ಜೋಳಿಗೆ ಹಿಡಿದು, ಕಂಸಾಳೆ ಮೂಲಕ ‘ಮತಭಿಕ್ಷೆ’ : ಮೈಸೂರಲ್ಲೊಬ್ಬ ವಿಭಿನ್ನ ಅಭ್ಯರ್ಥಿ..!
ಮೈಸೂರು : ಸ್ಥಳೀಯ ಸಂಸ್ಥೆಗಳ ಚುನಾವಣೆ ಕಾವು ಏರುತ್ತಿದೆ. ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಪ್ರಚಾರದ ಪೈಪೋಟಿಗಿಳಿದಿದ್ದಾರೆ. ಆದರೆ ಇಲ್ಲೊಬ್ಬ ಪಕ್ಷೇತರ ಅಭ್ಯರ್ಥಿಯ ವಿನೂತನ ಮತಯಾಚನೆ ಮಾತ್ರ ಸಖತ್ತಾಗಿ ಆಕರ್ಷಿಸುತ್ತಿದೆ. ಇದಕ್ಕೆ ಕಾರಣ ಮನೆ ಬಾಗಿಲಿಗೆ ಬಂದು ಜೋಳಿಗೆ ಹಿಡಿದು, ಕಂಸಾಳೆ ಮೂಲಕ ಕೋರಣ್ಯ ನೀಡವ್ವ ಕೊಡುಗಲ್ಲದ ಮಾದೇವನಿಗೆ ಎಂದು ಮತಭಿಕ್ಷೆಯನ್ನು ಕೇಳುತ್ತಿರುವ ದೃಶ್ಯ ಕಂಡು ಮತದಾರರು ಆಶ್ಚರ್ಯಗೊಂಡಿದ್ದಾರೆ.ಈ ವಿಭಿನ್ನ ಮತಯಾಚನೆಗೆ ಮೈಸೂರು ಸಾಕ್ಷಿಯಾಗಿದೆ.
ಮತಭಿಕ್ಷೆ ಮಾಡುವ ಮೂಲಕ ಮತಯಾಚನೆ ಮಾಡುತ್ತಿರುವ ವ್ಯಕ್ತಿ ಮೈಸೂರು ಮಹಾನಗರ ಪಾಲಿಕೆಯ 58 ನೇ ವಾಡ೯ನ ಸ್ವತಂತ್ರ ಅಭ್ಯರ್ಥಿ ಮಹಾದೇವು, ಮತಪ್ರಭುಗಳ ಮನೆ ಮನೆಗೆ ತೆರಳಿ ಜೋಳಿಗೆ ಹಿಡಿದು ಕಂಸಾಳೆ ಬಾರಿಸಿ ಮತ ನೀಡಿ ಎಂದು ಭಿಕ್ಷೆ ಬೇಡುವ ಮೂಲಕ ಮತ ಭಿಕ್ಷೆ ಬೇಡುತ್ತಿದ್ದಾರೆ.ಕಳೆದ l5 ವರ್ಷಗಳಿಂದ ರಾಮಕೃಷ್ಣನಗರದ ಸಾಯಿ ನರ್ಸಿಂಗ್ ಹೋಂನಲ್ಲಿ ಸಾಮಾನ್ಯ ನೌಕರನಾಗಿ ಕಾರ್ಯ ನಿರ್ವಹಿಸುತ್ತಿರುವ ಮಹಾದೇವ ಅವರು ಚಿಕಿತ್ಸೆ ಪಡೆಯುವ ರೋಗಿಗಳಿಗೆ ಪ್ರೀತಿ ಪಾತ್ರರಾಗಿದ್ದು ಬಿಡುವಿನ ವೇಳೆಯಲ್ಲಿ ಕೇಬಲ್ ನಿರ್ವಾಹಕನಾಗಿ ಕಾರ್ಯನಿರ್ವಹಿಸುತ್ತಾ ಕೇಬಲ್ ಮಹಾದೇವ ಎಂದೇ ಹೆಸರುಗಳಿಸಿದ್ರು.
ಮತಯಾಚನೆ ಮಾಡುವ ವೇಳೆ ಮಾತನಾಡಿದ ಮಹದೇವ, ಈ ಚುನಾವಣೆಯಲ್ಲಿ ಗ್ರಾಮೀಣ ಭಾಗದ ಸಂಸ್ಕೃತಿಯಾಗಿರುವ ಕಂಸಾಳೆ ಕಲೆ ಮೂಲಕ ವಿನೂತನವಾಗಿ ಮತಯಾಚನೆ ಮಾಡುತ್ತಿದ್ದಾರೆ. ಹಣ ಬಲ, ಜಾತಿ ಬಲ, ಕೈ ಬಲಕ್ಕಿಂತ ಹೆಚ್ಚಾಗಿರುವುದು ಜನರ ಮತದಾನದ ಬಲ. ಕೆಲ ಅಭ್ಯರ್ಥಿಗಳು ಆ ಪಕ್ಷದ ಟಿಕೆಟ್ ತೆಗೆದುಕೊಂಡರೆ ಕೆಲವು ಸಮುದಾಯಗಳು ನನ್ನನ್ನು ಬೆಂಬಲಿಸುತ್ತಾರೆಂದು ಈ ಪಕ್ಷದ ಟಿಕೆಟ್ ತೆಗೆದುಕೊಂಡರೆ, ಮತ್ತೆ ಕೆಲವರು ಸಮುದಾಯಗಳು ನನ್ನನ್ನು ಬೆಂಬಲಿಸುತ್ತಾರೆ ಎಂಬ ಭ್ರಮೆಯಲ್ಲಿದ್ದಾರೆ. ಆದರೆ ನನ್ನಂಥ ಸ್ವತಂತ್ರ ಅಭ್ಯರ್ಥಿಗೆ ಎಲ್ಲ ಸಮುದಾಯದ ಬೆಂಬಲವಿದೆ. ನಾನು ಪಕ್ಷಾತೀತ, ಜಾತ್ಯಾತೀತ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ನಾನು ಸಂವಿಧಾನದ ಮೇಲೆ ನಂಬಿಕೆ ಇಟ್ಟುಕೊಂಡು ಸ್ಪರ್ಧಿಸುತ್ತಿದ್ದೇನೆ. ನನ್ನಲ್ಲಿ ಹಣವಿಲ್ಲ , ಮತದಾರರು ನೀಡುವ ಒಂದು ರೂ. ಭಿಕ್ಷೆಯಿಂದ ಮತದಾನದ ದಿನದಂದು ಬೂತ್ಗಳಲ್ಲಿ ಟೇಬಲ್ ಹಾಕಿಸುತ್ತೇನೆ. ಆ ಮೂಲಕ ಮತದಾರರ ಆಶೀರ್ವಾದ ಪಡೆಯುವೆ ಎಂದು ಮಹಾದೇವ ವಿಶ್ವಾಸ ವ್ಯಕ್ತಪಡಿಸಿದ್ದಾರೆ