ಬೆಂಗಳೂರು : ಮುಖ್ಯಮಂತ್ರಿಗಳ ಜನತಾ ದರ್ಶನ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ..

ಬೆಂಗಳೂರು : ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು 12 ವರ್ಷದ ಹಿಂದೆ ನಡೆಸುತ್ತಿದ್ದ ಮಾದರಿಯ ವ್ಯವಸ್ಥಿತ ಜನತಾದರ್ಶನ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು. ಮೈತ್ರಿ ಸರ್ಕಾರ 100 ದಿನ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಜನರ ಕಷ್ಟಗಳನ್ನು ಆಲಿಸಿ, ಸಕಾರಾತ್ಮಕವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಪ್ರತಿ ಶನಿವಾರ ಬೆಂಗಳೂರಿನಲ್ಲಿ ಇರುವಾಗ 12 ವರ್ಷಗಳ ಹಿಂದಿನಂತೆ ಪರಿಣಾಮಕಾರಿ ಜನತಾದರ್ಶನ ನಡೆಸುವುದಾಗಿ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ತಿಳಿಸಿದರು.

ಈ ನೂರು ದಿನಗಳ ಅವಧಿಯಲ್ಲಿ ಪ್ರತಿ ದಿನ ಜನತಾ ದರ್ಶನ ನಡೆಸಿದ್ದೇನೆ; ಜನರ ಕಷ್ಟಗಳಿಗೆ ಸ್ಪಂದಿಸಿದ್ದೇನೆ. ಇಂದಿನಿಂದ ಪ್ರತಿ ಶನಿವಾರ ಮಾತ್ರ ಜನತಾ ದರ್ಶನ ನಡೆಸಲಾಗುವುದು. ಇತರ ದಿನಗಳಲ್ಲಿ ಸರ್ಕಾರದ ಇತರ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ತಿಳಿಸಿದರು.

ಶನಿವಾರ ಜನತಾ ದರ್ಶನಕ್ಕೆ ಆಗಮಿಸುವ ಪ್ರತಿಯೊಬ್ಬರ ಕಷ್ಟಗಳನ್ನು ಖುದ್ದು ವಿಚಾರಿಸುವೆ. ರಾತ್ರಿ ಗಂಟೆ ಹನ್ನೊಂದಾದರೂ ಸರಿ, ಎಲ್ಲರ ಸಮಸ್ಯೆ ಆಲಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ಇದಲ್ಲದೆ ತಿಂಗಳಿಗೊಮ್ಮೆ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು, ಈ ಸಂದರ್ಭದಲ್ಲಿಅಧಿಕಾರಿಗಳೊಂದಿಗೆ ಸಭೆ ನಡೆಸುವುದಲ್ಲದೆ, ಸಾರ್ವಜನಿಕರ ಸಮಸ್ಯೆ ಆಲಿಸುವೆ; ಅರ್ಧ ದಿನವನ್ನು ರೈತರಿಗೆ ಆಧುನಿಕ ಕೃಷಿ ಪದ್ಧತಿಯಅರಿವು ಮೂಡಿಸುವುದಕ್ಕಾಗಿ ಮೀಸಲಿಡುವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಜಿಲ್ಲಾಧಿಕಾರಿಗಳೂ ತಾಲ್ಲೂಕಿಗೆ ಭೇಟಿ ನೀಡಿ ನಿಗದಿತ ದಿನದಂದು ಸಾರ್ವಜನಿಕ ಕುಂದು ಕೊರತೆ ನಿವಾರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ಗೌರಿಶಂಕರ್ ಅವರು ಮಠದ ಪರವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡಗು ಸಂತ್ರಸ್ತರ ನೆರವಿಗಾಗಿ 11 ಲಕ್ಷ ರೂ.ಗಳ ದೇಣಿಗೆ ನೀಡಿದರು. ಇದಲ್ಲದೆ ವಿವಿಧ ಖಾಸಗಿ ಸಂಸ್ಥೆಗಳು, ಶಾಲಾ ಮಕ್ಕಳು, ಗ್ರಾಮಸ್ಥರು ಯಥಾಶಕ್ತಿ ದೇಣಿಗೆ ನೀಡಿರುವುದನ್ನು ಮುಖ್ಯಮಂತ್ರಿಗಳು ಕೃತಜ್ಞತೆಯಿಂದ ಸ್ಮರಿಸಿದರು.

ಸೆಪ್ಟೆಂಬರ್ 10 ರಿಂದ ಉತ್ತರ ಕರ್ನಾಟಕ ಪ್ರವಾಸ : ಮುಖ್ಯಮಂತ್ರಿಗಳು ಸೆಪ್ಟೆಂಬರ್ 10 ರಿಂದ 15 ರ ವರೆಗೆ ಉತ್ತರ ಕರ್ನಾಟಕದಲ್ಲಿ ಪ್ರವಾಸ ಕೈಗೊಳ್ಳುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.
ಜನತಾದರ್ಶನ ವ್ಯವಸ್ಥೆ : ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ಆವರಣದಲ್ಲಿ ಜನತಾದರ್ಶನಕ್ಕೆ ಆಗಮಿಸಿದ ಸಾರ್ವಜನಿಕರಿಗೆ ಸೂರು, ಆಸನ ವ್ಯವಸ್ಥೆ ಮಾಡಲಾಗಿದೆ. ವಿಕಲಚೇತನರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ; ಕುಡಿಯುವ ನೀರು, ಉಪಾಹಾರದ ವ್ಯವಸ್ಥೆಯನ್ನೂ ಮಾಡಲಾಗಿದೆ. ಜೊತೆಗೆ ಪ್ರತಿಯೊಬ್ಬರಿಗೂ ಟೋಕನ್ ನೀಡಿ, ವ್ಯವಸ್ಥಿತವಾಗಿ ಜನತಾದರ್ಶನ ಏರ್ಪಡಿಸಲು ಕ್ರಮ ವಹಿಸಲಾಗಿದೆ. ವಿವಿಧ ಇಲಾಖೆಗಳ ಅಧಿಕಾರಿಗಳೂ ಸ್ಥಳದಲ್ಲಿದ್ದು, ಜನರ ಸಮಸ್ಯೆಗಳಿಗೆ ಸಾಧ್ಯವಾದಷ್ಟೂ ಸ್ಥಳದಲ್ಲೇ ಪರಿಹಾರ ನೀಡಲು ಕ್ರಮ ವಹಿಸಲಾಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com