ಬೆಂಗಳೂರು : ‘ಮತ್ತೊಬ್ಬ ಮಾಯಿ’ : ಧಾರವಾಡದ ಆಟ – ಮಾಟ ತಂಡದಿಂದ ನಾಟಕ ಪ್ರದರ್ಶನ

ಮತ್ತೊಬ್ಬ ಮಾಯಿ
ತೀವ್ರವಾದ ಸಂವೇದನೆ ಮತ್ತು ಸೂಕ್ಷ್ಮ ವಿವರಗಳನ್ನು ಕತೆಯೊಂದನ್ನು ಓದುತ್ತಾ ಓದುತ್ತಾ ಓದುಗನು ತಾನೇ ಪಾತ್ರಗಳ ಜೊತೆ ಓಡಾಡುತ್ತಾ, ಅವರ ಸನ್ನಿವೇಶಗಳನ್ನು ಸಾಕ್ಷೀಕರಿಸುತ್ತಾ, ಮಿಗಿಲಾಗಿ ತಾನೂ ಪಾತ್ರಗಳ ಒಡನಾಡಿಯಾಗುತ್ತಾ ಕತೆಯ ಭಾಗವೇ ಆಗುವಂತಹ ಸಾಧ್ಯತೆಗಳನ್ನು ಪುಸ್ತಕ ಹುಟ್ಟಿಹಾಕುತ್ತದೆ. ಆದರೆ ಇಲ್ಲಿ ಮತ್ತೊಬ್ಬ ಮಾಯಿ ನಾಟಕವೂ ಕೂಡ ಅದೇ ಕೆಲಸವನ್ನು ಮಾಡಿತು.

ಸಿನಿಮಾ ಎಂದರೆ ಸನ್ನಿವೇಶ ಮತ್ತು ಪಾತ್ರಗಳ ಬೆಳವಣಿಗೆಗೆ ಸಿದ್ಧ ಮಾದರಿಯನ್ನು ಅವಲಂಬಿಸುವಂತೆ ಸಾಹಿತ್ಯದಲ್ಲಿಯೂ ಕೂಡ ಪಾತ್ರ ಪೋಷಣೆ ಅಥವಾ ಓದುಗರ ಕರುಳನ್ನು ಹಿಂಡಲೆಂದೇ ಕತೆಗಳನ್ನು ತಿರುಚುವಂತ ಮಾದರಿಗಳನ್ನು ತುಂಡರಿಸುತ್ತಾ ಪಾಂಡುರಂಗ ಡಿಗಸ್ಕರ್ (ಮಹಾದೇವ ಹಡಪದ) ಯಾವುದೇ ಅಥವಾ ಯಾರದೇ ಜೀವನದ ಜೀವಗಳು ಪಾತ್ರಗಳಲ್ಲ ಬದಲಿಗೆ ನಮ್ಮದೇ ಜೀವನದ ಆಯಾಮಗಳು, ನಮ್ಮದೇ ಜೀವದ ಸ್ಪಂದನಗಳು ಎಂಬುದನ್ನು ಗಟ್ಟಿಗೊಳಿಸುತ್ತಾ ಹೋಗುತ್ತಾರೆ. ಕಥನದ ಪಾಂಡಿತ್ಯದ ಅಥವಾ ಸಿದ್ಧಮಾದರಿಯ ತಂತ್ರಗಾರಿಕೆಯನ್ನು ಒಡೆಯುವ ಪಾಂಡಿತ್ಯ ಮತ್ತು ತಂತ್ರಗಾರಿಕೆಯೇ ಮತ್ತೆ ಮಾಯಿಯನ್ನು ನಿರೂಪಿಸುವ ವಿಧಾನವಾಗಿದೆ.

