ಯಾರಿಗೆ ಅಜಾತಶತ್ರು..? ಮುಖವಾಡವಾಗಿಯೇ ಬದುಕು ಮುಗಿಸಿದ ಅಟಲ್..

ಯಾರಿಗೆ ಅಜಾತಶತ್ರು?
ಮುಖವಾಡವಾಗಿಯೇ ಬದುಕು ಮುಗಿಸಿದ ಅಟಲ್
ವ್ಯಕ್ತಿಯೊಬ್ಬರ ಅದರಲ್ಲೂ ‘ಗಣ್ಯ’ ಎಂದು ಗುರುತಿಸಿಕೊಂಡ ವ್ಯಕ್ತಿಯೊಬ್ಬರ ನಿಧನವಾದಾಗ ನಮ್ಮ ಬಹುಪಾಲು ಮಾಧ್ಯಮಗಳಲ್ಲಿ ವಸ್ತುನಿಷ್ಠ ವಿಮರ್ಶೆ ಕಾಣುವುದೇ ಇಲ್ಲ. ಇವತ್ತಿನ ಪರಿಸ್ಥಿತಿಯಲ್ಲಂತೂ, ವಾಜಪೇಯಿಯವರ ನಿಧನದ ಸಂದರ್ಭವನ್ನೂ ಬಿಜೆಪಿಗೆ ಲಾಭಕರ ಮಾಡಿಕೊಡುವ ದೊಡ್ಡಮಟ್ಟದ ಯತ್ನವೊಂದು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚಾಲ್ತಿಯಾಗಿದೆ.

Image result for atal bihari vajpayee
ನನಗೆ ಪಕ್ಕಾ ನೆನಪಿದ್ದಂತೆ, ಪಿ. ಲಂಕೇಶರು ವಾಜಪೇಯಯವರನ್ನು ಕೇಲವೆರಡು ಪದಗಳಲ್ಲಿ ವಿಮರ್ಶೆ ಮಾಡಿದ್ದರು- ‘ಗೋಮುಖ ವ್ಯಾಘ್ರ’ ಎಂದು. ಅವರದೇ ಪಾರ್ಟಿಯ ಗೋವಿಂದಾಚಾರ್ಯ ಕೂಡ ಒಮ್ಮೆ ಸಿಟ್ಟಿನಲ್ಲಿ, ‘ಆರ್‍ಎಸ್‍ಎಸ್ ಅಟಲ್ ಅವರನ್ನು ಮುಖವಾಡದಂತೆ ಬಳಸುತ್ತಿದೆ’ ಎಂದಿದ್ದರು.
ವಾಜಪೇಯಿ ನಿಧನದ ಕೆಲವೇ ಗಂಟೆಗಳಲ್ಲಿ ‘ದಿ ವೈರ್’ಗೆ ಬರೆದ ಲೇಖನದಲ್ಲಿ ನೀನಾ ವ್ಯಾಸ್‍ರವರು, ‘ಅವರೊಂದು ಮುಖವಾಡವಾಗಿದ್ರು, ಎಂದಿಗೂ ಎಂದೆಂದಿಗೂ ಸಂಘದ ನಿಷ್ಠರಾಗಿದ್ದರು’ ಎಂದು ಸರಿಯಾಗಿಯೇ ಬರೆದಿದ್ದಾರೆ. ನೀನಾ ವ್ಯಾಸ್ ‘ ದಿ ಹಿಂದೂ’ ಪತ್ರಿಕೆಗೆ ಹಲವಾರು ವರ್ಷಗಳ ಕಾಲ ಬಿಜೆಪಿ ನಡೆಗಳ ಕುರಿತಂತೆ ವರದಿ ಮಾಡಿದ ಹಿರಿಯ ಪತ್ರಕರ್ತೆ.

Image result for atal bihari vajpayee
2002ರ ಗುಜರಾತ್ ಹತ್ಯಾಕಾಂಡ ನಡೆದಾಗ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಕೆಳಗಿಳಿಸಲಾಗದ ಪ್ರಧಾನಿ ವಾಜಪೇಯಿ ಯಾರ ಪಾಲಿಗೆ ಅಜಾತಶತ್ರುವಾಗಿದ್ದರು? ಅದೇ ಸಂದರ್ಭದಲ್ಲಿ, ‘ಮುಸ್ಲಿಮರು ಯಾರೊಂದಿಗೂ ಹೊಂದಿಕೊಳ್ಳಲ್ಲ, ನೆರೆಹೊರೆಯವರೊಂದಿಗೂ ಸಹ’ ಎಂದ ಅವರದು ಕವಿಹೃದಯ ಹೇಗಾಗುತ್ತದೆ?
ಬಾಬ್ರಿ ಮಸೀದಿ ಕೆಡವುವ ಸಂದರ್ಭದಲ್ಲಿ ಸ್ಥಳದಲ್ಲಿ ಈ ‘ಗೋಮುಖ’ ಇರದಂತೆ ಸಂಘ ನೋಡಿಕೊಂಡಿತ್ತು. ಆದರೆ ಅದರ ಹಿಂದಿನ ದಿನವೇ ಲಖನೌದಲ್ಲಿ ಕರಸೇವಕರನ್ನು ಉದ್ದೇಶಿಸಿ ಮಾತಾಡಿದ್ದ ವಾಜಪೇಯಿ, ‘ ವಿವಾದಿತ ಪ್ರದೇಶದಲ್ಲಿನ ಕೆಲವು ಕಟ್ಟಡಗಳನ್ನು ನೆಲಸಮ ಮಾಡಲು ಸುಪ್ರಿಂಕೋರ್ಟೇ ಸೂಚಿಸಿದೆ’ ಎಂದು ಪ್ರಚೋದನಾಕಾರಿಯಾಗಿ ಮಾತಾಡಿದ್ದರು. ಇಂತವರು ಶಾಂತಿದೂತ ಹೇಗಾಗುತ್ತಾರೆ?
ಸಿಂಪಲ್ಲಾಗಿ ಹೇಳಬೇಕೆಂದರೆ ನೀನಾ ವ್ಯಾಸ್ ಬರೆದಂತೆ, ‘ಅವರೊಂದು ಮುಖವಾಡ’. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಲಂಕೇಶರು ಬರೆದಂತೆ, ಅವರೊಬ್ಬ ‘ಗೋಮುಖ ವ್ಯಾಘ್ರ’.
ಅವರ ಸಾವಿನಲ್ಲೂ ಲಾಭದ ಲೆಕ್ಕಾಚಾರ ಮಾಡುತ್ತಿರುವವರು, ಮುಖವಾಡ ತೊಡಿಸಿ ರಾಜಕೀಯ ಲಾಭ ಕಂಡುಂಡ ಮನೆಹಾಳರೇ ಅಲ್ಲವೇ?
-ಪಿ.ಕೆ.ಮಲ್ಲನಗೌಡರ್, ಗದಗ

Leave a Reply

Your email address will not be published.

Social Media Auto Publish Powered By : XYZScripts.com