ಭಾರತದ ತ್ರಿವರ್ಣ ಧ್ವಜವೂ, ‘ಸಂಘ’ದ ಇಬ್ಬಂದಿತನವೂ : ಅಮಿತ್ ಶಾ ರಾಷ್ಟ್ರಧ್ವಜ ಎಡವಟ್ಟು..

ಭಾರತದ ತ್ರಿವರ್ಣ ಧ್ವಜವೂ, ‘ಸಂಘ’ದ ಇಬ್ಬಂದಿತನವೂ
(ಭಾರತದ ತ್ರಿವರ್ಣ ಧ್ವಜವೂ, ಬಿಜೆಪಿಯ ಇಬ್ಬಗೆ ನೀತಿಯೂ)

ಇಂಟ್ರೊ: ಅಮಿತ್ ಶಾ ಮಾಡಿದ ರಾಷ್ಟ್ರಧ್ವಜದ ಎಡವಟ್ಟನ್ನು, ಬಿಜೆಪಿಯೇತರ ನಾಯಕರು, ಅದರಲ್ಲೂ ಮುಸ್ಲಿಮರು ಮಾಡಿದ್ದರೆ, ದೇಶಾದ್ಯಂತ ಬಿಜೆಪಿ ರಂಪ ಮಾಡುತ್ತಿತ್ತು. ವಿಚಿತ್ರ ಎಂದರೆ ಬಿಜೆಪಿ ಸೇರಿದಂತೆ ಇಡೀ ಸಂಘ ಪರಿವಾರ ತ್ರಿವರ್ಣ ಧ್ವಜವನ್ನು ಮಾನಸಿಕವಾಗಿ ಎಂದೂ ಒಪ್ಪಿಲ್ಲ. ದೇಶಭಕ್ತಿಯ ಹೆಸರಲ್ಲಿ ಧ್ರುವಿಕರಣ ಮಾಡಲು, ರಾಜಕೀಯ ಲಾಭ ಪಡೆಯಲು ರಾಷ್ಟ್ರಧ್ವಜ ಅದಕ್ಕೆ ಒಂದು ಉಪಕರಣವಷ್ಟೇ. ಹುಬ್ಭಳ್ಳಿಯಲ್ಲಿ ಈದ್ಗಾ ಮೈದಾನದ ಸಿವಿಲ್ ವಿವಾದವನ್ನು ‘ದೇಶಭಕ್ತಿ’ಯ ಬೀದಿಯಾಟಕ್ಕೆ ತಿರುಗಿಸಲು ಅದು ನೆರವು ಪಡೆದುಕೊಂಡಿದ್ದು ಬಡಪಾಯಿ ತ್ರಿವರ್ಣ ಧ್ವಜವನ್ನೇ!

72ನೇ ಸ್ವಾತಂತ್ರೋತ್ಸವದಂದು ದೆಹಲಿಯ ಬಿಜೆಪಿ ಕಚೇರಿಯ ಸಮಾರಂಭದಲ್ಲಿ ತ್ರಿವರ್ಣ ಧ್ವಜವನ್ನು ಆಕಾಶದತ್ತ ಹಾರಿಸುವ ಬದಲು ಭೂತಾಯಿಯ ಮಡಿಲಿಗೆ ಕ್ಷಿಪಣಿಯಂತೆ ಇಳಿಸಿದ ‘ದೇಶಭಕ’್ತ ಅಮಿತ್ ಶಾರಿಗೆ ಈ ಕುರಿತಂತೇನೂ ಬೇಜಾರಿದ್ದಂತಿಲ್ಲ. ಇರಲೂಬಾರದು ಕೂಡ! ಸಂಘಪರಿವಾರವೆಂದೂ ಮಾನಸಿಕವಾಗಿ ನಮ್ಮ ರಾಷ್ಟ್ರಧ್ವಜವನ್ನು ಅಂಗೀಕರಿಸಿಯೇ ಇಲ್ಲ. ಅಮಿತ್ ಶಾಗೆ ಆದ ಈ ಎಡವಟ್ಟು ಯಾರಿಗಾದರೂ ಆಗಬಹುದಿತ್ತು. ಆದರೆ ಅದೇ ಒಬ್ಬ ಹಳ್ಳಿಯ ಶಾಲಾ ಮಾಸ್ತರು ಅಥವಾ ಗ್ರಾಪಂ ಸದಸ್ಯ ಇಂತಹ ಎಡವಟ್ಟು ಮಾಡಿದ್ದರೆ ಬೊಬ್ಬಿಡುತ್ತಿದ್ದ ಸ್ವಘೋಷಿತ ದೇಶಭಕ್ತರ್ಯಾರೂ ಈಗ ಸೊಲ್ಲೆತ್ತಿಲ್ಲ, ವಾಜಪೇಯಿಯವರ ಆತ್ಮಕ್ಕೆ ಶಾಂತಿ ಸಿಗಲೆಂದು ಮೌನಾಚರಣೆ ಮಾಡುತ್ತಿರಬೇಕು.


