2019ರ ಚುನಾವಣೆ ವಿಪಕ್ಷಗಳಿಗೆ, ಭಾರತೀಯ ಪ್ರಜಾಪ್ರಭುತ್ವಕ್ಕೆ ಕೊನೆಯ ಅವಕಾಶ : ಅರುಣ್ ಶೌರಿ

ಪಿ.ಕೆ.ಮಲ್ಲನಗೌಡರ

‘ಮೋದಿ-ಶಾಗಳಿಂದ ಪ್ರಜಾಪ್ರಭುತ್ವ ಅಪಾಯದಲ್ಲಿ’ – ಅರುಣ್ ಶೌರಿ
‘2019ರ ಚುನಾವಣೆ ವಿಪಕ್ಷಗಳಿಗೆ, ಭಾರತೀಯ ಪ್ರಜಾಪ್ರಭುತ್ವಕ್ಕೆ ಕೊನೆಯ ಅವಕಾಶ ’
ಸೆಪ್ಟೆಂಬರ್ 1 ರಂದು ‘ದಿ ವೈರ್ ಡೈಲಾಗ್ಸ್’ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಕರಣ್ ಥಾಪರ್ ಮತ್ತು ಸಭಿಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಬಿಜೆಪಿಯ ಮಾಜಿ ಮಂತ್ರಿ, ಪತ್ರಕರ್ತ ಅರುಣ್ ಶೌರಿ, 2019ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ವಿರೋಧಪಕ್ಷಗಳ ಮೇಲಿದೆ ಎಂದರು. ಅದರಲ್ಲಿ ವಿಫಲವಾದರೆ, ಮುಂದೆಂದೂ ಈ ದೇಶದಲ್ಲಿ ನ್ಯಾಯಯುತ, ಪಾರದರ್ಶಕ ಚುನಾವಣೆಗಳೇ ನಡೆಯಲಾರವು ಎಂದು ಎಚ್ಚರಿಸಿದರು.

‘ಈ ದೇಶದ ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ಮುಕ್ತ, ನ್ಯಾಯಯುತ ಚುನಾವಣೆಗಳು ಆತಂಕದಲ್ಲಿವೆ. ಇದನ್ನು ಸರಿಪಡಿಸಲು 2019ರ ನಿರ್ಣಾಯಕ ಚುನಾವಣೆಯಲ್ಲಿ ನರೇಂದ್ರ ಮೋದಿ ಮರು ಆಯ್ಕೆ ಆಗಲೇಬಾರದು. ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ವಿರುದ್ಧ ವಿರೋಧಪಕ್ಷಗಳು ಒಬ್ಬನೇ/ಳೇ ಅಭ್ಯರ್ಥಿಯನ್ನು ಕಣಕ್ಕಳಿಸಬೇಕು’ ಎಂದು ಅರುಣ್ ಶೌರಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮೋದಿ ಎಷ್ಟು ಜನಪ್ರಿಯ ಅಂದರೆ ವಿರೋಧ ಪಕ್ಷಗಳು ಪರ್ಯಾಯ ನಾಯಕನನ್ನು ಒದಗಿಸಲು ಅಸಮರ್ಥವಾಗಿವೆ ಎಂಬ ಮಾತನ್ನು ತಳ್ಳಿಹಾಕಿದ ಅವರು, ‘ಇದೊಂದು ಮಿಥ್ಯವಷ್ಟೇ. ಜನ ಕೇಳ್ತಾರೆ, ಅದು ರಾಹುಲ್ ಗಾಂಧಿ ಆಗಲು ಸಾಧ್ಯವಾ, ಅಥವಾ ಮಮತಾ ಬ್ಯಾನರ್ಜಿಯೋ ಅಂತಾ. ಆದರೆ ಒಂದನ್ನು ಕೇಳಲು ಅವರು ಮರೀತಾರೆ: 1977ರಲ್ಲಿ ಇಂದಿರಾಗಾಂಧಿಗೆ ಯಾರು ಪರ್ಯಾಯವಿದ್ದರು? ಜಗಜೀವನರಾಮರೋ, ಚರಣಸಿಂಗರೋ, ಎಚ್.