ಕೊಡವರ ಪರವಾಗಿ ಒದ್ದೆಕಣ್ಣಿನಿಂದ ವಂದಿಸುತ್ತೇನೆ : ಭಾವನಾತ್ಮಕ ಪತ್ರ ಬರೆದ ರಶ್ಮಿಕಾ

ಬೆಂಗಳೂರು : ವರುಣನ  ರೌದ್ರನರ್ತನಕ್ಕೆ ಕೊಡಗು ತತ್ತರಿಸಿ ಹೋಗಿದ್ದು, ಮಂಜಿನ ನಗರಿಯ ಸಂತ್ರಸ್ತರಿಗೆ ಸ್ಯಾಂಡಲ್ ವುಡ್ ತಾರೆಯರು ಸಹಾಯ ಹಸ್ತವನ್ನು ನೀಡಿದ್ದಾರೆ. ಕೊಡಗಿನ ಹುಡುಗಿ ಕಿರಿಕ್​ ಪಾರ್ಟಿಯ ಬೆಡಗಿ ರಶ್ಮಿಕಾ ಮಂದಣ್ಣ ತಮ್ಮ ತವರಿನ ಪರಿಸ್ಥಿತಿಗೆ ಸಹಾಯ ಮಾಡಿದ ಎಲ್ಲರಿಗೂ ಮನಃ ಪೂರ್ವಕವಾಗಿ ಕೊಡಗಿನ ಪರವಾಗಿ ಒದ್ದೆ ಕಣ್ಣಿನಿಂದ ವಂದಿಸುತ್ತಿದ್ದೇನೆ ಎಂದು ಭಾವನಾತ್ಮಕ ಪತ್ರದ ಮೂಲಕ ಧನ್ಯವಾದ ತಿಳಿಸಿದ್ದಾರೆ.

ರಶ್ಮಿಕಾ ಮಂದಣ್ಣ ಅವರ ತವರಿನ ಜನರ ಕಷ್ಟಕ್ಕೆ ಸ್ಪಂದಿಸಿದ ಎಲ್ಲರಿಗೂ ತಮ್ಮ ಟ್ವೀಟರ್ ಮೂಲಕ ಧನ್ಯವಾದ ತಿಳಿಸಿದು ಹೀಗೆ,  ನಮಗೆ ನೋವಾದಾಗ ಅಮ್ಮ ಎಂದು ಕೂಗುತ್ತೇವೆ, ಅಮ್ಮನೇ ಮುನಿಸಿಕೊಂಡಾಗ ಯಾರನ್ನು ಕೂಗುವುದು ಏನೆಂದು ಕೂಗುವುದು. ನಾ ಹುಟ್ಟಿದ, ಬೆಳೆದ, ಆಡಿದ್ದ, ಓದಿದ್ದ, ಉಸಿರಾಡುತ್ತಿದ್ದ ಕೊಡಗು ಇಂದು ಮುಳುಗಿದ ಹಡಗಾಗಿದೆ. ಜಲಪ್ರಳಯಕ್ಕೆ ಲಕ್ಷಾಂತರ ಜನರು ಅಕ್ಷರಶಃ ನೀರುಪಾಲಾಗಿದ್ದಾರೆ. ಇದಕ್ಕೆ ಮೂಕಜೀವಿಗಳು ಹೊರತಾಗಿಲ್ಲ, ಯಾರಿಗೂ ನೋವು ಮಾಡದ ನಮ್ಮವರು ಇಂದು ನೋವಿನಲ್ಲಿದ್ದಾರೆ. ಪ್ರಪಂಚದಲ್ಲಿ ಮೂರರಷ್ಟು ನೀರು ಒಂದರಷ್ಟು ಭೂಮಿ ಎಂಬುದನ್ನು ನೀರೆ ಮುಂದೆ ನಿಂತು ಹೇಳಿದಂತಿದೆ.

