PM ಮೋದಿ ಕೊಡಗಿಗೆ ಭೇಟಿ ನೀಡಿ ಪರಿಹಾರ ಬಿಡುಗಡೆ ಮಾಡಲಿ : ಮಾಜಿ ಸಿಎಂ ಸಿದ್ದರಾಮಯ್ಯ

ಮಡಿಕೇರಿಯಲ್ಲಿ ಸಿದ್ದರಾಮಯ್ಯ ಅವರ ಹೇಳಿಕೆ ನೀಡಿದ್ದಾರೆ. ‘ ಭಾರೀ ಮಳೆಯಿಂದ ಹಲವಾರು ಊರುಗಳೇ ಹಾಳಾಗಿವೆ. ಜನ ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ರಸ್ತೆ ಸಂಪರ್ಕವೂ ಇಲ್ಲದಂತಾಗಿದೆ. ಸಂತ್ರಸ್ತರಿಗೆ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ನೂರಾರು ಮಂದಿ ಸಂತ್ರಸ್ತರ ನೆರವಿಗೆ ನಿಂತಿದ್ದಾರೆ. ಅವರ ಕಾರ್ಯ ಶ್ಲಾಘನೀಯ ‘ ಎಂದರು.

‘ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ. ಮಂತ್ರಿಗಳೂ ಭೇಟಿ ನೀಡಿದ್ದಾರೆ. ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಕೊಡುವುದು ನಮ್ಮ ಸವಾಲು. ಈ ಸಂಬಂಧ ಯೋಜನೆ ರೂಪಿಸುವಂತೆ ವಸತಿ ಸಚಿವರಿಗೆ ಹೇಳಿದ್ದೇನೆ. ಶಾಲಾ ಮಕ್ಕಳಿಗೂ ನೆರವಾಗಲು ಅಧಿಕಾರಿಗಳಿಗೆ ತಿಳಿಸಿದ್ದೇನೆ ‘ ಎಂದಿದ್ದಾರೆ.

‘ ಮುಂದೆ ಈ ರೀತಿ ಅನಾಹುತ ಅಗದಂತೆ ನೋಡಿಕೊಳ್ಳಲು ತಜ್ಞರ ಸಮಿತಿ ರಚನೆ ಆಗಬೇಕು. ಈ ಸಂಬಂಧ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತೇನೆ. ಸಾವಿರಾರು ಎಕರೆ ಕೃಷಿ ಜಮೀನು ಹಾಳಾಗಿರುವುದರಿಂದ ಕೂಲಿ ಕಾರ್ಮಿಕರಿಗೆ ತೊಂದರೆಯಾಗಿದೆ. ಅವರಿಗೆ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಿಗೆ ತಿಳಿಸಿದ್ದೇನೆ ‘ ಎಂದರು.

‘ ಕೃಷಿ ಭೂಮಿ ಕಳೆದುಕೊಂಡವರಿಗೆ ಜಮೀನು ನೀಡುವ ಬಗ್ಗೆಯೂ ಸರ್ಕಾರದ ಜೊತೆ ಮಾತುಕತೆ ನಡೆಸುತ್ತೇನೆ. ಸಂತ್ರಸ್ತರಿಗೆ ಪರಿಹಾರ ಒದಗಿಸುವುದು, ಬೆಳೆ ಹಾನಿ ಬಗ್ಗೆಯೂ ಯೋಜನೆ ರೂಪಿಸಲಾಗುವುದು. ಪ್ರಧಾನಿಯವರು ಕೇರಳಕ್ಕೆ ಬಂದಿದ್ದರು. ಇಲ್ಲಿಗೂ ಬಂದು ನೋಡಬೇಕಿತ್ತು. ಈಗಲಾದರೂ ಕೊಡಗಿಗೆ ಭೇಟಿ ನೀಡಿ ಆಗಿರುವ ಹಾನಿ ಪರಿಶೀಲಿಸಿ ಕೇಂದ್ರದಿಂದ ಪರಿಹಾರ ಬಿಡುಗಡೆ ಮಾಡಬೇಕು ‘ ಎಂದರು.

‘ ಸರ್ಕಾರ ಪರಿಹಾರ ಕ್ರಮಗಳನ್ನು ಕೈಗೊಂಡಿದೆ. ಅದರ ವೇಗ ಇನ್ನೂ ಹೆಚ್ಚಾಗಬೇಕು. ಮಳೆಯಿಂದ ಹಾನಿಗೊಳಗಾಗಿರುವ ಕೊಡಗಿನಲ್ಲಿ ಮೂಲಭೂತ ಸೌಕರ್ಯಗಳ ಮರು ನಿರ್ಮಾಣ ಆಗಬೇಕು. ಇದಕ್ಕಾಗಿ ಮುಖ್ಯಮಂತ್ರಿ, ಸಂಬಂಧಿಸಿದ ಸಚಿವರೊಂದಿಗೆ ಮಾತುಕತೆ ನಡೆಸುತ್ತೇನೆ. ಸಮನ್ವಯ ಸಮಿತಿ ಸಭೆಯಲ್ಲೂ ಚರ್ಚೆ ಮಾಡುತ್ತೇನೆ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com