ಬಿಜೆಪಿಯ ತರಾವರಿ ಡ್ರಾಮಾಗಳು : ಗೆಲ್ಲಲು ಬರೀ ಅಡ್ಡದಾರಿಗಳು..!

ಪಿ.ಕೆ.ಮಲ್ಲನಗೌಡರ

ಬಿಜೆಪಿಯ ತರಾವರಿ ಡ್ರಾಮಾಗಳು : ಗೆಲ್ಲಲು ಬರೀ ಅಡ್ಡದಾರಿಗಳು!
ನಕ್ಸಲ್ ಬೆಂಬಲಿಗರು, ದೇಶದ್ರೋಹಿಗಳು ಆಟ ಫ್ಲಾಪ್!
ಈಗ ‘ಅರ್ಬನ್ ನಕ್ಸಲೈಟ್’ ಎಂಬುದೂ ಜೋಕ್!
–ಪಿ.ಕೆ. ಮಲ್ಲನಗೌಡರ್

2007ರ ಜೂನ್‍ನಲ್ಲಿ ಕರ್ನಾಟಕ ಪೊಲೀಸರು ನಕ್ಸಲ್ ಬೆಂಬಲಿಗರ ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದರು. ಆಗ ಕರ್ನಾಟಕದಾದ್ಯಂತ ಸಾಂಸ್ಕøತಿಕ ವಲಯವಷ್ಟೇ ಅಲ್ಲ, ವಿದ್ಯಾರ್ಥಿ ಸಮುದಾಯ ಮತ್ತು ಸಾರ್ವಜನಿಕರಿಂದಲೂ ಪೊಲೀಸರ ಈ ಹುಚ್ಚಾಟಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಆ ಪಟ್ಟಿಯಲ್ಲಿ ಶಿವಮೊಗ್ಗದ ಕುವೆಂಪು ವಿವಿ ಪ್ರಾಧ್ಯಾಪಕ ಡಾ. ರಾಜೇಂದ್ರ ಚೆನ್ನಿ, ಹಿರಿಯ ರೈತ ನಾಯಕ, ಸಮಾಜವಾದಿ ಕಡಿದಾಳು ಶಾಮಣ್ಣ ಸೇರಿದಂತೆ ಹಲವಾರು ಸಾಮಾಜಿಕ ಹೋರಾಟಗಾರರ ಹೆಸರನ್ನು ಸೇರಿಸಲಾಗಿತ್ತು. ಆಳುವ ವರ್ಗದ ಹಿತಾಸಕ್ತಿ ಕಾಪಾಡಲು ಪೊಲೀಸ್ ಅಧಿಕಾರಿಗಳು ಕೆಲವೊಮ್ಮೆ ಮೂರ್ಖರಂತೆ, ಬಫೂನ್‍ಗಳಂತೆ ವರ್ತಿಸುತ್ತಾರೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿತ್ತು.

 

ತುಂಗಾ ಉಳಿಸಿ ಆಂದೋಲನ, ಕುದುರೆಮುಖ ಅಭಯಾರಣ್ಯದ ಆದಿವಾಸಿಗಳ ಒಕ್ಕಲೆಬ್ಬಿಸುವಿಕೆಯನ್ನು ವಿರೋಧಿಸಿದ ಹೋರಾಟ, ಬಾಬಾ ಬುಡನ್‍ಗಿರಿ ಹೋರಾಟ- ಇಂತಹ ಜನಸ್ನೇಹಿ ಹೋರಾಟಗಳು ಯಶಸ್ಸು ಕಂಡಿದ್ದವು. ಇದು ಮಲೆನಾಡು ಮತ್ತು ಕರಾವಳಿಯಲ್ಲಿ ಸಂಘದ ಕಟ್ಟರ್ ಹಿಂಬಾಲಕರಿಗೆ ದೊಡ್ಡ ಹಿನ್ನಡೆಯೇ ಆಗಿತ್ತು. ಜೆಡಿಎಸ್‍ನೊಂದಿಗೆ ಸಮ್ಮಿಶ್ರ ಸರ್ಕಾರ ರಚಿಸಿದ್ದ ಬಿಜೆಪಿ ಇಂಥದೊಂದು ‘ನಕ್ಸಲ್ ವರದಿ’ಯನ್ನು ತೇಲಿಬಿಟ್ಟಿತ್ತು. ತನ್ನ ವಿಫಲತೆಗಳನ್ನು ಮುಚ್ಚಿಕೊಳ್ಳಲು, ಜನರ ಗಮನವನ್ನು ಬೇರೆಡೆ ಸೆಳೆಯುವ ಸಂಚು ಇದರ ಹಿಂದೆ ಇತ್ತು. ಆಗಲೂ ಕರ್ನಾಟಕದ ಲಕ್ಷಾಂತರ ಜನರು, ‘ಕಡಿದಾಳ ಶಾಮಣ್ಣ, ರಾಜೇಂದ್ರ ಚೆನ್ನಿಯವರನ್ನು ನಕ್ಸಲೈಟ್ ಎನ್ನುವುದಾದರೆ, ನಮ್ಮನ್ನೂ ಹಾಗೇ ಕರೆಯಿರಿ’ ಎಂದು ಸಂದೇಶವನ್ನು ಸಾರಿದ್ದರು.