ಆರೆಸ್ಸೆಸ್ 1947 ಅಗಸ್ಟ್ 15, 1950 ಜನೆವರಿ 26ರಂದು ಮಹಾರಾಷ್ಟ್ರದ ನಾಗಪುರದ ತನ್ನ ಕೇಂದ್ರ ಕಚೇರಿಯ ಮೇಲೆ ತ್ರಿವರ್ಣ ಧ್ವಜ ಹಾರಿಸಿತ್ತು. ಅದಾದ 52 ವರ್ಷಗಳ ಕಾಲ ಅದೆಂದೂ ತ್ರಿವರ್ಣ ಧ್ವಜವನ್ನು ಹಾರಿಸಿರಲೇ ಇಲ್ಲ. ಅದಕ್ಕೆ ಭಗವಾ ಧ್ವಜವೇ ರಾಷ್ಟ್ರಧ್ವಜ! ‘ನಮಸ್ತೆ ಸದಾವತ್ಸಲೇ ಮಾತೃಭೂಮಿಯೇ’ ರಾಷ್ಟ್ರಗೀತೆ. ರಾಷ್ಟ್ರಧ್ವಜಕ್ಕೆ ಅವಮಾನ ಎಂದು ಅದು ಹುಯಿಲೆಬ್ಬಿಸಿದಾಗೆಲ್ಲ ರಾಜಕೀಯ ಲಾಭ ಮಾಡಿಕೊಳ್ಳುವ ಹುನ್ನಾರ ಇರುತ್ತದೆಯೇ ವಿನ: ನೈಜ ದೇಶಭಕ್ತಿಯಲ್ಲ! ಆರು ಜನರನ್ನು ಬಲಿ ತೆಗೆದುಕೊಂಡು ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ತನ್ನ ಅಸ್ತಿತ್ವವನ್ನು ಅದು ಗಟ್ಟಿ ಮಾಡಿಕೊಂಡಿದ್ದೇ ಧ್ವಜ ರಾಜಕಾರಣದಿಂದ. ಈಗಲೂ ಅಲ್ಲಿ ಬಿಜೆಪಿಯದ್ದೇ ಪ್ರಾಬಲ್ಯ.

ಧ್ವಜ, ಗೀತೆ, ಭಾರತಮಾತೆಯ ಕಾಲ್ಪನಿಕ ಚಿತ್ರ-ಇಂತಹ ಭಾವನಾತ್ಮಕ ಸಂಕೇತಗಳನ್ನು ಇಟ್ಟುಕೊಂಡು ಅಪಾಯಕಾರಿ ಆಟ ಆಡುತ್ತ ಬಂದಿರುವ ಸಂಘಪರಿವಾರ ಆ ಮೂಲಕ ಹಿಂದೂಗಳ ಧ್ರುವೀಕರಣ ಮಾಡಿ, ತನ್ನ ಕುಡಿ ಬಿಜೆಪಿಗೆ ರಾಜಕೀಯ ಲಾಭ ತಂದುಕೊಡುತ್ತ ಬಂದಿದೆ. ಈಗ ಭಾರತದ ಸೈನ್ಯವನ್ನೂ ಈ ಸಂಕೇತಗಳ ಪಟ್ಟಿಗೆ ಸೇರಿಸಿಕೊಂಡು ಬಿಟ್ಟಿದೆ! ಮಾತೆತ್ತಿದರೆ ದೇಶಭಕ್ತಿ ಎನ್ನುವ ಆರೆಸ್ಸೆಸ್, ಸ್ವಾತಂತ್ರ್ಯ ಚಳವಳಿಯೊಂದಿಗೆ ಗುರುತಿಸಿಕೊಂಡಿರಲೇ ಇಲ್ಲ. ಬದಲಾಗಿ ಅದು ಬ್ರಿಟಿಷರ ಪರವಾಗಿಯೇ ಕೆಲಸ ಮಾಡಿದ್ದಕ್ಕೆ ಸಾಕಷ್ಟು ಚಾರಿತ್ರಿಕ ದಾಖಲೆಗಳಿವೆ.

