತೀಯರು ಭಾಗಿಯಾಗಿದ್ದರು. ಪ್ಯಾನ್ ಆಪ್ರೀಕಾ ರೇಸ್ ನಲ್ಲಿ ಗೆದ್ದ ಏಕೈಕ ಭಾರತೀಯ ರೇಸರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಸುಮಾರು 50 ಸ್ಪರ್ಧಿಗಳಿದ್ದ ಈ ರೇಸ್ ನಲ್ಲಿ ತನ್ವೀರ್ ಮೊದಲ ಸ್ಥಾನ ಪಡೆದಿದ್ದಾರೆ.

ಈ ಸ್ಪರ್ಧೆಯಲ್ಲಿ ಮೊದಲ ಗುರಿ ಮುಟ್ಟೋ ಮೂಲಕ ಅಂತರರಾಷ್ಟ್ರೀಯ ಚಾಂಪಿಯನ್ ಟ್ರೋಫಿ ಗೆ ಮುತ್ತಿಟ್ಟಿದ್ದಾರೆ. ಮೈಸೂರು ಹೊರ ವಲಯದ ರಿಂಗ್ ರಸ್ತೆಯಿಂದ ಬೈಕ್ ಜಾಥಾ ಮೂಲಕ ಕರೆತರಲಾಯ್ತು. ಈ ವೇಳೆ ತನ್ನ ಸಾಧನೆ ಬೆಂಬಲಿಸಿದ ಎಲ್ಲರಿಗೂ ತನ್ವೀರ್ ಕೃತಜ್ಞತೆ ಸಲ್ಲಿಸಿದ್ದಾರೆ.

ಒಟ್ಟಿನಲ್ಲಿ ವಿದೇಶದ ಬೈಕ್ ರೈಡ್ ನಲ್ಲಿ ಪ್ರಥಮ ಸ್ಥಾನ ಗೆದ್ದು ಬಂದ ಮೈಸೂರಿನ ಯುವಕನ ಸಾಧನೆ ಮೆಚ್ಚುವಂತದ್ದು , ನಮ್ಮ ನೆಲದಲ್ಲಿ ಇದೆ ರೀತಿಯ ಹಲವಾರು ಪ್ರತಿಭಾವಂತರು ಎಲೆ ಮರೆಕಾಯಿ ಯಂತಿದ್ದಾರೆ ಅವರಿಗೆ ಪ್ರೋತ್ಸಾಹದ ಅಗತ್ಯವಿದೆ , ಅಂತವರನ್ನು ಗುರುತಿಸಿ ಪ್ರೋತ್ಸಾಹ ನೀಡಿದರೆ ಇನ್ನಷ್ಟು ಕ್ರೀಡಾ ಪಟುಗಳು ಸಾಧನೆಯ ಶಿಖರವನ್ನೇರುತ್ತಾರೆ.

Leave a Reply

Your email address will not be published.

Social Media Auto Publish Powered By : XYZScripts.com