ಹ್ಯಾಟ್ರಿಕ್ ವೀರ – ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜಿತ್ ವಾಡೇಕರ್.. ಒಂದು ನೆನಪು..

ಇತ್ತ ಅಟಲ್ ಬಿಹಾರಿ ವಾಜಪೇಯಿ ಅವರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂಬ ಸುದ್ದಿ ಬರುತ್ತಿದ್ದಂತೆ, ಇನ್ನೊಂದು ನನ್ನ ಹೃದಯಕ್ಕೆ ತೀರಾ ಹತ್ತಿರವಾದಂತಹ ಕ್ರಿಕೆಟರ್ ನ ಸಾವಿನ ಸುದ್ದಿ ಸಿಡಿಲಿನಂತೆ ಅಪ್ಪಳಿಸಿತು. ಹ್ಯಾಟ್ರಿಕ್ ವೀರ ಮಾಜಿ ಭಾರತೀಯ ಕ್ರಿಕೆಟ್ ತಂಡದ ನಾಯಕ ಅಜಿತ್ ವಾಡೇಕರ್ ಕಳೆದ ಹಲವಾರು ದಿನಗಳಿಂದ ಜಸ್ಲೋಕ್ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು, ನಿನ್ನೆ ತೀರಾ ಕಾಯಿಲೆಯಿಂದ ಅಸುನೀಗಿದ್ದು ಭಾರತೀಯ ಕ್ರಿಕೆಟ್ ರಂಗಕ್ಕೆ ತುಂಬಲಾಗದ ಹಾನಿಯನ್ನು ಉಂಟು ಮಾಡಿದೆ.

 

ಅರವತ್ತರ ಹಾಗೂ ಎಪ್ಪತ್ತರ ದಶಕಗಳು ಕ್ರಿಕೆಟ್ ನಲ್ಲಿ ಅತ್ಯಂತ ರೊಮ್ಯಾಂಟಿಕ್ ದಿನಗಳಾಗಿದ್ದವು. ಕಡಿಮೆ ಟೆಸ್ಟ್ ಪಂದ್ಯಗಳು, ನಿಯಮಿತ ಓವರ್ಗಳ ಪಂದ್ಯಗಳ ಗೊಂದಲವಿಲ್ಲ, ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿದ್ದವಾ ದಿನಗಳು. ಮುಂಬೈನ ಶಿವಾಜಿ ಪಾರ್ಕ್ ಸ್ಥಳದಿಂದ ಅನೇಕ ಭಾರತೀಯ ಕ್ರಿಕೆಟಿಗರು ಉದಯಿಸಿದ್ದಾರೆ. ಆ ಗರಡಿಯಲ್ಲಿ ಪಳಗಿ, ಮಧ್ಯಮ ವರ್ಗದ ಮಹಾರಾಷ್ಟ್ರೀಯನ್ ಕುಟುಂಬದಲ್ಲಿ ಜನಿಸಿದ್ದ ಅಜಿತ್, ರಣಜಿ ಪಂದ್ಯಗಳಲ್ಲಿ 1958 ರಲ್ಲಿ ಪದಾರ್ಪಣೆ ಮಾಡಿದ್ದರೂ, ಟೆಸ್ಟ್ ರಂಗಕ್ಕೆ ಬರಲು ಎಂಟು ವರ್ಷಗಳು ಬೇಕಾದವು.

Image result for ajith wadekar

ನವಾಬ್ ಆಫ್ ಪಟೌಡಿ ಅವರ ನಾಯಕತ್ವದಲ್ಲಿ 1968 ರಲ್ಲಿ ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತ ತನ್ನ ಮೊಟ್ಟ ಮೊದಲ ಹೊರದೇಶದ ಸರಣಿ ಗೆದ್ದಾಗ ಕೂಡ ತಮ್ಮ ಏಕೈಕ ಶತಕ ಬಾರಿಸಿ ಗೆಲುವಿಗೆ ನೆರವಾಗಿದ್ದರು. 1970 ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ನಾಯಕನ ಆಯ್ಕೆ ಆಗಬೇಕಿತ್ತು. ಆಯ್ಕೆ ಸಮಿತಿಯ ಮೀಟಿಂಗಿಗೆ ಒಬ್ಬ ಸೆಲೆಕ್ಟರ್ ಬಂದಿರಲಿಲ್ಲ ಭಾರತೀಯ ತಂಡವನ್ನು ಮೂರು ಪಾಲು ಆಗದಂತೆ ಎಲ್ಲರನ್ನೂ ಒಗ್ಗೂಡಿಸಿದ್ದ ನವಾಬ್ ಆಫ್ ಪಟೋಡಿ ಖಚಿತವಾಗಿ ನಾಯಕರಾಗುತ್ತಾರೆ ಎಂದು ಎಲ್ಲರೂ ಎಣಿಸಿದ್ದರು ಆದರೆ ಆಗಿದ್ದೇ ಬೇರೆ. ಮುಂಬೈ ನಗರದ ಮಾಜಿ ಭಾರತೀಯ ಓಪನಿಂಗ್ ಬ್ಯಾಟ್ಸ್ಮನ್ ವಿಜಯ್ ಮರ್ಚೆಂಟ್ ಚೇರ್ಮನ್ ಆಗಿದ್ದ ತಮ್ಮ ಕಾಸ್ಟಿಂಗ್ ವೋಟ್ ನೀಡಿ ತಮ್ಮ ಊರಿನ ಅಜಿತ್ ವಾಡೇಕರ್ ಗೆ ನಾಯಕತ್ವ ನೀಡಿದ್ದು ಶಾಕಿಂಗ್ ಆಗಿತ್ತು.

