ಸರ್ಕಾರಿ ಶಾಲೆಗಳ ಅಗತ್ಯತೆಯನ್ನು ತೆರೆದಿಟ್ಟ ಸರ್ಕಾರಿ ಹಿ.ಪ್ರಾ.ಶಾಲೆ….

ಭಾರತ ಸ್ವಾತಂತ್ರ್ಯ ಪಡೆದು ಏಳು ದಶಕಗಳು ಇನ್ನೂ ಕಳೆದಿಲ್ಲ. ಆದರೆ ಮೂಲಭೂತ ಸೌಕರ್ಯಗಳಲ್ಲಿ ಒಂದಾಗಿರುವ ಶಿಕ್ಷಣ ಎಲ್ಲರಿಗೂ ದೊರೆಯುವುದು ಕಡ್ಡಾಯ ಎಂದು ಸಂವಿಧಾನದಲ್ಲಿ ಬರೆದುಕೊಂಡಿರುವ ಭಾರತದ ಶಿಕ್ಷಣ ಈಗಾಗಲೇ ಮಾರಾಟದ ಸರಕಾಗಿ ಹೋಗಿದೆ. ವಿಶ್ವವನ್ನೇ ಕಾಡುತ್ತಿರುವ ಎಲ್‍ಪಿಜಿ ನೀತಿಯು ಶಿಕ್ಷಣವನ್ನೂ ಬಿಡದೆ ಕಾಡುತ್ತಿದ್ದು ಶಿಕ್ಷಣದ ಖಾಸಗೀಕರಣಕ್ಕೆ ಹೆದ್ದಾರಿ ಮಾಡಿಕೊಟ್ಟಿದೆ. ಒಂದೆಡೆ ಖಾಸಗೀ ಶಾಲೆಗಳು ಅಣಬೆಯಂತೆ ತಲೆಯೆತ್ತುತ್ತಿದ್ದರೆ, ಸರ್ಕಾರಿ ಶಾಲೆಗಳು ಒಂದೊಂದಾಗಿ ಅವನತಿಯ ಕತ್ತಿಗೆ ಸಿಲುಕಿ ನಲುಗುತ್ತಿವೆ. ಇದಕ್ಕೆ ಕರ್ನಾಟಕವೇನೂ ಹೊರತಾಗಿಲ್ಲ, ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ 23.000 ಸರ್ಕಾರಿ ಶಾಲೆಗಳನ್ನು 8.000 ಶಾಲೆಗಳೊಂದಿಗೆ ವಿಲೀನಗೊಳಿಸುವ ತರಾತುರಿ ನಡೆಸಿ ತಣ್ಣಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಸರಗೋಡಿನ ಕನ್ನಡ ಶಾಲೆಯ ವಿಷಯವನ್ನಾಧರಿಸಿ ಮೂಡಿಬಂದಿರುವ ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡು ಕೊಡುಗೆ: ರಾಮಣ್ಣ ರೈ ಸಿನಿಮಾ ಜನಮನ್ನಣೆಗೆ ಪಾತ್ರವಾಗುತ್ತಿದೆ.