1925ರಲ್ಲಿ ಆರೆಸ್ಸೆಸ್ ಸಂಸ್ಥಾಪಿಸಿದ ಕೇಶವ ಬಲಿರಾಮ ಹೆಡಗೆವಾರ್ ಕೆಲವು ಕಾಲ ಸ್ವಾತಂತ್ರ್ಯ ಚಳವಳಿಯೊಂದಿಗೆ ಸಡಿಲ ಸಂಬಂಧ ಹೊಂದಿದ್ದರು. 1930ರಲ್ಲಿ ಅವರು ಒಂದು ಆದೇಶ ಹೊರಡಿಸಿ, ತನ್ನ ಖಾಕಿ ಚೆಡ್ಡಿ ಕಾರ್ಯಕರ್ತರ್ಯಾರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಬಾರದು ಎಂದಿದ್ದರು.
ಹೆಡಗೆವಾರ್‍ಗಿಂತ ಮೊದಲೇ ‘ಕ್ರಿಯಾಶೀಲ’ರಾಗಿದ್ದ ಮತ್ತೊಬ್ಬ ಹಿಂದುತ್ವದ ಐಕಾನ್ ವಿ.ಡಿ. ಸಾವರ್ಕರ್ ಹಲವು ವರ್ಷಗಳ ಕಾಲ ಹಲವಾರು ಬ್ರಿಟಿಷ್ ವಿರೋಧಿ ಪ್ರತಿಭಟನೆಗಳಲ್ಲಿ ಭಾಗವಹಿಸಿ, ಅಂಡಮಾನ್ ಜೈಲು ಸೇರಿದ್ದರು, ಬ್ರಿಟಿಷರೊಂದಿಗೆ ರಾಜಿಯಾದ ಈ ‘ದೇಶಭಕ್ತ’, ಇನ್ನೆಂದೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾವಹಿಸಲ್ಲ, ಬ್ರಿಟಿಷ್ ಸರ್ಕಾರಕ್ಕೆ ಎಲ್ಲ ಸಹಕಾರ ನೀಡುವುದಾಗಿ ಒಪ್ಪಿಕೊಂಡು ಜೈಲುವಾಸದಿಂದ ಮುಕ್ತಿ ಪಡೆದಿದ್ದರು.