ಹಿಂದೂಸ್ತಾನಿಯಲ್ಲಿ ದಸ್ತಾಂಗೋಯಿ ಎಂಬ ಕತೆ ಹೇಳುವ ಪರಂಪರೆಯ ಮಾದರಿ ಎಂದು ಹೇಳಿದರೂ, ಸಂಸ್ಕೃತ ನಾಟಕದ ಸೂತ್ರಧಾರನೊಬ್ಬ ನಾಟಕದ ಭಾಗವಾಗಿ ನಾಟಕದುದ್ದಕ್ಕೂ ಕ್ರಿಯಾತ್ಮಕವಾಗಿದ್ದು ಭಾವನಾತ್ಮಕವಾಗಿ ಸ್ಪಂದಿಸುವ ಮಾದರಿ ಕೂಡ ಇದಾಗಿದೆ. ಕುಣಕಾಲ್ ಹುಡುಗಿ ಲಕ್ಷ್ಮಿಯ ಮುಗ್ಧತೆಯನ್ನು ಮುಂದಿಟ್ಟುಕೊಂಡು ನಾಟಕಕಾರ ಯಾವುದೇ ಹೆಣ್ಣುಮಗುವಿನ ಚಿತ್ರಣವನ್ನು ಕಟ್ಟಿಕೊಡುತ್ತಾ ಹೋಗುವುದು ನಾಟಕದ ಒಂದು ಭಾಗವಾದರೆ, ಆ ಹುಡುಗಿಯ ಜೊತೆಗೆ ಪ್ರಿಯಕರನಲ್ಲದ, ಅಪ್ಪನಲ್ಲದ, ಅಣ್ಣನಲ್ಲದ; ಸಾಮಾನ್ಯವಾಗಿ ಅಥವಾ ಕೌಟುಂಬಿಕವಾಗಿ ಒಂದು ಹೆಣ್ಣು ಜೀವಕ್ಕೆ ಯಾವುದಾದರೊಂದು ಆಪ್ತ ಸಂಬಂಧ ಇರಬಹುದಾಗಿರುವಂತಹ ಗಂಡು ಆಗಿಲ್ಲದೇ ಸಾಮಾನ್ಯ ಪುರುಷನೊಬ್ಬ ಶಿಕ್ಷಕನಾಗಿದ್ದು ಅವನು ತನ್ನದೇ ಸಮಾಜದಲ್ಲಿ ಒಂದು ಸಾಮಾನ್ಯ ಮುಗ್ಧ ಹೆಣ್ಣೊಂದನ್ನು ನೋಡುತ್ತಾ, ಅವಳ ಆಕರ್ಷಣೆಗೆ, ಅವರ ಒಳಿತಿಗೆ, ಅವಳ ನೋವಿಗೆ ಸ್ಪಂದಿಸುವ ರೀತಿ ಒಬ್ಬ ಗಂಡಸು ಸಮಾಜದ ಯಾವುದೇ ಹೆಣ್ಣಿನ ಕಡೆಗೆ ಹೊಂದಿರಬೇಕಾದ ಘನತೆ ಮತ್ತು ಆಪ್ತತೆಯುಳ್ಳ ಧೋರಣೆಗೆ ಮಾದರಿಯಾಗುತ್ತದೆ.

ಸಿದ್ಧ ಮಾದರಿಯ ಕಥನ ಕ್ರಮವನ್ನು ಒಡೆಯುವ ನೆಪದಲ್ಲಿ ವ್ಯಕ್ತಿಯ ಕುರಿತಾದ ಅದರಲ್ಲೂ ಹೆಣ್ಣಿನ ಕುರಿತಾದ ಸಮಾಜದ ಸಿದ್ಧ ಮಾದರಿಯ ನಿರೀಕ್ಷೆಗಳನ್ನು ಒಡೆಯುವ ಸಾಹಸದ ಕತೆ ಲಕ್ಷಿಯದಾಗಿರುತ್ತದೆ. ಕುಣಕಾಲ್ ಹುಡುಗಿ ಲಕ್ಷ್ಮಿಯೆಂದು ಸಮಾಜವು ಕರೆದರೆ, ತನ್ನನ್ನು ತಾನು ಝಾನ್ಸೀರಾಣಿ ಲಕ್ಷ್ಮಿ ಎಂಬ ಆತ್ಮಚಿತ್ರಣ (ಸೆಲ್ಫ್ ಇಮೇಜ್) ಹೊಂದಿರುವಂತಹ ಹೆಣ್ಣು ಮಗುವಿಗೆ ತನ್ನದೇ ಆದಂತಹ ಕನಸುಗಳು, ಆಸೆಗಳು, ಸಾಧನೆಯ ಬಗೆಗಳನ್ನು ಹೊಂದಿದ್ದು, ಅವೆಲ್ಲವೂ ಸಮಾಜದ ಮೂಲ ಘಟಕವಾದ ಕುಟುಂಬವು ಹೇಗೆ ಕಂಡಿತು, ತಮ್ಮದ್ದನ್ನು ಹೇಗೆ ಹೇರಿತು ಎಂಬುದನ್ನೇ ಮುಂದಿನ ಕಥನವು ರೂಪಿಸುವುದು.
ಈ ಲಕ್ಷ್ಮಿಯಂತೂ ಒಂದು ಕಾಲ್ಪನಿಕ ಪಾತ್ರವಲ್ಲ. ಅಸಂಖ್ಯಾತ ಹೆಣ್ಣು ಮಕ್ಕಳ ಪ್ರತಿನಿಧಿ. ನಾಟಕವನ್ನು ನೋಡುತ್ತಾ ನೋಡುತ್ತಾ ನನ್ನ ಜೀವನದಲ್ಲಿ ಹಾದು ಹೋದ ಅನೇಕ ಹೆಣ್ಣು ಮಕ್ಕಳ ಬದುಕಿನ ಭಾಗವಾಗಿ ಈ ಕತೆ ಧ್ವನಿಸುತ್ತಿದೆ ಎಂದೇ ನನಗೆ ತೋರಿದ್ದು. ತಾನೊಬ್ಬ ಪುರುಷನೆಂಬ ಅಹಂಕಾರದ ಪೊರೆ ಕಳಚಿಕೊಂಡು, ತನ್ನೊಳಗಿರುವ ಹೆಣ್ತನದ ಸಾರಸತ್ವವನ್ನು ದಕ್ಕಿಸಿಕೊಂಡು, ಆ ಮೂಲಕವಾಗಿ ಹೊರಗೆ ಭೌತಿಕವಾಗಿ ಕಾಣುವ ಹೆಣ್ಣನ್ನು ನೋಡದೇ ಹೋದರೆ ಹೆಣ್ಣು ಎಂದು ಕರೆಯಿಸಿಕೊಳ್ಳುವ ಒಂದು ಜೀವಕ್ಕೆ ಸ್ಪಂದಿಸುವುದು ಪ್ರಾಮಾಣಿಕ ಅನುಭೂತಿ (ಎಂಪತಿ) ಎಂದು ನಾನು ಭಾವಿಸುತ್ತೇನೆ. ಒಂದು ಹೆಣ್ಣಿಗೆ ಪಾಪ ಎನ್ನುವ ಸಿಂಪತಿಯೂ (ಅನುಕಂಪ) ಕೂಡ ಗಂಡಿನ ಪುರುಷತ್ವದ ಅಹಂಕಾರದ ಭಾಗವೇ ಆಗಿರುತ್ತದೆ.