ಕೇರಳ ರಾಜ್ಯದ ಗಡಿಗೆ ಸೇರಿರುವ ಹೆಚ್ಚು ಕನ್ನಡಿಗರೇ ತುಂಬಿರುವ ಜಿಲ್ಲೆ ಕಾಸರಗೋಡು. ಈ ಜಿಲ್ಲೆಯನ್ನು ಕರ್ನಾಟಕಕ್ಕೆ ಸೇರಿಸಬೇಕೆಂಬ ಕೂಗು ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಮೊಳಗಿತ್ತು. ಆದರೂ ಈ ಜಿಲ್ಲೆ ಕೇರಳ ರಾಜ್ಯದ ಪಾಲಿಗೆ ಸೇರಿಸಲ್ಪಟ್ಟಿತು. ಈ ಜಿಲ್ಲೆಯಲ್ಲಿರುವ ಜನರ ಮಾತೃಭಾಷೆ ಇಂದಿಗೂ ಕನ್ನಡವೇ ಆಗಿದೆ. ಈ ವಸ್ತು ವಿಷಯವನ್ನು ಕೇಂದ್ರವಾಗಿರಿಸಿಕೊಂಡು ರಿಷಬ್‍ಶೆಟ್ಟಿ ಕಥೆ ಎಣೆದಿದ್ದಾರೆ. ಪ್ರತೀ ಮಗುವೂ ತನ್ನ ಮಾತೃ ಭಾಷೆಯಲ್ಲಿಯೇ ತನ್ನ ಕಲಿಕೆಯನ್ನು ಆರಂಭಿಸಬೇಕು ಎಂಬುದು ಸಹಜವಾದ ಸಂಗತಿ. ಮಗು ತಾನೂ ಗ್ರಹಿಸಬಲ್ಲ, ಅರ್ಥಮಾಡಿಕೊಳ್ಳಬಲ್ಲ, ಆಲೋಚಿಸಲು ಸಾಧ್ಯವಾಗುವ ಭಾಷೆಯಲ್ಲಿ ಕಲಿಯುವುದರಿಂದ ಮಾತ್ರ ಆ ಮಗು ತನ್ನ ಕಲಿಕೆಯಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂಬುದು ಸಿನಿಮಾದ ಸಾರವಾಗಿದೆ.
ಇಂಗ್ಲಿಷ್ ಕಲಿಯಲಾಗದ, ಎಷ್ಟೇ ಓದಿದರೂ ಅರ್ಥವಾಗದ ಗಣಿತವಾಗದಿದ್ದರೂ, ಹುಚ್ಚುಕೋಡಿ ಮನಸ್ಸಿನ 16ರ ವಯಸ್ಸಿನಲ್ಲಾಗುವ ಸೋಕಾಲ್ಡ್ ಲವ್(ಕ್ರಶ್)ನಿಂದ ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗುವ ಪ್ರವೀಣ, ತರಲೆ ತುಂಟಾಟಗಳೊಂದಿಗೆ ತಿನಿಸುಗಳನ್ನು ಕದಿಯುವ ಮಹೇಂದ್ರ ಪ್ರತಿಯೊಬ್ಬರ ಬಾಲ್ಯವನ್ನು ನೆನಪಿಸುವಂತೆ ಮಾಡುತ್ತದೆ. ದುಡ್ಡಿನ ಆಸೆಯಿಂದ ಲಂಚ ಪಡೆದು ಕನ್ನಡ ಶಾಲೆಗೆ ಕನ್ನಡ ಬಾರದ ಶಿಕ್ಷಕನನ್ನು ನೇಮಿಸುವ ಭ್ರಷ್ಟ ಅಧಿಕಾರಿ, ಕನ್ನಡ ಬಾರದೆ ಇಂಗ್ಲಿಷ್ ಮತ್ತು ಮಲೆಯಾಳಿ ಭಾಷೆಯಲ್ಲಿ ಪಾಠ ಮಾಡಲು ಬರುವ ಗಣಿತ ಮೇಷ್ಟ್ರು, ಮಲೆಯಾಳಿ ಭಾಷೆ ಅರ್ಥವಾಗುವುದಿಲ್ಲ ಕನ್ನಡದಲ್ಲಿ ಪಾಠ ಮಾಡಿ ಎಂದು ಕೇಳುವ ವಿದ್ಯಾರ್ಥಿನಿ ಪಲ್ಲವಿ, ಇದು ಕೇರಳ ಬೇಕಾದರೆ ನೀವೇ ಮಲೆಯಾಳಿ ಕಲಿಯಿರಿ ಎಂದು ಗದರುವ ಶಿಕ್ಷಕ ಪರಭಾಷೆಯ ಏರಿಕೆಗೆ ಉದಾಹರಣೆಯೊಂದಿಗೆ ಸಿನಿಮಾಕ್ಕೆ ಮತ್ತೊಂದು ತಿರುವನ್ನು ನೀಡುತ್ತದೆ.