1934ರಲ್ಲಿ ರಾಷ್ಟ್ರೀಯ ಕಾಂಗ್ರೆಸ್, ತನ್ನ ಸದಸ್ಯರಾರು ಕೋಮುವಾದಿ ಸಂಘಟನೆಗಳಾದ ಆರೆಸ್ಸೆಸ್, ಹಿಂದೂ ಮಹಾಸಭಾ ಮತ್ತು ಮುಸ್ಲಿಂಲೀಗ್‍ಗಳ ಜೊತೆ ಸಂಪರ್ಕ ಇಟ್ಟುಕೊಳ್ಳ ಕೂಡದು ಎಂದು ಸೂಚಿಸಿತ್ತು. 1942ರ ಐತಿಹಾಸಿಕ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ದೇಶದ ಸಾಮಾನ್ಯ ಜನರು, ಅದರಲ್ಲೂ ಮಹಿಳೆಯರು, ಮಕ್ಕಳು ಕೂಡ ಬ್ರಿಟಿಷರ ವಿರುದ್ಧ ಸಿಡಿದೆದ್ದಾಗ, ಆರೆಸ್ಸೆಸ್ ಮಾತ್ರ ಚಳವಳಿಯ ಹತ್ತಿರಕ್ಕೂ ಹಾಯಲಿಲ್ಲ. ಈ ಕುರಿತಾದ ಬ್ರಿಟಿಷರ ವರದಿಗಳಲ್ಲಿ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾಗಳಿಗೆ ಶಹಭಾಷಗಿರಿ ನೀಡಿತ್ತು. ‘ಅತ್ಯಂತ ಶಿಸ್ತಿನಿಂದ ವರ್ತಿಸಿದ ಈ ಸಂಘಟನೆಗಳು, ಕಾನೂನು ಪಾಲನೆ ಮಾಡಿದವು’ ಎಂದು ಬ್ರಿಟಿಷರಿಂದ ಬೆನ್ನು ತಟ್ಟಿಸಿಕೊಂಡ ಈ ಸಂಘಟನೆಗಳು ಇವತ್ತು ಧ್ವಜ ಹಿಡಿದುಕೊಂಡು ದೇಶಭಕ್ತಿಯ ಪಾಠ ಬೋಧಿಸುತ್ತಿರುವುದು ವರ್ತಮಾನದ ವ್ಯಂಗ್ಯ. ಈ ಮಾದರಿಯ ದೇಶಭಕ್ತಿಯನ್ನು ದೊಡ್ಡ ಸಂಖ್ಯೆಯಲ್ಲಿ ಜನ ಒಪ್ಪಿಕೊಂಡಿರುವುದು ವಿಪರ್ಯಾಸ ಮಾತ್ರವಲ್ಲ ಆತಂಕದ ವಿಷಯವೂ ಹೌದು.
ದೇಶ ಸ್ವಾತಂತ್ರ್ಯ ಸಿಕ್ಕ ಸಂಭ್ರಮದಲ್ಲಿರುವಾಗ ಆರೆಸ್ಸೆಸ್‍ನ ಮುಖವಾಣಿ ಬರೆಯುತ್ತದೆ: ‘ತ್ರಿವರ್ಣ ಧ್ವಜವನ್ನು ಆರೆಸ್ಸೆಸ್ ಎಂದೂ ಒಪ್ಪುವುದಿಲ್ಲ, ಗೌರವಿಸುವುದಿಲ್ಲ. ಸಂಖ್ಯೆ ಮೂರು ಎಂಬುದೇ ಅನಿಷ್ಟ. ಇದರಿಂದ ದೇಶಕ್ಕೆ ಒಳಿತಾಗಲ್ಲ’. ನಿಜವಾದ ಹಕಿಕತ್ತು ಎಂದರೆ ಅದು ಭಗವಾ ಧ್ವಜವನ್ನೇ ರಾಷ್ಟ್ರಧ್ವಜ ಎಂದು ಅಂದೇ ನಿರ್ಧರಿಸಿತ್ತು, ಈಗಲೂ ಕೂಡ ಅದೇ ನಿಲುವು ಹೊಂದಿದೆ.
ಆರೆಸ್ಸೆಸ್‍ನ ಎರಡನೇ ಪ್ರಚಂಡ ನಾಯಕ ಎಂ.ಎಸ್. ಗೋಲ್ವಾಲ್ಕರ್ ಬರೆದ ‘ಬಂಚ್ ಆಫ್ ಥಾಟ್ಸ್’ ಎಂಬ ಆರೆಸ್ಸೆಸ್‍ನ ಸಂವಿಧಾನದಲ್ಲಿ ತ್ರಿವರ್ಣ ಧ್ವಜವನ್ನು ಸ್ಪಷ್ಟವಾಗಿ ನಿರಾಕರಿಸಲಾಗಿದೆ. ಹೀಗೆ ಎಂದೂ ತ್ರಿವರ್ಣ ಧ್ವಜವನ್ನು ಮಾನಸಿಕವಾಗಿ ಒಪ್ಪದ ಸಂಘದ ಅಂಗಸಂಸ್ಥೆಗಳು, ಓಟಿನ ಲಾಭಕ್ಕಾಗಿ ಅದೇ ಧ್ವಜವನ್ನು ದುರ್ಬಳಕೆ ಮಾಡಿಕೊಳ್ಳುತ್ತ ಬಂದಿವೆ. ಅದಕ್ಕೆ ಸ್ಪಷ್ಟ ನಿದರ್ಶನ ಹುಬ್ಬಳ್ಳಿಯ ಈದ್ಗಾ ಧ್ವಜ ಪ್ರಕರಣ.