ನಾಟಕದ ತಂತ್ರಗಾರಿಕೆ ನನ್ನ ವಶಪಡಿಸಿಕೊಂಡಿದ್ದು ಹೇಗೆಂದರೆ, ಲಕ್ಷ್ಮಿಯ ಮುಗುದತೆಯ ಮತ್ತು ದಿಟ್ಟತನದ ಸನ್ನಿವೇಶಗಳನ್ನು ಕಟ್ಟಿಕೊಡುತ್ತಾ ನನ್ನದೇ ತಾಯಿ, ತಂಗಿ, ಪ್ರೇಯಸಿ, ಮಗಳು ಅಥವಾ ಸ್ವಯಂ ನಾನೇ; ಯಾರೇ ಆಗಿರಲೆಂಬ ಆಸ್ತೆಯನ್ನು ಮೂಡಿಸುತ್ತಾ ಅದನ್ನು ಅನುಸರಿಸುವುದು. ಹಾಗೆ ಅನುಸರಿಸುತ್ತಾ ಹೋಗುವಾಗ ಮುಂದಿನ ದುರಂತಗಳನ್ನು ಸಾಕ್ಷೀಕರಿಸುವಾಗ ಆಘಾತವಾಗುತ್ತದೆ. ಏಕೆಂದರೆ, ನನ್ನ ತಾಯಿ, ತಂಗಿ, ಪ್ರೇಯಸಿ, ಮಗಳು ಅಥವಾ ನನಗೆ; ಯಾರಿಗಾದರೂ ಅಂತಹ ಸ್ಥಿತಿಯನ್ನು ಒಪ್ಪಿಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿಯು ಹೃದಯವನ್ನು ಹಿಂಡುತ್ತದೆ. ತನ್ನ ಬದುಕಿಗೆ ಆ ಪರಿಸ್ಥಿತಿಯನ್ನು ಆಮಂತ್ರಿಸಿಕೊಳ್ಳಲು ಸುತರಾಂ ಸಾಧ್ಯವಿಲ್ಲ. ಆಗ ಎದೆಯು ಒಡೆಯುತ್ತದೆ.