ಅರ್ಥವಾಗದ ಮಲೆಯಾಳಿ ಭಾಷೆಯಲ್ಲಿ ಪಾಠ ಮಾಡುವ ಶಿಕ್ಷಕನಿಂದ ಶಾಲೆಗೆ ಹೋಗುವುದಿಲ್ಲವೆಂದು ಹಟ ಮಾಡುವ ಮಗಳ ಬೇಸರದಿಂದ ಕೋಪಗೊಂಡು ಶಿಕ್ಷಕನನ್ನು ಕೊಂದೇ ಬಿಡುತ್ತೇನೆಂದು ಓಡುವ ತಂದೆ ಉಪಾಧ್ಯಾಯ, ಈತನ ಮಾತಿಗೆ ಕಾಮೆಡಿ ಮಾಡುವ ಆತನ ಬಲಗೈ ಭಂಟ, ಉಪಾಧ್ಯಾರಿಗೆ ಹೆದರಿ ಓಡಿಹೋಗುವ ಶಿಕ್ಷಕ ಮುಂತಾದ ದೃಶ್ಯಗಳು ಸೀರಿಯಸ್ ವಿಷಯದಲ್ಲೂ ನಗು ತರಿಸುತ್ತವೆ.
ರಾಜ್ಯಗಳ ಗಡಿಭಾಗಗಳಲ್ಲಿ ಆಯಾ ರಾಜ್ಯಗಳ ಭಾಷಾ ತಾರತಮ್ಯಗಳನ್ನು ಕಾಸರಗೋಡಿನ ಮೂಲಕ ಹೆಣೆದಿರುವ ರಿಷಬ್‍ಶೆಟ್ಟಿ, ಸಾಂಸ್ಕøತಿಕ ಪ್ರತಿಭಾ ಕಾರ್ಯಕ್ರಮದಲ್ಲಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು ಏಳನೇ ತರಗತಿ ಮಕ್ಕಳಿಗೆ ಉಚಿತ ಬೈಸಿಕಲ್ ನೀಡಲಾಗುತ್ತದೆ ಎಂದು ಎಮ್ಮೆಲ್ಲೆ ಘೋಷಿಸುವ ದೃಶ್ಯ ಹಾಗೂ ಸ್ವಾತಂತ್ರ್ಯ ದಿನದಂದು ಮಕ್ಕಳು ಬೈಸಿಕಲ್‍ಗಾಗಿ ಹಾದಿಯಲ್ಲಿ ಕಾದು ಕುಳಿತು ಬೈಸಿಕಲ್ ಬಾರದೆ, ಮಲೆಯಾಳಿ ಶಾಲೆಗಳ ಪಾಲಾಯಿತೆಂದು ಕೇಳಿ ಬೇಸರಗೊಳ್ಳುವ ದೃಶ್ಯಗಳು ಸರ್ಕಾರಗಳು ಮತ್ತು ಅಧಿಕಾರಿಗಳು ಹೇಗೆ ತನ್ನ ಭಾಷಾ ತಾರತಮ್ಯದಿಂದ ಸೌಲಭ್ಯಗಳಿಂದ ವಂಚಿಸುತ್ತವೆ ಎಂಬುದನ್ನು ನಾಜೂಕಾಗಿ ತೋರಿಸಿದ್ದಾರೆ.