ಈದ್ಗಾ: ಒಂದು ತ್ರಿವರ್ಣ ಧ್ವಜ, ಆರು ಬಲಿ, ಬಿಜೆಪಿಗೆ ನೆಲೆ
1990ರ ದಶಕದ ಆರಂಭದ ವರ್ಷಗಳಲ್ಲಿ ವರ್ಷಕ್ಕೆ ಎರಡು ಸಾರಿ ಹುಬ್ಬಳ್ಳಿ-ಧಾರವಾಡ ಮತ್ತು ಸುತ್ತಲಿನ ಪ್ರದೇಶಗಳನ್ನು ರಣರಂಗ ಮಾಡುತ್ತ ಬಂದಿದ್ದ ಸಂಘದ ಅಂಗಸಂಸ್ಥೆಗಳ ಕೈಯಲ್ಲಿ ತ್ರಿವರ್ಣ ಧ್ವಜ ಅಕ್ಷರಶ: ಅಸ್ತ್ರವಾಗಿತ್ತು, ಆಯುಧವಾಗಿತ್ತು. 1920-30ರ ದಶಕದಲ್ಲೇ ಹುಬ್ಬಳ್ಳಿ ಮುನ್ಸಿಪಲ್ ಕಾರ್ಪೊರೇಷನ್ ವರ್ಷಕ್ಕರೆಡು ಸಲ ಹಬ್ಬದ ನಮಾಜ್ ಸಲ್ಲಿಸಲೆಂದು ಈದ್ಗಾ ಮೈದಾನವನ್ನು ಅಂಜುಮನ್-ಎ-ಇಸ್ಲಾಂ ಸಂಸ್ಥೆಗೆ ಲೀಸ್ ಆಧಾರದಲ್ಲಿ ನೀಡಿತ್ತು. 60ರ ದಶಕದಲ್ಲಿ ಮೈದಾನದ ಒಂದು ಭಾಗದಲ್ಲಿ ಅಂಜುಮನ್ ಸಂಸ್ಥೆ ವಾಣಿಜ್ಯ ಕಟ್ಟಡ ನಿರ್ಮಿಸಲು ಹೊರಟಾಗ ವಿವಾದ ಶುರುವಾಗಿ, ಕೋರ್ಟ್ ಮೆಟ್ಟಿಲೇರಿತು. 80ರ ದಶಕದ ಅಂತ್ಯದವರೆಗೂ ಅಂಜುಮನ್ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನಡುವೆ ಈ ವ್ಯಾಜ್ಯ ಕೋರ್ಟಿನಲ್ಲಿ ನಡೆದುಕೊಂಡು ಬಂದಿತ್ತು. ಆ ಸಂದರ್ಭದಲ್ಲಿ ಹೈಕೋರ್ಟ್, ‘ಅಲ್ಲಿ ನಮಾಜ್ ಮಾಡಲು ಮಾತ್ರ ಅನುಮತಿಯಿದೆ, ಕಟ್ಟಡ ನಿರ್ಮಿಸುವಂತಿಲ್ಲ’ ಎಂದಿತು. ಮುಂದೆ ಅಂಜುಮನ್ ಸುಪ್ರಿಂಕೋರ್ಟ್‍ಗೆ ಹೋಗಿತು.
