ಪೆಟ್ರೋಲ್ ಬಂಕ್‍ನಲ್ಲಿ ಮೋದಿ ಫೋಟೊ ಕಡ್ಡಾಯ..! ಬಿಜೆಪಿಯಿಂದ ವೈಯಕ್ತಿಕ ಮಾಹಿತಿಗೆ ಕನ್ನ..?

ಪಿ.ಕೆ ಮಲ್ಲನಗೌಡರ

ಪೆಟ್ರೋಲ್ ಬಂಕ್‍ನಲ್ಲಿ ಮೋದಿ ಫೋಟೊ ಕಡ್ಡಾಯ..! ತಪ್ಪಿದರೆ ಪೆಟ್ರೋಲ್ ಸಪ್ಲೈ ಬಂದ್! ಬಿಜೆಪಿಯಿಂದ ವೈಯಕ್ತಿಕ ಮಾಹಿತಿಗೆ ಕನ್ನ?

ನೀವು ಪೆಟ್ರೋಲ್ ಬಂಕ್‍ಗಳಲ್ಲಿ ಕೇಂದ್ರ ಸರ್ಕಾರದ ‘ಉಜ್ವಲ’ ಯೋಜನೆಯ ದೊಡ್ಡ ದೊಡ್ಡ ಬಿಲ್‍ಬೋರ್ಡ್‍ಗಳನ್ನು ನೋಡುತ್ತಿರಲ್ಲ, ಅದರಲ್ಲಿ ಆ ಯೋಜನೆಯ ಪ್ರಚಾರಕ್ಕಿಂತ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರವೇ ಎದ್ದು ಹೊಡೆಯುತ್ತಿರುತ್ತದೆ. ಆದರೂ ಎಲ್ಲೋ ಕೆಲವು ಪೆಟ್ರೋಲ್ ಬಂಕ್‍ಗಳಲ್ಲಿ ಅಂತಹ ಜಾಹಿರಾತು ಕಂಡುಬರುವುದಿಲ್ಲ.

ಆದರೆ ‘ಇನ್ಮುಂದೆ ಎಲ್ಲ ಬಂಕ್‍ಗಳಲ್ಲೂ ನರೇಂದ್ರ ಮೋದಿಯವರ ಫೋಟೊ ದೊಡ್ಡದಾಗಿ ಹಾಕಲೇಬೇಕು, ಇಲ್ಲದಿದ್ದರೆ ಪೆಟ್ರೋಲ್ ಸರಬರಾಜಿನಲ್ಲಿ ಸಮಸ್ಯೆ ಎದುರಿಸಬೇಕಾದೀತು’ ಎಂದು ಸಾರ್ವಜನಿಕ ತೈಲ ಮಾರಾಟ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಒಸಿ), ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ (ಎಚ್‍ಪಿಸಿ) ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ (ಬಿಪಿಸಿಎಲ್)ಗಳು ಪೇಟ್ರೋಲ್ ಡೀಲರ್‍ಗಳಿಗೆ ಎಚ್ಚರಿಕೆ ನೀಡತೊಡಗಿದ್ದಾರೆ.

ಲಿಖಿತವಾಗಿ ಇಂತಹ ಆದೇಶ ಹೊರಡಿಸಿ ವಿವಾದ ಮಾಡಿಕೊಳ್ಳಲು ಒಲ್ಲದ ಈ ತೈಲ ಸರಬರಾಜು ಕಂಪನಿಗಳು ತಮ್ಮ ವಲಯವಾರು ಅಧಿಕಾರಿಗಳ ಮೂಲಕ ಈ ರೀತಿಯಾಗಿ ಮೌಖಿಕವಾಗಿ ಧಮಕಿ ಹಾಕತೊಡಗಿವೆ. 2019ರ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪ್ರಚಾರ ಮಾಡಲು ಕೇಂದ್ರ ಸರ್ಕಾರ ಈ ಅಡ್ಡ ದಾರಿ ಹಿಡಿದಿದೆ. ಇದೊಂದು ರೀತಿಯ ಬ್ಲ್ಯಾಕ್‍ಮೇಲ್ ಎಂದು ಪೆಟ್ರೋಲ್ ಡೀಲರುಗಳ ಸಂಘ ಆರೋಪಿಸಿದ್ದು, ಸರ್ಕಾರದ ಈ ಕ್ರಮದ ವಿರುದ್ಧ ಪ್ರತಿಭಟನೆಯ ಧ್ವನಿಯನ್ನು ಎತ್ತಿದೆ. ಪೆಟ್ರೋಲ್ ಡೀಲರುಗಳ ಸಂಘದ ಅಧ್ಯಕ್ಷ ಎಸ್.ಎಸ್. ಗೋಗಿ ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರಲ್ಲದೇ, ತೈಲ ಸರಬರಾಜು ಕಂಪನಿಗಳ ಧಮಕಿ ನೀತಿಯ ವಿರುದ್ಧ ಪ್ರತಿಭಟನೆ ನಡೆಸಲು ಯೋಚಿಸುತ್ತಿದ್ದೇವೆ ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂಡಿಯನ್ ಆಯಿಲ್ ಕಾರ್ಪೋರೇಷನ್ನಿನ ಹಿರಿಯ ಅಧಿಕಾರಿಯೊಬ್ಬರು, ‘ಬಿಪಿಎಲ್ ಕುಟುಂಬಗಳಿಗೆ ಅಡುಗೆ ಅನಿಲ ವಿತರಿಸುವ ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಹಾಗೆ ಸೂಚನೆ ನೀಡಿದ್ದೇವೆ. ಇದರಲ್ಲಿ ಯಾವುದೇ ಪಕ್ಷ ಅಥವಾ ವ್ಯಕ್ತಿಯ ಪ್ರಚಾರದ ಉದ್ದೇಶವಿಲ್ಲ’ ಎಂದಿದ್ದಾರೆ. ಹಾಗಿದದರೆ ಇದನ್ನು ಲಿಖಿತ ಆದೇಶ ಹೊರಡಿಸುವ ಮೂಲಕವೇ ಮಾಡಬಹುದಿತ್ತಲ್ಲ? ವಲಯ ಅಧಿಕಾರಿಗಳ ಮೂಲಕ ಡೀಲರುಗಳ ಮೂಲಕ ಒತ್ತಢ ಹೇರುವ, ಮೋದಿಯವರ ಬಿಲ್‍ಬೋರ್ಡ್ ಹಾಕದೇ ಇದ್ದರೆ, ಪೆಟ್ರೋಲ್ ಸರಬರಾಜು ನಿಲ್ಲಿಸಲಾಗುವುದು ಎಂದು ಬ್ಲ್ಯಾಕ್‍ಮೇಲ್ ತಂತ್ರದ ತೈಲ ಸರಬರಾಜು ಕಂಪನಿಗಳು ಮೊರೆ ಹೋಗಿವೆ.