ಪಣಿಕ್ಕರ್ ಎಂಬ ದುಷ್ಟ ಹಾಗೂ ಭ್ರಷ್ಟ ಅಧಿಕಾರಿಯ ಭಾಷಾಂಧತೆಯಿಂದ ಸೌಲಭ್ಯಗಳಿಂದ ವಂಚಿತವಾಗುವ ಕನ್ನಡ ಶಾಲೆಗಳು, ಒಂದೊಂದಾಗಿ ಮುಚ್ಚುತ್ತಾ 15 ಶಾಲೆಗಳಿಂದ 3ಕ್ಕೆ ಇಳಿಯುತ್ತವೆ. ಶತಮಾನವನ್ನು ದಾಟಿದ ಕಾಸರಗೋಡು ಕನ್ನಡ ಶಾಲೆಯನ್ನು ಸುಳ್ಳು ನೆಪಗಳಿಂದ ಮುಚ್ಚುವ ಹುನ್ನಾರ ಮಾಡುವ ಪಣಿಕ್ಕರ್, ಶಾಲೆ ಮುಚ್ಚಿದರೂ ಶಾಲೆಯ ಅಂಗಳದಲ್ಲಿದ್ದ ಗಿಡಗಳಿಗೆ ನೀರನ್ನಾಕುವ ಮುಖ್ಯ ಶಿಕ್ಷಕ, ಶಾಲೆ ಮುಚ್ಚಿದ್ದರಿಂದ ಮಗಳನ್ನು ಪಲ್ಲವಿಯನ್ನು ಮಂಗಳೂರಿಗೆ ಕಳಿಸುವ ಉಪಧ್ಯಾಯರು, ಇಷ್ಟವಿಲ್ಲದೆ ಹೊರಡುವ ಪಲ್ಲವಿ, ಅವಳ ಅಗಲಿಕೆಯನ್ನು ದೂರದಲ್ಲಿ ನಿಂತು ನೋಡುವ ಪ್ರವೀಣ, ಶಾಲೆಯನ್ನು ಮತ್ತೆ ತೆರೆಯುವಂತೆ ಪಣಿಕ್ಕರ್ ಮನೆ ಎದುರು ಪ್ರತಿಭಟನೆ ನಡೆಸುವ ಮಕ್ಕಳ ತಂಡ ನಗೆಯೊಂದಿಗೆ ಶಾಲೆಯ ಬಗೆಗಿನ ಪ್ರೀತಿ ಮತ್ತು ಮುಗ್ಧತೆಯನ್ನು ತೋರಿಸುತ್ತದೆ.
ಮಕ್ಕಳ ಪ್ರತಿಭಟನೆ ದೊಡ್ಡ ಸುದ್ದಿಯಾಗಬೇಕಾದರೆ ದೊಡ್ಡ ವ್ಯಕ್ತಿ ಜೊತೆಗಿರಬೇಕೆಂದು ಅನಂತ ಪದ್ಮನಾಭ.ಪಿ(ಅನಂತ್‍ನಾಗ್)ರನ್ನು ಹುಡುಕಿಕೊಂಡು ಮೈಸೂರಿಗೆ ಬರುವ ಹುಡುಗರು, ಹುಡುಗರೊಂದಿಗೆ ಕಾಸರಗೋಡಿಗೆ ತೆರಳುವ ಅನಂತ್‍ನಾಗ್ ಕನ್ನಡಿಗರು ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಕಾಸರಗೋಡು ಶಾಲೆಯ ರೀತಿಯಲ್ಲಿ ಸ್ವಂತ ಮನೆಯನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸುವ ಮೂಲಕ ಮಕ್ಕಳಿಗೆ ಕಾಸರಗೋಡಿನ ಶಾಲೆಯ ಅಗತ್ಯತೆಯ ಬಗ್ಗೆ ಜನರಿಗೆ ತಿಳಿಸುವ ಮೂಲಕ ಗಡಿಪ್ರದೇಶಗಳಲ್ಲಿ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಬೇಕೆಂದು ಸಂದೇಶ ನೀಡಿದ್ದಾರೆ.