1990ರ ದಶಕದ ಆರಂಭದಲ್ಲಿ ಬಾಬ್ರಿ ಮಸೀದಿ ವಿವಾದದಿಂದ ರಾಜಕೀಯ ನೆಲೆ ವಿಸ್ತರಿಸಿಕೊಳ್ಳುವ ಹವಣಿಕೆಯಲ್ಲಿದ್ದ ಬಿಜೆಪಿಗೆ ಅಂಥದೇ ವಿವಾದಗಳು ಬೇಕಾಗಿದ್ದವು. 1992ರ ಜನವರಿ 26ರಂದು ಶ್ರೀನಗರದ ಲಾಲ್‍ಚೌಕ್‍ನಲ್ಲಿ ಧ್ವಜ ಹಾರಿಸಿ, ‘ಕಾಶ್ಮೀರ ಉಳಿಸಿ’ ಆಂದೋಲನ ಆರಂಭಿಸಲಾಗುವುದು ಎಂದು ಬಿಜೆಪಿ ನಾಯಕ ಮುರಳಿ ಮನೋಹರ ಜೋಷಿ ಘೋಷಿಸಿದ್ದೇ ತಡ, ಅಂದು ಎಲ್ಲ ನಗರಗಳಲ್ಲೂ ಧ್ವಜಾರೋಹಣ ಮಾಡಲು ಬಿಜೆಪಿ ನಿರ್ಧರಿಸಿತು. ಇದು ಅದರ ಅಜೆಂಡಾದ ಭಾಗವೇ ಆಗಿತ್ತು. ಹುಬ್ಬಳ್ಳಿಯಲ್ಲಿ ರಾತ್ರೋರಾತ್ರಿ ಜನ್ಮ ತಾಳಿದ ‘ರಾಷ್ಟ್ರಧ್ವಜ ಗೌರವ ಸಂರಕ್ಷಣಾ ಸಮಿತಿ’ ನೆಹರು ಮೈದಾನ ಮತ್ತು ಮೂರು ಸಾವಿರ ಮಠದ ಅಂಗಳದಲ್ಲಿ ಅವಕಾಶವಿದ್ದರೂ, ಈದ್ಗಾ ಮೈದಾನದಲ್ಲೇ ಧ್ವಜ ಹಾರಿಸುವುದಾಗಿ ಪಟ್ಟು ಹಿಡಿಯಿತು. ಈದ್ಗಾ ವಿವಾದ ಕೋರ್ಟ್‍ನಲ್ಲಿ ಇರುವುದರಿಂದ ಜಿಲ್ಲಾಡಳಿತ ಇದಕ್ಕೆ ಅವಕಾಶ ನೀಡಲಿಲ್ಲ. 1992, 93ರಲ್ಲಿ ಧ್ವಜ ಹಾರಿಸುವ ನಖರಾಗಳನ್ನು ಮಾಡುತ್ತ ಬಂದ ಬಿಜೆಪಿ, ಈದ್ಗಾದಲ್ಲಿ ಧ್ವಜ ಹಾರಿಸಲು ಅಂಜುಮನ್ ಸಂಸ್ಥೆ ವಿರೋಧಿಸುತ್ತಿದೆ ಎಂಬ ಹಸಿ ಸುಳ್ಳನ್ನು ವ್ಯಾಪಕವಾಗಿ ಹರಡಿ, ಕೋಮು ವೈರಸ್ ಅನ್ನು ಇಂಜೆಕ್ಟ್ ಮಾಡುವುದರಲ್ಲಿ ಸ್ವಲ್ಪ ಯಶಸ್ಸನ್ನು ಕಂಡಿತ್ತು.
1994ರ ಅಗಸ್ಟ್ 15ರಂದು ಈದ್ಗಾದಲ್ಲಿ ಧ್ವಜ ಹಾರಿಸಿಯೇ ತೀರುವುದಾಗಿ ಬಿಜೆಪಿ ಪಟ್ಟು ಹಿಡಿಯಿತು. ಇದನ್ನು ನ್ಯಾಷನಲ್ ಇಶ್ಯೂ ಎಂದು ಪರಿಗಣಿಸಿ ಬಿಜೆಪಿಯ ರಾಷ್ಟ್ರೀಯ ಮಂಡಳಿ, ಫೈರ್‍ಬ್ರ್ಯಾಂಡ್ ನಾಯಕಿ ಉಮಾಭಾರತಿಗೆ ಇದರ ನೇತೃತ್ವ ವಹಿಸಿತು. ಸಮೀಪದಲ್ಲೇ ವಿಧಾನಸಭೆ ಚುನಾವಣೆ ಬರಲಿದ್ದರಿಂದ ಬಿಜೆಪಿಗೆ ಮತಗಳ ಧ್ರುವಿಕರಣಕ್ಕೆ ಈ ಹುಸಿ ದೇಶಭಕ್ತಿಯ ಆಟ ಬೇಕಾಗಿತ್ತು. ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ‘ಅದು ವಿವಾದಿತ ಜಾಗ. ನ್ಯಾಯಾಲಯದಲ್ಲಿ ವ್ಯಾಜ್ಯ ಇರುವುದರಿಂದ ಸಬ್‍ಜ್ಯುಡೀಸ್ ಆಗುತ್ತದೆ. ಯಾವ ಕಾರಣಕ್ಕೂ ಈದ್ಗಾವನ್ನು ಮತ್ತೊಂದು ಅಯೋಧ್ಯಾ ಆಗಲು ಬಿಡುವುದಿಲ್ಲ’ ಎಂದು ಖಡಕ್ ಎಚ್ಚರಿಕೆ ನೀಡಿದರು.