ಸರ್ಕಾರದ ಕಡೆಯಿಂದ ಅವುಗಳ ಮೇಲೆ ಒತ್ತಡ ಇರುವುದು ಇದರಿಂದ ಸ್ಪಷ್ಟವಾಗುತ್ತಿದೆ. 2019ರ ಚುನಾವಣಾ ಪ್ರಚಾರಕ್ಕೆ ಸಾಕಷ್ಟು ಪ್ರಮಾಣದಲ್ಲಿ ಆಡಳಿತವ ಯಂತ್ರದ ದುರುಪಯೋಗ ಮಾಡಿಕೊಳ್ಳುವ ಸಿದ್ಧತೆಯ ಮುನ್ಸೂಚನೆ ಇದಾಗಿದೆ. ಕಳೆದ ತಿಂಗಳು ಡೀಲರ್‍ಗಳಿಗೆ ತೈಲ ಕಂಪನಿಗಳು ಕಳಿಸಿರುವ ಆದೇಶವಂತೂ ಇದಕ್ಕಿಂತ ಭೀಕರವಾಗಿದೆ. ಬಂಕ್‍ನಲ್ಲಿ ಕೆಲಸ ಮಾಡುವ ಎಲ್ಲ ಉದ್ಯೋಗಿಗಳ ವೈಯಕ್ತಿಕ ಮಾಹಿತಿಗಳನ್ನು ಒದಗಿಸಬೇಕು ಎಂದು ತಾಕೀತು ಮಾಡಲಾಗಿದೆ. ಹೆಸರು, ವಿದ್ಯಾಭ್ಯಾಸದ ವಿವರದ ಜೊತೆಗೆ ಧರ್ಮ, ಜಾತಿ, ಆಧಾರ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಫೋನ್ ನಂಬರ್, ಇಮೇಲ್ ಐಡಿ ವಿವರಗಳನ್ನು ಕೇಳಿರುವುದು ಸಂಶಯಕ್ಕೆ ಎಡೆ ಮಾಡಿದೆ. ಪೆಟ್ರೋಲ್ ಡೀಲರ್‍ಗಳ ಸಂಘ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದೆ. ‘ಜಾತಿ, ಧರ್ಮದಂತಹ ಸೂಕ್ಷ್ಮ ಮಾಹಿತಿಯಲ್ಲದೇ, ಉದ್ಯೋಗಿ ಯಾವ ಲೋಕಸಭಾ ಮತಕ್ಷೇತ್ರದಡಿ ಬರುತ್ತಾನೆ/ಳೆ ಎಂಬ ವಿವರ ಕೇಳುತ್ತಿದ್ದಾರೆ. ಇದು ಸ್ಪಷ್ಟವಾಗಿ ವ್ಯಕ್ತಿಯ ಖಾಸಗಿತನದ ಮೇಲಿನ ದಾಳಿ. ಇದನ್ನು ನಮ್ಮ ಸಂಘ ಆಕ್ಷೇಪಿಸಿ, ತೈಲ ಸರಬರಾಜು ಕಂಪನಿಗಳಿಗೆ ಪತ್ರ ಬರೆದಿದೆ’ ಎಂದು ಡೀಲರ್‍ಗಳ ಸಂಘದ ಅಧ್ಯಕ್ಷ ಗೋಗಿ ಟೀಕಿಸಿದ್ದಾರೆ.

2019ರ ಚುನಾವಣೆಗೆ ಇನ್ನು ಯಾವ್ಯಾವ ವಾಮಮಾರ್ಗಗಳನ್ನು ಬಿಜೆಪಿ ಯೋಜಿಸಿದೆಯೋ? ಒಟ್ಟಿನಲ್ಲಿ ಜನರ ವೈಯಕ್ತಿಕ ಮಾಹಿತಿಗಳ ದುರ್ಬಳಕೆ ಆಗುವ ಎಲ್ಲ ಸಾಧ್ಯತೆಗಳು ನಿಚ್ಚಳವಾಗತೊಡಗಿವೆ.

.

Leave a Reply

Your email address will not be published.

Social Media Auto Publish Powered By : XYZScripts.com