ಎನ್ ಬಹುಗುಣರೋ ಅಥವಾ ಮುರಾರ್ಜಿ ದೇಸಾಯಿಯವರೋ? ಇವರ್ತಾರೂ ಪರ್ಯಾಯ ನಾಯಕ ಅನಿಸಿರಲಿಲ್ಲ. ಆದರೂ ಇಂದಿರಾ ಗಾಂಧಿ ಸೋತರು. ಇನ್ನೊಂದು ವಿಷಯ, ಬಹಳಷ್ಟು ಜನ ಅಟಲ್ ಬಿಹಾರಿ ವಾಪೇಯಿಯವರನ್ನು ಜವಾಹರಲಾಲ್ ನೆಹರುಗೆ ಹೋಲಿಸಿದ್ದರು. 2004ರ ಚುನಾವಣೆಯಲ್ಲಿ ವಾಜಪೇಯಿಯವರಿಗೆ ಪರ್ಯಾಯವಾಗಿ ಯಾರಿದ್ದರು? ಸೋನಿಯಾ ಗಾಂಧಿಯೋ ಅಥವಾ ಮನಮೋಹನಸಿಂಗರೋ? ಪರದೆ ಹಿಂದೆ ಯಾರನ್ನು ಬಚ್ಚಿಡಲಾಗಿತ್ತು? ಅಂತಹ ಪರ್ಯಾಯ ನಾಯಕರು ಇರಲೇಇಲ್ಲ. ಆದರೂ ಬಿಜೆಪಿ ಸೋತಿತು. ಮಾಜಿ ಪ್ರಧಾನಿ ಚಂದ್ರಶೇಖರ್ ಒಂದು ಮಾತು ಹೇಳ್ತಿದ್ದರು: ನಾಯಕರಿಗೆ ಆಗದ್ದನ್ನು ಜನರು ತಮ್ಮದೇ ವಿಧಾನದಲ್ಲಿ ಪರಿಹರಿಸಿಕೊಳ್ಳುವ ಮಾರ್ಗ ಬಲ್ಲರು. ಜನರು ಕೊಟ್ಟರೆಂರೆg, ಬರೀ ಕಪಾಳಮೋಕ್ಷ ಮಾಡುವುದಿಲ್ಲ, ಇಡೀ ದೇಹವನ್ನೇ ನಜ್ಜುಗುಜ್ಜು ಮಾಡುತ್ತಾರೆ….’

ವಿರೋಧ ಪಕ್ಷಗಳಿಗೆ ತಮ್ಮ ಸಲಹೆ ಏನು ಎಂಬ ಥಾಪರ್ ಪ್ರಶ್ನೆಗೆ ಉತ್ತರಿಸಿದ ಶೌರಿ, ‘ಮೊದಲು ಅವರು ತಮ್ಮ ಹಳೆಯ ವಾದ, ಅಹಂಗಳನ್ನು ಬದಿಗಿಡಬೇಕು. ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ವಿರುದ್ಧ ಏಕೈಕ ಅಭ್ಯರ್ಥಿಯನ್ನು ನಿಲ್ಲಿಸಬೇಕು’ ಎನ್ನುತ್ತ, ವಿಪಕ್ಷಗಳ ನಾಯಕರನ್ನು ಆಗ್ರಹಿಸಿದÀ ಶೌರಿ, ‘ಹಳೆಯದನ್ನು ಮರೆತುಬಿಡಿ. ಇದು ಹೊಸ ಪರಿಸ್ಥಿತಿ. ದೇಶವಷ್ಟೇ ಸಂಕಷ್ಟದಲ್ಲಿಲ್ಲ, ನೀವೂ ಸಂಕಷ್ಟದಲ್ಲಿದ್ದೀರಿ. ಮೋದಿ ಯಾರನ್ನು ಬಳಸಿಕೊಳ್ಳುತ್ತಾರೋ, ಅವರು ನಾಶವಾದಂತೆ. ಈ ಮಾತು ಮುಖ್ಯವಾಗಿ ನಿತಿನ್ ಕುಮಾರ್ ಮತ್ತು ನವೀನ್ ಪಟ್ನಾಯಕ್‍ಗೆ ಅನ್ವಯವಾಗುತ್ತದೆ. ಸದ್ಯಕ್ಕೆ ಭವಿಷ್ಯದ ಕುರಿತು, ಅಂದರೆ, ಇವತ್ತು (2019ರ ಚುನಾವuಯಲ್ಲಿÉ) ನಮ್ಮ ಮಿತ್ರನಾಗುವÀ ಪಕ್ಷದ ವಿರುದ್ಧವೇ ಮುಂದೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕಲ್ಲ ಎಂಬ ಭವಿಷ್ಯದ ಪ್ರಶ್ನೆಯನ್ನೂ ಈಗ ಪಕ್ಕಕ್ಕಿಡಿ. ಸದ್ಯ 2019ರ ಚುನಾವಣೆಯ ಬಗ್ಗೆಯಷ್ಟೇ ಯೋಚಿಸಿ’ ಎಂದು ಸಲಹೆ ನೀಡಿದರು.