ವೇಷ ಮರೆಸಿಕೊಂಡು ಕಳ್ಳಿಯಂತೆ ಹುಬ್ಬಳ್ಳಿ ತಲುಪಿದ ಉಮಾಭಾರತಿ ಅಗಸ್ಟ್ 15ರ ಮುಂಜಾನೆ 11.30 ಸುಮಾರಿಗೆ ಈದ್ಗಾದತ್ತ ಹೊರಟರು. ಈದ್ಗಾದಿಂದ ಒಂದು ಕಿಮೀ ಮೊದಲೇ ಅವರ ಬಂಧನವಾಗಿತು. ಇನ್ನೊಂದು ಕಡೆ ಯಡಿಯೂರಪ್ಪ, ಜಗದೀಶ ಶೆಟ್ಟರ, ಅನಂತಕುಮಾರ್, ಪ್ರಹ್ಲಾದ ಜೋಶಿ ನೇತೃತ್ವದಲ್ಲಿ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ನಿಷೇಧಾಜ್ಞೆ ಉಲ್ಲಂಘಿಸಿ ಮೆರವಣಿಗೆ ಹೊರಟರು. ದಾರಿಯುದ್ದಕ್ಕೂ ಕಲ್ಲುಗಳನ್ನು ಎಸೆಯುತ್ತ, ಬೆಂಕಿ ಹಚ್ಚುತ್ತ ದೊಂಬಿಯ ವಾತಾವರಣ ಸೃಷ್ಟಿಸಲಾಯ್ತು. ಲಾಠಿಚಾರ್ಜ್, ಟಿಯರ್ ಗ್ಯಾಸ್ ಪ್ರಯೋಗದ ನಂತರವೂ ದೊಂಬಿ, ಬೆಂಕಿಯಾಟ ಮುಂದುವರೆದಾಗ ಪೊಲೀಸರು ಅನಿವಾರ್ಯವಾಗಿ ಗೋಲಿಬಾರ್ ಮಾಡಿದರು. ‘ದೇಶಭಕ್ತಿ’ಯ ಹುಮ್ಮಸ್ಸಲ್ಲಿ ಬಂದ ಅಮಾಯಕರು, ದಾರಿಹೋಕರು ಸೇರಿ ಆರು ಜನರು ಬಲಿಯಾದರು. ಪೊಲೀಸರ ಕಣ್ತಪ್ಪಿಸಿ ಧ್ವಜ ಹಾರಿಸಿದೆವೆಂದು ಬಿಜೆಪಿ ಸುಳ್ಳು ಹರಡಿ ‘ಗೆಲುವು’ ದಾಖಲಿಸಿಕೊಂಡಿತೆ ವಿನ: ರಾಷ್ಟ್ರಧ್ವಜ ಬೀದಿಪಾಲಾದ ಬಗ್ಗೆ, ಸತ್ತವರ ಬಗ್ಗೆ, ಗಾಯಗೊಂಡವರ ಬಗ್ಗೆ ಅದು ಪಶ್ಚಾತಾಪವನ್ನು ಪಡಲೇ ಇಲ್ಲ.