Image result for rashmika

ನಾನು, ನೀನು, ನಂದು, ನಿಂದು, ಮೇಲು, ಕೀಳು ಶ್ರೀಮಂತಿಕೆ ಎಲ್ಲಾ ನೀರಿನಲ್ಲಿ ಕೊಚ್ಚಿ ಹೋಗಿದೆ. ಮನುಷ್ಯತ್ವವೇ ಕಣ್ತುಂಬಿಕೊಂಡಿದೆ. ಮಳೆಯ ಶಬ್ಧ ನೀರಿನ ಆರ್ಭಟ ಕೇಳಿದರೆ ಜೀವ ನಡುಗುವಂತಾಗಿದೆ. ಮಕ್ಕಳು ಮಾಡಿದ ಪಾಪವಾದರೂ ಏನು? ಪ್ರಾಣಿಗಳು ಮಾಡಿದ ಪಾಪವಾದರು ಏನು? ದೇವರೆ ಉತ್ತರಿಸು. ಬೆಟ್ಟಗಳು ನೆಂದು ನೆಲವಾಗಿ, ಬಯಲು ಕೆರೆಗಳಾಗಿ, ದಾರಿಗಳು ನದಿಗಳಾಗಿ, ಕೊಡಗು ಸಮುದ್ರವಾಗಿದೆ. ನೀರು ನೀರು ನೀರು ಬಿಟ್ಟರೆ ಕಣ್ಣೀರು. ಧೈರ್ಯವಾಗಿರಿ ನಾವಿದ್ದೇವೆ ಎಂಬ ನಿಮ್ಮ ಮಾತುಗಳು ನಮ್ಮನ್ನು ಜೀವಂತವಾಗಿರಿಸಿದೆ. ಎಂದು ಎಲ್ಲಾರಿಗೂ ಧನ್ಯವಾದ ತಿಳಿಸಿದ್ದಾರೆ. ಸರ್ಕಾರಗಳು, ಸ್ವಯಂ ಸಂಘಗಳು, ಸಂಸ್ಥೆಗಳು,  ಚಿತ್ರರಂಗದವರು, ಪತ್ರಕರ್ತರು, ಮಾಧ್ಯಮದವರು, ವಿದ್ಯಾರ್ಥಿಗಳು, ಕೋಟ್ಯಾನುಕೋಟಿ ಕನ್ನಡಿಗರು, ಎಲ್ಲಾ ಭಾಷಿಕರು, ಪ್ರಪಂಚದ ಮೂಲೆ ಮೂಲೆಯಲ್ಲಿರುವ ಕೊಡವ ಸಮಾಜದವರು, ನೀವುಗಳು ಕೈ ಮೀರಿ ಸಹಾಯ ಮಾಡಿದ್ದೀರಿ, ಮಾಡುತ್ತಿದ್ದೀರಿ  ಬಳ್ಳಾರಿಯ ಜೈಲಿನ ಖೈದಿಗಳು ನಾಲ್ಕುವಾರದ ಮಾಂಸದೂಟ ಬೇಡವೆಂದು ಮೂರು ಲಕ್ಷ ರೂ.ಗಳನ್ನು ಕೊಡಗಿನ ಸಂತ್ರಸ್ತತಿಗೆ ಕಳಿಸಿದ್ದಾರೆಂದರೆ ಮನುಷ್ಯತ್ವ ನಮಗಿಂತ ಮುಂದಿದೆ ಅನಿಸುತ್ತದೆ.

ನಿಮ್ಮ ಸ್ಪಂದನೆಗೆ ಸಹಾಯಕ್ಕೆ ನಾನು ಖುಣಿ ಮನಸ್ಪೂರ್ವಕವಾಗಿ ಕೊಡಗಿನ ಪರವಾಗಿ ಒದ್ದೆಕಣ್ಣಿನಿಂದ ವಂದಿಸುತ್ತಿದ್ದೇನೆ. ಕೊಡಗನ್ನು ಕೊಡಗಿನವರ ನೊಂದ ಬದುಕನ್ನು ಪುನಃ ನಿರ್ಮಿಸಬೇಕಾಗಿದೆ. ಕೈ ಜೋಡಿಸಿ ನಾನು  ನಿಮ್ಮೊಂದಿಗೆ ಇರುತ್ತೇನೆ ಎಂದು ಎಂದು ರಶ್ಮಿಕಾ ಮಂದಣ್ಣ ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com