ಭಾರತ ಬಂದ್ ಹಿನ್ನೆಲೆ : ರಾಜ್ಯದೆಲ್ಲೆಡೆ ಬೆಂಬಲ ವ್ಯಕ್ತ – ಕೆಎಸ್ಆರ್ ಟಿಸಿ ಬಸ್ ಸಂಚಾರ ಸ್ಥಗಿತ

ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನೀಡಿರುವ ರಾಷ್ಟ್ರವ್ಯಾಪಿ ಬಂದ್ ಗೆ ರಾಜ್ಯದೆಲ್ಲೆಡೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಕೆಎಸ್ಆರ್ಟಿಸಿ ಬಸ್ ಸಂಚಾರ ಸಂಪೂರ್ಣ ಸಂಚಾರ ಸ್ಥಗಿತಗೊಂಡಿದೆ.

ರಾಮನಗರ : ದೇಶವ್ಯಾಪಿ ಕಾಂಗ್ರೆಸ್ ಕರೆ ನೀಡಿರುವ ಬಂದ್ ಗೆ ರೇಷ್ಮೆನಗರಿ ರಾಮನಗರದಲ್ಲೂ ಉತ್ತಮ ಬೆಂಬಲ ವ್ಯಕ್ತವಾಗ್ತಿದೆ. ಬಂದ್ ಬೆಂಬಲಿಸಿ ಚನ್ನಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಕಾವೇರಿ ವೃತ್ತದಲ್ಲಿ ಟೀ ಮಾರಾಟ ಹಾಗೂ ದ್ವಿಚಕ್ರ ವಾಹನಗಳನ್ನ ಹರಾಜು ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ರು. ಇನ್ನು ಕರವೇ ನಾರಾಯಣ ಗೌಡ ಬಣ ಕೂಡ ಬಂದ್ ಬೆಂಬಲಿಸಿದೆ. ಸಂಸದ ಡಿ.ಕೆ. ಸುರೇಶ್ ನೇತೃತ್ವದಲ್ಲಿ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿದೆ. ಕನಕಪುರದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಹಾವೇರಿ – ಭಾರತ್ ಬಂದ್ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಕೆ ಎಸ್ ಆರ್ ಟಿಸಿ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಬೇರೆ ಬೇರೆ ಊರಿಗೆ ತೆರಳಲು ಪ್ರಯಾಣಿಕರು ಪರದಾಡುವಂತಾಗಿದೆ. ನಿಧಾನವಾಗಿ ಎಂದಿನಂತೆ ಅಂಗಡಿ ಮುಂಗಟ್ಟುಗಳು ಪ್ರಾರಂಭವಾಗುತ್ತಿವೆ.

ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಎಂದಿನಂತೆ ಖಾಸಗಿ ವಾಹನಗಳು, ಆಟೋಗಳ ಸಂಚಾರ ಸಾಮಾನ್ಯವಾಗಿದೆ. ಸಾರ್ವಜನಿಕರಿಂದ ಆಟೋ ಚಾಲಕರು ಹೆಚ್ಚಿಗೆ ಹಣ ಕೀಳುತ್ತಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬೀಗಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಚಿಕ್ಕಮಗಳೂರು : ಭಾರತ್ ಬಂದ್ ಗೆ ಚಿಕ್ಕಮಗಳೂರು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನ್ನಡಪರ ಸಂಘಟನೆ ಕಾರ್ಯಕರ್ತರು ರಸ್ತೆಗಿಳಿದ ವಾಹನಗಳನ್ನು ತಡೆಯುತ್ತಿದ್ದಾರೆ. ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಆಟೋಗಳನ್ನ ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಧಿಕ್ಕಾರ ಹಾಕಿ ವಾಹನಗಳನ್ನು ತಡೆಯುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com