ಇವತ್ತಿಗೂ ಹುಬ್ಬಳ್ಳಿ-ಧಾರವಾಡ ಭದ್ರನೆಲೆ. ಶೆಟ್ಟರ, ಜೋಶಿಗಳ ರಾಜಕೀಯ ಭವಿಷ್ಯ ಅರಳಿಸಿದ್ದೇ ಈ ಗಲಾಟೆ. ಆಗ ಧ್ರುವಿಕರಣಗೊಂಡ ಹಿಂದೂ ಮತಗಳು ಈಗಲೂ ಬಿಜೆಪಿಯ ಒಲವನ್ನು ಬಿಟ್ಟಿಲ್ಲ. ಮುಂದೆ ದೇವೆಗೌಡರ ಪ್ರಯತ್ನದಿಂದಾಗಿ ಈದ್ಗಾದಲ್ಲಿ ಪ್ರತಿವರ್ಷ ಎರಡು ದಿನ ರಾಷ್ಟ್ರಧ್ವಜ ಹಾರಾಡುತ್ತದೆ. ಅಂಜುಮನ್ ಸಂಸ್ಥೆಯೇ ಹೆಮ್ಮೆಯಿಂದ ಈಕೆಲಸ ಮಾಡುತ್ತಿದೆ.


1950ರ ನಂತರ 2002ರವರೆಗೂ ತನ್ನ ನಾಗಪುರ ಕೇಂದ್ರ ಕಚೇರಿಯ ಮೇಲೆ ರಾಷ್ಟ್ರಧ್ವಜ ಹಾರಿಸದ ಸಂಘ ಪರಿವಾರಕ್ಕೆ ತ್ರಿವರ್ಣ ಧ್ವಜದ ಬಗ್ಗೆ ಮಾತಾಡುವ ಯಾವ ನೈತಿಕತೆಯಿದೆ. ಈಗಲೂ ಅದರ ಧ್ವಜಪ್ರೇಮ ರಾಜಕೀಯ ಲಾಭಕ್ಕಾಗಿ ಮಾತ್ರ.
ಕೊಲೆಯತ್ನ, ಗಲಭೆಗೆ ಪ್ರಚೋದನೆ ಆರೋಪ ಹೊತ್ತಿದ್ದ ಉಮಾಭಾರತಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಅನಿವಾರ್ಯವಾಗಿ ಹುಬ್ಬಳ್ಳಿಗೆ ಬಂದು ನ್ಯಾಯಾಂಗಕ್ಕೆ ಶರಣಾದರು. ಅಲ್ಲಿಗೆ ಅವರ ಮುಖ್ಯಮಂತ್ರಿ ಪದವಿಯೂ ಹೋಯಿತು. ಮುಂದೆ ರಾಜ್ಯ ಸರ್ಕಾರ ಪ್ರಕರಣ ಹಿಂಪಡೆದ ಮೇಲೆ ಅವರು ನಿರಾಳರಾದರು. ಆದರೆ ಸಮುದಾಯಗಳ ನಡುವೆ ತೋಡಿ ಹೋದ ಕಂದಕ ಈಗಲೂ ಹಾಗೇ ಇದೆ. ಅದೂ ಈಗಲೂ ಬಿಜೆಪಿಗೆ ರಾಜಕೀಯ ಫಲ ನೀಡುತ್ತಲೇ ಇದೆ.
ಅಂದಂತೆ ಅಮಿತ್ ಶಾ ಮಾಡಿದ ಧ್ವಜ ಎಡವಟ್ಟಿಗೆ ಹುಬ್ಬಳ್ಳಿಯ ‘ರಾಷ್ಟ್ರಧ್ವಜ ಗೌರವ ಸಂರಕ್ಷಣ ಸಮಿತಿ’ಯ ಪ್ರತಿಕ್ರಿಯೆಯೇನು? ಅದು ಇದ್ದರಲ್ಲವೇ? ಆರು ಜನರನ್ನು ಬಲಿ ತೆಗೆದುಕೊಂಡ ಕೂಡಲೇ ಅದೂ ಮಾಯವಾಗಿ ಹೋಗಿದೆ!
-ಪಿ.ಕೆ. ಮಲ್ಲನಗೌಡರ್

Leave a Reply

Your email address will not be published.

Social Media Auto Publish Powered By : XYZScripts.com