ಉತ್ತರ ಕರ್ನಾಟಕಕ್ಕೆ ಬರಲು ಸಿಎಂಗೇನು ಧಾಡಿ..? : ಕೇಂದ್ರ ಸಚಿವ ರಮೇಶ ಜಿಗಜಿಣಗಿ ಗುಡುಗು

‘ ಉತ್ತರ ಕರ್ನಾಟಕ ಭಾಗಕ್ಕೆ ಬರಲು ಸಿಎಂಗೇನು ಧಾಡಿ..? ‘ ಎಂದು ಕೇಂದ್ರದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವ ರಮೇಶ ಜಿಗಜಿಣಗಿ ಗುಡುಗಿದ್ದಾರೆ. ಕಲಬುರಗಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ ರಾಜ್ಯ ಸಮ್ಮಿಶ್ರ ಸರ್ಕಾರದ್ದು ಅನೈತಿಕ ಮದುವೆ. ಕಚ್ಚಾಟದಲ್ಲಿಯೇ ಸಮಯ ಕಳೆಯುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ರಾಜ್ಯ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ ‘ ಎಂದು ಆರೋಪಿಸಿದರು.

‘ ಮುಖ್ಯಮಂತ್ರಿ ಕುಮಾರಸ್ವಾಮಿ ದಕ್ಷಿಣ ಕರ್ನಾಟಕಕ್ಕಷ್ಟೇ ಸೀಮಿತವಾಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ಮಳೆ ಇಲ್ಲದೇ ಇದ್ದರೂ ಇತ್ತ ಗಮನ ಹರಿಸುತ್ತಿಲ್ಲ ಎಂದು ಕಿಡಿಕಾರಿದರು. ಬಿಜೆಪಿ ಆಪರೇಷನ್ ಕಮಲ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಆಪರೇಷನ್ ಕಮಲ ಮಾಡ್ತಿಲ್ಲ. ಕೆಲವರು ತಾವಾಗಿಯೇ ಬಿಜೆಪಿಗೆ ಬರ್ತಿದ್ದಾರೆ. ರಾಜ್ಯ ಸರ್ಕಾರ ಸರಿಯಾಗಿ ಕೆಲಸ ಮಾಡದ ಹಿನ್ನೆಲೆ ರಮೇಶ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆಗೆ ಮುಂದಾಗಿರಬಹುದು ‘ ಎಂದು ಹೇಳಿದರು.

ಇನ್ನು ಯಡಿಯೂರಪ್ಪ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಕೇಂದ್ರದ ಆರು ಸಚಿವರು ಸೋಲುತ್ತಾರೆ ಎಂಬುದರ ಕುರಿತು ಪ್ರತಿಕ್ರಿಯಿಸಿದ ಜಿಗಜಿಣಗಿ, ‘ ಸೋಲುವ ಸಚಿವರ ಪಟ್ಟಿಯಲ್ಲಿ ನನ್ನ ಹೆಸರು ಇದ್ದರೂ ಇರಬಹುದು. ಸೋಲು ಗೆಲುವಿನ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ. ಇಲ್ಲದಿದ್ದಲ್ಲಿ ಸಾಮಾನ್ಯ ಕಾರ್ಯಕರ್ತನಂತೆ ದುಡಿಯುತ್ತೇನೆ. ಬಿಜೆಪಿ ಟಿಕೆಟ್ ಕೊಟ್ಟವರಿಗೆ 10 ರೂಪಾಯಿ ದೇಣಿಗೆ ನೀಡಿ ಅವರ ಗೆಲುವಿಗೆ ಶ್ರಮಿಸುತ್ತೇನೆ ‘ ಎಂದು ಸಚಿವ ಜಿಗಜಿಣಗಿ ಹೇಳಿದರು.

Leave a Reply

Your email address will not be published.

Social Media Auto Publish Powered By : XYZScripts.com