ಗೌರಿ ಲಂಕೇಶರ ಹತ್ಯೆ ವಿರೋಧಿಸಿದ ರಾಜ್ಯದ ಲಕ್ಷಾಂತರ ಯುವಜನತೆ ‘ನಾನೂ ಗೌರಿ’ ಎಂದು ಹಂತಕರ ಹಿಂದಿರುವ ದುಷ್ಟಶಕ್ತಿಗಳಿಗೆ ಸವಾಲು ಎಸೆದಿದ್ದರು. ರೋಹಿತ್ ವೇಮುಲ ಪ್ರಕರಣ ಮತು ‘ಅಕುಪೈ ಯುಜಿಸಿ’ ಚಳವಳಿಯಿಂದ ಜನರ ಗಮನ ಬೇರೆಡೆ ಸೆಳೆಯಲು ಜೆಎನ್‍ಯು ವಿದ್ಯಾರ್ಥಿಗಳ ಮೇಲೆ ದೇಶದ್ರೋಹದ ಅಪಾದನೆ ಹೊರಿಸಲು ಸಂಘ ಪರಿವಾರ ಎಕ್ಕರಲಾಡಿತು. ಆದರೆ ಜನತೆಯ ಬೆಂಬಲದೊಂದಿಗೆ ಪುಟಿದೆದ್ದ ಈ ವಿದ್ಯಾರ್ಥಿ ನಾಯಕರು, ಸಂಘ ಪರಿವಾರದ ಅಜೆಂಡಾವನ್ನೇ ಬೆತ್ತಲು ಮಾಡಿ, ಪ್ರಾಮಾಣಿಕ ಮನಸ್ಸುಗಳ ಪಾಲಿಗೆ ಹೀರೋ ಆದರು.

ಹೀಗಾಗಿ ‘ದೇಶದ್ರೋಹಿ’ ಅಜೆಂಡಾ ಸಂಘಕ್ಕೇ ತಿರುಗುಬಾಣವಾಗಿತು. ಈಗ 2019ರ ಚುನಾವಣೆಗೆ ಹೋಗಲು ಯಾವುದೇ ಪ್ರಾಮಾಣಿಕ ಇಶ್ಯೂಗಳೂ ಬಿಜೆಪಿ ಬಳಿ ಇಲ್ಲ. ಅದರ ದುರಾಡಳಿತದಿಂದ ಇಡೀ ದೇಶದ ಆರ್ಥಿಕತೆಯ ಬೆನ್ನೆಲುಬೇ ಮುರಿದು ಹೋಗಿದೆ. ಸ್ವತ: ಆರ್‍ಬಿಐ ಮತ್ತು ಸಂಸತ್ತಿನಾರ್ಥಿಕ ಸಮಿತಿ ನೋಟು ಅಮಾನ್ಯೀಕರಣ’ ಸಂಪೂರ್ಣ ವಿಫಲ ಎಂದು ಬಹಿರಂಗ ಮಾಡಿವೆ.

ಈ ದೊಡ್ಡ ಹಿನ್ನಡೆಯನ್ನು ಮುಚ್ಚಿಡಲು ಅದೀಗ ‘ಅರ್ಬನ್ ನಕ್ಸಲೈಟ್’ ಎಂಬ ಪದ ಹುಟ್ಟುಹಾಕಿ, ವಿಚಾರವಾದಿಗಳು, ವಕೀಲರು ಮತ್ತು ಮಾನವ ಹಕ್ಕುಗಳ ಹೋರಾಟಗಾರರನ್ನು ಬಂಧಿಸಿ, ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕಿದೆ. ಈಗಲೂ ಜನ ಅದರ ಡ್ರಾಮಾಕ್ಕೆ ತಿರುಗೇಟು ಎಂಬಂತೆ ‘ನಾನೂ ಅರ್ಬನ್ ನಕ್ಸಲೈಟ್’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರು ಮಾಡಿದ್ದಾರೆ. ಆದರೆ ಮಹಾ ಸಂಚುಕೋರ ಬುದ್ಧಿ ಹೊಂದಿರುವ ಸಂಘ ಪರಿವಾರ ಓಟಿಗಾಗಿ ದೇಶದಲ್ಲಿ ಕೋಮು ಸೌಹಾರ್ದ ಕೆಡಿಸಲೂ ಯೋಜನೆ ರೂಪಿಸಬಹುದು. ಈ ಕುರಿತಂತೆ ನಾವೆಲ್ಲ ಜಾಗೃತರಾಗಿ, ಅದನ್ನು ಹಿಮ್ಮೆಟಿಸಬೇಕಾಗಿದೆ.

Leave a Reply

Your email address will not be published.