ಇದೇ ವೇಳೆ ವಿರೋಧಪಕ್ಷಗಳನ್ನು ಎಚ್ಚರಿಸಿದ ಶೌರಿ, ‘ದಯವಿಟ್ಟು ಅರ್ಥ ಮಾಡಿಕೊಳ್ಳಿ. ಈ ಚುನಾವಣೆ ಸೋತರೆ ಮುಂದೆಂದೂ ನಿಮಗೆ ಅವಕಾಶ ಸಿಗೋದೇ ಇಲ್ಲ. ಈ ಬಗೆಯ ಆಕ್ರಮಣವನ್ನು ತಡೆಯಲು ಇದೇ ಕೊನೆ ಅವಕಾಶ. ಗೆಳೆಯರೇ, ಇದರಲ್ಲಿ ವಿಫಲವಾದರೆ, ಮುಂದೆಂದೂ ನ್ಯಾಯಯುತ ಚುನಾವಣೆ ನಡೆಯುವುದೇ ಇಲ್ಲ’ ಎಂದು ಅವಲೋಕಿಸಿದರು.
31-69 ಮತ್ತು 60-90 ಈ ಎರಡು ಸಂಖ್ಯೆಗಳನ್ನು ವಿಪಕ್ಷಗಳು ನೆನಪಿಡಬೇಕು ಎಂದ ಅವರು, ‘ಮೊದಲನೇಯದು 31-69. 2014ರಲ್ಲಿ ಮೋದಿ ತನ್ನ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ಗಳಿಸಿದ ಶೇಕಡಾವಾರು ಮತಪ್ರಮಾಣ 31. ಈಗ ಮೋದಿಯ ಜನಪ್ರಿಯತೆ ಆ ಮಟ್ಟದಲ್ಲಿ ಉಳಿದೇ ಇಲ್ಲ. ಹಾಗಾಗಿ ವಿಪಕ್ಷಗಳ ಮತಪ್ರಮಾಣದ ಆರಂಭವೇ ಶೇ. 69…’ ಎಂದು ಅಂಕಗಣಿತವನ್ನು ತೆರೆದಿಟ್ಟರು.

‘ಇನ್ನೊಂದು ಸಂಖ್ಯೆ 60-90. ಮೋದಿ ಪ್ರಧಾನಿಯಾಗಲು ಕಾರಣವೆಂದರೆ, ಲೋಕಸಭೆಯಲ್ಲಿ ಶೇ.60 ಸ್ಥಾನಗಳನ್ನು ಹೊಂದಿರುವ ಮೂರು ರಾಜ್ಯಗಳಲ್ಲಿ ಮೋದಿ ಶೇ. 90ರಷ್ಟು ಸೀಟುಗಳನ್ನು ಗೆದ್ದಿದ್ದು. ಬಿಹಾರ, ಉತ್ತರಪ್ರದೇಶ ಮತ್ತು ಮಹಾರಾಷ್ಟ್ರ- ಈ ಮೂರು ರಾಜ್ಯಗಳಲ್ಲಿ ವಿಪಕ್ಷಗಳು ಒಂದಾದರೆ, ಮತ್ತೆ ಮೋದಿ ಈ ರಾಜ್ಯಗಳಿಂದ ಶೇ. 90ರಷ್ಟು ಸೀಟುಗಳನ್ನು ಗೆಲ್ಲುವುದು ಸಾಧ್ಯಾನೇ ಇಲ್ಲ’ ಎಂಬ ಕಿವಿಮಾತನ್ನು ವಿಪಕ್ಷಗಳಿಗೆ ಅರುಣ್ ಶೌರಿ ಹೇಳಿದರು.
