ನಾನು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಆಗುತ್ತೇನೆ : ಹಾಸನದಲ್ಲಿ ಸಿದ್ದು ಹೇಳಿಕೆ
ಹಾಸನ : ಇಂದು ರಾಜಕಾರಣ ಜಾತಿ ಹಣದ ಮೇಲೆ ನಡೆಯುತ್ತಿದೆ, ನಾವು ೫ ವರ್ಷದಲ್ಲಿ ಎಲ್ಲಾ ಜಾತಿ ಬಡವರಿಗೆ ನೆರವು ನೀಡಿದ್ದೇವೆ, ನಾನು ಇನ್ನೊಮ್ಮೆ ಸಿಎಂ ಆಗುತ್ತೇನೆ ಎಂದು ಹೊಳೆನರಸೀಪುರ ತಾಲೂಕಿನ ಹಾಡ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಈ ಬಾರಿಯ ಚುನಾವಣೆಯಲ್ಲೇ ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದುಕೊಂಡಿದ್ದೆ. ಆದರೆ ನಾನು 2ನೇ ಬಾರಿಗೆ ಮುಖ್ಯಮಂತ್ರಿಯಾಗಬಾರದು ಎಂಬ ಒಂದೇ ಕಾರಣಕ್ಕೆ ಎಲ್ಲಾ ವಿರೋಧಿಗಳು ಒಂದಾದರು ಎಂದು ಯಾರ ಹೆಸರನ್ನೂ ಹೇಳದೇ ತಮ್ಮ ಅಸಮಾಧಾನ ಹೊರ ಹಾಕಿದರು. ನಾನು 5 ವರ್ಷ ಆಡಳಿತಾವಧಿಯಲ್ಲಿ ಎಲ್ಲಾ ವರ್ಗದ ಜನರಿಗೆ ಪೂರಕ ಯೋಜನೆ ಕೊಟ್ಟಿದ್ದೇನೆ. ಆದರೂ ಏಕೆ ಜನ ನಮ್ಮನ್ನು ಬೆಂಬಲಿಸಲಿಲ್ಲ. ಇಂದಿನ ರಾಜಕೀಯ ಹಣ, ಜಾತಿಯ ಮೇಲೆ ನಡೆಯುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಬೆಳವಣಿಗೆ ಎಂದು ಆತಂಕ ವ್ಯಕ್ತಪಡಿಸಿದರು. ನಾನು ರಾಜಕೀಯದಲ್ಲಿ ಎಂದು ಹೆದರಿ ಓಡಿಹೋಗಲ್ಲ ಎಂದು ಸ್ಪಷ್ಟಪಡಿಸಿದ ಸಿದ್ದು, ರಾಜಕೀಯ ನಿಂತ ನೀರಲ್ಲ, ಬದಲಾಗಿ ಹರಿಯುವ ನದಿ ಎಂದು ಸೂಚ್ಯವಾಗಿ ಹೇಳಿದರು. ಆದರೆ ತಮ್ಮ ಭಾಷಣದಲ್ಲಿ ಯಾರ ಹೆಸರನ್ನೂ ಪ್ರಸ್ತಾಪ ಮಾಡಲಿಲ್ಲ.
ಚಾಮುಂಡೇಶ್ವರಿ ಕ್ಷೇತ್ರದ ಚುನಾವಣೆ ಸಂದರ್ಭದಲ್ಲಿ ಇದು ನನ್ನ ಕೊನೆಯ ಚುನಾವಣೆ ಎಂದಿದ್ದ ಸಿದ್ದರಾಮಯ್ಯ ಈಗ ಮತ್ತೆ ಇನ್ನೊಮ್ಮೆ ಸಿಎಂ ಆಗುತ್ತೇನೆ ಎಂದು ಹೇಳಿದ್ದಾರೆ. ಇನ್ನ ಕೊಡಗಿಗೆ ಪರಿಹಾರ ಘೋಷಣೆ ಮಾಡದ ಕೇಂದ್ರದ ವಿರುದ್ಧ ಸಿದ್ದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.