ಚಿತ್ರದ ಕೊನೆಯ ಭಾಗದಲ್ಲಿ ಕೋರ್ಟ್ ಸಂವಾದದಲ್ಲಿ ತಮಾಷೆಯೊಂದಿಗೆ ಅಧಿಕಾರಿಗಳ ಭಾಷಾಂಧತೆಯ ಪರಿಣಾಮವನ್ನು ಬಿಚ್ಚಿಡುವ ಮೂಲಕ, ಸರ್ಕಾರಕ್ಕೂ ಎಚ್ಚರಿಕೆಯನ್ನು ನೀಡುವ ಅನಂತ್‍ನಾಗ್ ‘ಶಾಲೆಯಲ್ಲಿ ಮಕ್ಕಳಿಲ್ಲವೆಂದು ಶಾಲೆಗಳನ್ನು ಮುಚ್ಚುವ ನೀವು, ಸದನದಲ್ಲಿ ಶಾಸಕರಿಲ್ಲವೆಂದು ಸದನವನ್ನು ಮುಚ್ಚುವಿರೇ?’ ಎಂದು ಪ್ರಶ್ನಿಸುವ ಮೂಲಕ ಕಲಿಯುವ ಆಸಕ್ತಿ ಇರುವ ಒಬ್ಬ ವಿದ್ಯಾರ್ಥಿ ಇದ್ದರೂ ಶಾಲೆಗಳನ್ನು ನಡೆಸಬೇಕು ಎಂದು ಹೇಳುತ್ತಾರೆ. ಇಡೀ ಸಿನಿಮಾ ತಮಾಷೆ, ಹಾಸ್ಯಗಳಿಂದ ಕೂಡಿದ್ದು ನಗೆಯ ಜೊತೆಗೆ ಗಡಿ ಪ್ರದೇಶದಲ್ಲಿ ಮಾತೃಭಾಷಾ ಶಾಲೆಗಳ ಅನಿವಾರ್ಯತೆಯನ್ನು ಸಾರಿದೆ.
ಕನ್ನಡದ ಬಗೆಗಿನ ಭಾಷಾಭಿಮಾನ ಹೊಂದಿರುವ ಪ್ರತಿಯೊಬ್ಬನೂ ಮೆಚ್ಚಿಕೊಳ್ಳುವ ರೀತಿಯಲ್ಲಿ ಮೂಡಿಬಂದಿರುವ ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡು ಕೊಡುಗೆ: ರಾಮಣ್ಣ ರೈ ಚಿತ್ರ, ಇಂದಿನ ದಿನಗಳಲ್ಲಿ ಕನ್ನಡ ಭಾಷೆಯ ಮೇಲೆ ಇಂಗ್ಲಿಷ್ ಭಾಷೆಯ ಪರಿಣಾಮದ ಬಗೆಗೆ ಹಾಗೂ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಮಾರಕ ವಾಗುತ್ತಿರುವ ಸರ್ಕಾರಗಳ ನೀತಿಗಳ ಬಗ್ಗೆ, ಮಕ್ಕಳನ್ನು ಗಿರಾಕಿಗಳನ್ನಾಗಿಸಿ ಶಿಕ್ಷಣವನ್ನು ವ್ಯಾಪಾರ ಮಾಡುತ್ತಿರುವ ಖಾಸಗೀ ಶಾಲೆಗಳಿಂದಾಗುತ್ತಿರುವ ಅನ್ಯಾಯ ಮತ್ತು ಪರಿಣಾಮಗಳ ಬಗ್ಗೆ ಎಳ್ಳಷ್ಟೂ ಬೆಳಕು ಚೆಲ್ಲದಿರುವುದು ಶೋಚನೀಯ. ಗಡಿ ರಾಜ್ಯಗಳ ಗಡಿಭಾಗಗಳಲ್ಲಿ ವಾಸಿಸುವ ಕನ್ನಡಿಗರಿಗೆ ಸರ್ಕಾರಿ ಶಾಲೆಗಳು ಎಷ್ಟು ಮುಖ್ಯವೋ, ಕರ್ನಾಟಕದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ಉಳಿವು ಮತ್ತು ಬಲವರ್ಧನೆಯೂ ಅಷ್ಟೇ ಮುಖ್ಯವೆಂದೂ ಸಹ ಕನ್ನಡಿಗರು ಅರಿತುಕೊಳ್ಳಬೇಕಿದೆ.
                                                                                                                                                 – ಸೋಮಶೇಖರ್ ಚಲ್ಯ

Leave a Reply

Your email address will not be published.