ರಾಹುಲ್ ಗಾಂಧಿ ತಮಗೆ ಫೋನ್ ಮಾಡದೇ ಇದ್ದುದರಿಂದ, ರಾಜ್ಯಸಭೆ ಉಪ ಸಭಾಪತಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ತಮ್ಮ ಪಕ್ಷ ಬೆಂಬಲಿಸಿಲ್ಲ ಎಂದು ಅರವಿಂದ ಕೇಜ್ರಿವಾಲ್ ಹೇಳಿದ್ದರು ಎಂಬ ಮಾಧ್ಯಮ ವರದಿ ಪ್ರಸ್ತಾಪಿಸಿದ ಶೌರಿ, ವಿಪಕ್ಷಗಳ ನಾಯಕರು ಇಂತಹ ‘ದೊಡ್ಡಸ್ಥನ’ಗಳನ್ನು ಬಿಡಬೇಕು. ಒಂದು ಕಡೆ ‘ದೇಶ ಗಂಡಾಂತರದಲ್ಲಿದೆ’ ಎನ್ನುತ್ತಲೇ, ‘ಅವರು ಫೋನ್ ಮಾಡಲಿಲ್ಲ’ ಎಂಬಂತಹನ ಕ್ಷುಲ್ಲಕ ವಿಚಾರಗಳಿಗೆ ತಿಲಾಂಜಲಿ ಹೇಳುವುದು ಅಕ್ಷಮ್ಯ ಎಂದು ಪ್ರತಿಪಾದಿಸಿದರು.

Image result for modi amit shah

‘ಮೋದಿಯನ್ನು ಸೋಲಿಸಿದರೆ, ಹಿಂದೆ ಹೆಸರು ಕೆಡಿಸಿಕೊಂಡ ನಾಯಕರೇ ಅಧಿಕಾರಕ್ಕೆ ಬರುತ್ತಾರೆ ಎಂಬ ಜನಪ್ರಿಯ ಆತಂಕವಿದೆಯಲ್ಲ’ ಎಂಬ ಸಭಿಕರೊಬ್ಬರ ಪ್ರಶ್ನೆಗೆ ಉತ್ತರಿಸಿದ ಶೌರಿ ಉರ್ದುವಿನ ದ್ವಿಪದಿಗಳನ್ನು ಉದಾಹರಿಸುತ್ತ, ‘ನಮ್ಮನ್ನು ಕೊಚ್ಚಿಕೊಂಡು ಹೋಗುವ ಚಂಡಮಾರುತ ಬೀಸಲಿದೆ ಎಂಬ ಆತಂಕವಾದಾಗ, ದೋಣಿಯ ನಾವಿಕನಿಗೆ ನಮ್ಮನ್ನು ದಡದ ಸಾಲಲ್ಲೇ ಮುಳುಗಿಸಲು ಅನುಮತಿ ನೀಡುವುದು ಅಗತ್ಯ. ಮುಂದೆ ಬರುವ ಸರ್ಕಾರದಿಂದ ಸಮಸ್ಯೆಗಳಾಗಬಹುದು. ಅವನ್ನು ಎದುರಿಸಲೂ ಸಾಧ್ಯವಿದೆ. ಭಾರತದಲ್ಲಿ ವೇಗವಾಗಿ ಉದಯವಾಗುತ್ತಿರುವ ‘ನವ ನಾಯಕತ್ವ’ದ ಬಗ್ಗೆಯೂ ನಾವು ಗಮನ ಹರಿಸಬೇಕು. ಜಿಗ್ನೇಶ್ ಮೇವಾನಿ, ಕನ್ನಯ್ಯಕುಮಾರ್, ಅಲ್ಫೇಶ್ ಠಾಕೂರ್, ಹಾರ್ದಿಕ್ ಪಟೇಲ್…. ಇವರೆಲ್ಲ ಹೊಸ ನಾಯಕತ್ವ ನೀಡುತ್ತಿದ್ದಾರೆ’ ಎಂದು ವಿವರಿಸಿದರು.
‘ಮೋದಿ ಸರ್ಕಾರ ತುಲನಾತ್ಮಕವಾಗಿ ಒಂದು ಮಟ್ಟಿಗೆ ಹಗರಣ ಮುಕ್ತ ಎಂಬ ಭಾವನೆ ಇದೆಯಲ್ಲ?’ ಎಂಬ ಥಾಪರ್ ಪ್ರಶ್ನೆಗೆ ಉತ್ತರಿಸಿದ ಶೌರಿ, ರಫೇಲ್ ಹಗರಣ ಬಹುದೊಡ್ಡ ಹಗರಣ ಎಂದು, ಅದರಲ್ಲಿನ ಭ್ರಷ್ಟಾಚಾರದ ವಿರಾಟ್ ಸ್ವರೂಪವನ್ನು ಎಳೆಎಳೆಯಾಗಿ ವಿವರಿಸಿದರು. ‘ಸರ್ಕಾರದ ತಪ್ಪುಗಳ ಬಗ್ಗೆ ಮಾಧ್ಯಮಗಳೂ ಸರಿಯಾದ ತನಿಖೆ ಮಾಡಲಿಲ್ಲ. ಭ್ರಷ್ಟಾಚಾರವೆಂದರೆ ಕೇವಲ ಕಾನೂನುಬಾಹಿರ ಹಣದ ಬದಲಾವಣೆ ಅಲ್ಲ. ಅದು ನಾನಾ ರೂಪಗಳಲ್ಲಿದೆ. ನ್ಯಾಯದ ಭ್ರಷ್ಟಾಚಾರ, ಸಿದ್ದಾಂತದ ಭ್ರಷ್ಟಾಚಾರ, ಚರಿತ್ರೆಯ ಭ್ರಷ್ಟಾಚಾರ, ಸಮಾಜ ಭ್ರಷ್ಟಾಚಾರ…’ ಎಂದು ಮೋದಿ ಸರ್ಕಾರದ ವಿವಿಧ ಭ್ರಷ್ಟಾಚಾರಗಳ ನಮೂನೆಗಳನು ತೆರೆದಿಟ್ಟರು.