ಸಮಾಲೋಚನೆಗೆಂದು ನನ್ನ ಬಳಿ ಬರುವ ಅನೇಕಾನೇಕ ಚಿಕ್ಕತಾಯಂದಿರ ಬದುಕುಗಳ ಕ್ಷೀಣಧ್ವನಿ ಈ ಕತೆಯಾಗಿದೆ. ಹಾಗಾಗಿಯೇ ವೈಯಕ್ತಿಕವಾಗಿ ಮತ್ತೆ ಮಾಯಿ ನನ್ನನ್ನು ಹೆಚ್ಚು ಕಾಡಿದಳು. ಪಾಂಡುರಂಗ ಡಿಗಸ್ಕರ್ ಎಂಬ ಸಾಕ್ಷಿ ಪ್ರಜ್ಞೆಯು ಅನುಕಂಪವನ್ನು (ಸಿಂಪತಿ) ಅಥವಾ ಅನುಭೂತಿಯನ್ನು (ಎಂಪತಿ) ಲಕ್ಷ್ಮಿಯ ಬಗ್ಗೆ ಹೊಂದಿರುತ್ತದೆ ಎಂಬುದು ಮುಖ್ಯವಲ್ಲ. ನಾಟಕದ ಪ್ರದರ್ಶನವನ್ನು ನೋಡುವವನು ತನ್ನ ಬದುಕಿನಲ್ಲಿ ಹಾದು ಹೋದ ಸಂಬಂಧಗಳ ಅಥವಾ ಸಾಕ್ಷೀಕರಿಸಿದಂತಹ ಜೀವನಗಳಿಗೆ ಹೇಗೆ ಮಿಡಿದಿದ್ದ ಅಥವಾ ಮಿಡಿಯುತ್ತಾನೆ ಎಂಬುದರ ಸೂಕ್ಷ್ಮ ಮನಸ್ಥಿತಿಯ ಆಧಾರದಲ್ಲಿ ಲಕ್ಷ್ಮಿಗೆ ಸ್ಪಂದಿಸಲು ಸಾಧ್ಯ.
ಒಟ್ಟಾರೆ ನಾಟಕ ಪ್ರದರ್ಶನ ಯಶಸ್ವಿಯಾಯಿತು. ಹೃದಯ ಮುಟ್ಟುವುದರಲ್ಲಿ, ಕರಳು ಹಿಂಡುವುದರಲ್ಲಿ ತನ್ನ ಕೆಲಸವನ್ನು ಪೂರೈಸಿಕೊಂಡಿತು. ಆದರೆ ಲಕ್ಷ್ಮಿಯು ಮಾತ್ರ ಜೊತೆಜೊತೆಗೇ ಇದ್ದು ಕಾಡುತ್ತಿದ್ದಾಳೆ ಯಾರ್‍ಯಾರದೋ ಚಿಕ್ಕ ತಾಯಿಯರ ರೂಪದಲ್ಲಿ, ನಿಜದ ಬದುಕಲ್ಲಿ.

ರಾಘವೇಂದ್ರ ಪಾಟೀಲರು ಅತ್ಯಂತ ಸತ್ವಶಾಲಿಯಾದ ಕತೆಯನ್ನು ರಚಿಸಿದ್ದಾರೆ. ಅದಕ್ಕೆ ಪೂರಕವಾಗಿ ಮೂರು ಜನರ ತಂಡವು ಸಮರ್ಥವಾಗಿಯೂ ಮತ್ತು ಪ್ರತಿಭಾಶಾಲಿಗಳಾಗಿಯೂ ನಿರೂಪಿಸಿದ್ದಾರೆ. ಇದಕ್ಕಿಂತ ಹೆಚ್ಚೇನೇ ಹೇಳಿದರೂ ವಿಷಯದ ಪುನರಾವರ್ತನೆಯಾಗುವ ಹಿಂಜರಿಯುವಿಕೆಯಿಂದ ಇಲ್ಲಿಗೆ ನಿಲ್ಲಿಸುತ್ತೇನೆ.

ಮತ್ತೊಬ್ಬ ಮಾಯಿ
ಕನ್ನಡ ನಾಟಕ
ಧಾರವಾಡದ ಆಟ ಮಾಟ ತಂಡದಿಂದ
ರಚನೆ: ರಾಘವೇಂದ್ರ ಪಾಟೀಲ
ಪರಿಕಲ್ಪನೆ: ಮಹಾದೇವ ಹಡಪಡ.
ದಿನಾಂಕ: 20/08/2018 (ಸೋಮವಾರ)
ಸಮಯ: ಸಂಜೆ: 6.30 ಕ್ಕೆ.
ಸ್ಥಳ: ಸ್ಫೂರ್ತಿಧಾಮ, ಬಾಬಾ ಸಾಹೇಬ್ ಅಂಬೇಡ್ಕರ್ ಸ್ಮಾರಕ ಕೇಂದ್ರ. ಅಂಜನಾ ನಗರ, ಮಾಗಡಿ ರಸ್ತೆ, ಬೆಂಗಳೂರು: ೯೧

Leave a Reply

Your email address will not be published.

Social Media Auto Publish Powered By : XYZScripts.com