ತಮ್ಮತಮ್ಮ ಪಕ್ಷಗಳ ಅಧ್ಯಕ್ಷರಾಗಿ ಅಮಿತ್ ಶಾ ಮತ್ತು ಸೋನಿಯಾ ಗಾಂಧಿ, ತಮ್ಮ ಪಕ್ಷಗಳ ನೇತೃತ್ವದ ಸರ್ಕಾರಗಳಲ್ಲಿ ಅವರ ಪಾತ್ರವೇನು? ಎಂಬ ಪ್ರಶ್ನೆಗೆ ಉತ್ತರಿಸಿದ ಶೌರಿ, ‘ಅವರ ಪಕ್ಷದ ಸರ್ಕಾರಗಳ ನಿರ್ಧಾರ ರೂಪಿಸುವಲ್ಲಿ ಶಾ ಹೆಚ್ಚಿನ ‘ಅಧಿಕಾರ’ ಪಡೆದಿದ್ದಾರೆ. ವಾಜಪೇಯಿ ಸರ್ಕಾರದಲ್ಲಿ ನಾವು ಅದ್ವಾನಿಯಂತಹ ಹಿರಿಯ ನಾಯಕರಿಗೂ ಸವಾಲು ಹಾಕುವ ಅವಕಾವಿತ್ತು. ಅದನ್ನೆಲ್ಲ ಮಾತುಕತೆ ಮೂಲಕ ಬಗೆಹಿರಸಿಕೊಳ್ಳಲು ವಾಜಪೇಯಿ ಅನುವು ಮಾಡಿ ಕೊಡುತ್ತಿದ್ದರು. ಈಗಿನ ಸರ್ಕಾರದಲ್ಲಿ ಯಾವ ಸಚಿವನೂ ಮೋದಿ-ಶಾಗಳನ್ನು ಪ್ರಶ್ನಿಸುವಂತಿಲ್ಲ. ಸರ್ಕಾರ ಮತ್ತು ಕೇಸರಿ ಪಾರ್ಟಿ ಎರಡೂ ಮೋದಿ-ಶಾ ಜೋಡಿಯಲ್ಲಿ ಕೇಂದ್ರಿಕೃತವಾಗಿವೆ’ ಎಂದರು.
ಮುಂದುವರೆದ ಅವರು, ‘ಬಿಜೆಪಿ ಈಗ ಒಂದು ಪಾರ್ಇಯಾಗಿ ಉಳಿದೇ ಇಲ್ಲ. ಅದೀಗ ಒಂದು ಮತ್ತು ಮುಕ್ಕಾಲು ಜನರ ಪಾರ್ಟಿಯಷ್ಟೇ. ಇಲ್ಲಿ ‘ಒಂದು’ ಎಂದರೆ ಮೋದಿಯಲ್ಲ ಶಾ! ಮೋದಿ ಮುಕ್ಕಾಲು ಅಷ್ಟೇ. ಮೋದಿ ಭಾಷಣ, ಇಮೇಜ್ ಬಿಲ್ಡಿಂಗ್‍ನಲ್ಲಿ ಮಗ್ನರಾಗಿದ್ದರೆ, ಸರ್ಕಾರದ ವಿವಿಧ ಏಜೆನ್ಸಿಗಳ ಕಾರ್ಯವಿಧಾನವನ್ನು ನಿರ್ಧರಿಸುತ್ತಿರುವ ಶಾ, ದಬ್ಬಾಳಿಕೆಯ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ. ಅರುಣ್ ಜೇಟ್ಲಿ ಮೋದಿ-ಶಾಗಳ ಬ್ಲಾಗಿಂಗ್-ಮಿನಿಸ್ಟರ್ ಅಷ್ಟೇ ’ ಎಂದು ವ್ಯಂಗ್ಯಮಿಶ್ರಿತ ಆಕ್ರೋಶವನ್ನು ವ್ಯಕ್ತಪಡಿಸಿದರು..

Image result for modi amit shah
ಮೋದಿ ಅವಧಿಯಲ್ಲಿ ಸರ್ಕಾರದ ಸಂಸ್ಥೆಗಳ ದುರುಪಯೋಗದ ಕುರಿತು ಮಾತಾಡಿದ ಶೌರಿ, ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ನಕಲಿ ಎನ್‍ಕೌಂಟರ್‍ಗಳು ಮತ್ತು ಇತ್ತೀಚೆಗೆ ಭಿನ್ನಮತ ಎತ್ತಿದವರನ್ನು ಬಂಧಿಸಿದ ಪ್ರಕರಣಗಳನ್ನು ಉದಾಹರಿಸಿದ ಅವರು, ‘ಸೋಹ್ರಾಬುದ್ದೀನ್ ಎನ್‍ಕೌಂಟರ್‍ನ ಪ್ರಕರಣದಲ್ಲಿ 54 ಸಾಕ್ಷಿಗಳು ಹಿಂದಕ್ಕೆ ಸರಿಯುವಂತೆ ಮಾಡಲಾಗಿದೆ. ಇದು ಭ್ರಷ್ಟಾಚಾರವಲ್ಲವೇ? ಮೋದಿ-ಶಾ ಕಾನೂನು ಪ್ರಕ್ರಿಯೆಯನ್ನೇ ವಿಧ್ವಂಸಗೊಳಿಸಿದ್ದಾರೆ. ಇತ್ತೀಚೆಗೆ ಮೋದಿ ಹತ್ಯೆಗೆ ಸಂಚು ರೂಪಿಸಿದರು ಎಂದು ಆಕ್ಟಿವಿಸ್ಟ್‍ಗಳನ್ನು ಬಂಧಿಸಲು ‘ಫ್ಯಾಬ್ರಿಕೆಟೆಡ್’ ದಾಖಲೆಗಳನ್ನು ಪೊಲೀಸರು ಸೃಷ್ಟಿಸಿದ್ದಾರೆ’ ಎಂದು ಕಾನೂನು ದುರ್ಬಳಕೆಯ ವಿವರಗಳನ್ನು ಸಭಿಕರ ಮುಂದಿಟ್ಟರು.
‘ಸರ್ಕಾರದ ವೈಫಲ್ಯ, ದುರಾಡಳಿತದಿಂದ ಜನರ ಗಮನ ಬೇರೆಡೆ ಸೆಳೆಯಲು ಆಕ್ಟಿವಿಸ್ಟ್‍ಗಳ ಬಂಧನ ಮಾಡಲಾಗಿದೆ. 2002-2014ರ ಅವಧಿಯಲ್ಲಿ ಗುಜರಾತಿನ ಪೊಲೀಸರೂ ಮೋದಿ ಹತ್ಯೆಗೆ ಸಂಚು ಎಂದು ಪದೇ ಪದೇ ಹೇಳುತ್ತಲೇ ಬಂದಿದ್ದರು. ಈಗ ಮುಂದಿನ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಅದೇ ತಂತ್ರವನ್ನು ಈ ಜೋಡಿ ಮುಂದುವರೆಸಿದೆ’ ಎಂದು ಮೋದಿ-ಶಾಗಳ ‘ಮೋಡಸ್-ಆಪರೆಂಡಿಯನ್ನು ಶೌರಿ ಬೆತ್ತಲುಗೊಳಿಸಿದರು.
‘ಇವೆಲ್ಲದರ ಹೊರತಾಗಿ ಅವರಿಗೆ ಉಳಿದಿರುವ ಕೊನೆಯ ಕಾರ್ಡು ಎಂದರೆ ಹಿಂದೂ-ಮುಸ್ಲಿಮರ ನಡುವೆ ವಭಜನೆಯನ್ನು ಉತ್ತೇಜಿಸಿ, ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುವುದು ಮಾತ್ರ’ ಎಂದು ಅರುಣ್ ಶೌರಿ ತಮ್ಮ ಸಂದರ್ಶನ-ಸಂವಾದ ಮುಗಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com