Image result for ajith wadekar

ವಿಜಯ್ ಮರ್ಚೆಂಟ್ ಅವರಿಗೇ ಪಟೌಡಿ ಹಾಗೂ ಅವರ ಹತ್ತಿರದವರಾದ ಇಎ ಎಸ್ ಪ್ರಸನ್ನ, ಬಿಷನ್ ಸಿಂಗ್ ಬೇಡಿ, ಮುಂತಾದವರ ಮೇಲೆ ಕಣ್ಣಿತ್ತು. ಹತ್ತೊಂಬತ್ತು ನೂರಾ ನಲವತ್ತು ಆರು ರಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಮರ್ಚೆಂಟ್ ನಾಯಕರಾಗ ಬೇಕಿತ್ತು ಆದರೆ ನಾಯಕತ್ವ ವಹಿಸಿದ್ದವರು ಪಟೌಡಿ ತಂದೆ ಇಫ್ತಿಕಾರ್ ಅಲಿ ಖಾನ್ ಪಟೌಡಿ. ಅದರ ಸೇಡನ್ನು ತಾವು ಆಯ್ಕೆ ಸಮಿತಿ ಚೇರ್ಮನ್ ಆದಾಗ ಪಟೌಡಿ ಜೂನಿಯರ್ ಮೇಲೆ ತೀರಿಸಿಕೊಂಡಿದ್ದಾರೆ ಎಂಬ ಸುದ್ದಿ ಮನೆಮಾತಾಗಿತ್ತು.

Image result for ajith wadekar

ಆದರೆ ಅವಕಾಶ ಸಿಕ್ಕಾಗ ಸಂಪೂರ್ಣವಾಗಿ ಸಮರ್ಥಿಸಿಕೊಂಡು ಮೊಟ್ಟ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ನಲ್ಲಿ ಟೆಸ್ಟ್ ಹಾಗೂ ಸರಣಿ ಜಯ ಹಾಗೂ ನಂತರದ ಇಂಗ್ಲೆಂಡ್ ಪ್ರವಾಸದಲ್ಲಿ ಕೂಡ ಮೊದಲ ಬಾರಿಗೆ ಟೆಸ್ಟ್ ಹಾಗೂ ಸರಣಿ ಜಯ ಗಳಿಸಿ ನಂತರ ಭಾರತದಲ್ಲಿ ಕೂಡ ಇಂಗ್ಲೆಂಡ್ ಮೇಲೆ ಜಯಭೇರಿ ಬಾರಿಸಿ ಹ್ಯಾಟ್ರಿಕ್ ಸಾಧಿಸಿದವರು ವಾಡೇಕರ್. ತಮ್ಮ ಆತ್ಮಕತೆ ಆದ “ಮೈ ಕ್ರಿಕೆಟಿಂಗ್ ಯಿಯರ್ಸ್” ನಲ್ಲಿ ಪೂರ್ತಿಯಾಗಿ ಬಹಳ ರಸವತ್ತಾಗಿ ಕಥೆ ಹೇಳಿದ್ದಾರೆ.

Image result for ajith wadekar

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ಸರಣಿ ಜಯಗಳಿಸಿದಾಗ ಸತತವಾಗಿ ಪ್ರಮೋಷನ್ ಪಡೆಯುತ್ತಾ ಕೊನೆಗೆ ಜನರಲ್ ಮ್ಯಾನೇಜರ್ ಹುದ್ದೆಯಲ್ಲಿದ್ದರು. ಆದರೆ 1974 ರ ಇಂಗ್ಲೆಂಡ್ ಪ್ರವಾಸದಲ್ಲಿ ತಂಡದಲ್ಲಿ ಎರಡು ಭಾಗ ಆಗಿದ್ದವು. ಓಪನ್ ಆಗಿ ಬಿಷನ್ ಸಿಂಗ್ ಬೇಡಿ ವಾಡೇಕರ್ ಅವರನ್ನು ವಿರೋಧಿಸುತ್ತಲೇ ಇದ್ದರೂ ಆ ಸಿರೀಸ್ ಹೀನಾಯವಾಗಿ ಮೂರು ಸೊನ್ನೆ ಅಂತರದಲ್ಲಿ ಸೋತಾಗ ಮುಂಬಯಿಯಲ್ಲಿ ಅವರ ಮನೆಯ ಮೇಲೆ ಕೆಲವು ಜನ ಕಲ್ಲು ಎಸೆದರು. ಅಲ್ಲಿಗೆ ನಿವೃತ್ತರಾದರು ಹಾಗೂ ಪಟೌಡಿ ಮರಳಿ ನಾಯಕತ್ವ ಪಡೆದುಕೊಂಡರು. ನಮ್ಮ ಕನ್ನಡಿಗರಿಗೆ ವಾಡೇಕರ್ ನಾಯಕತ್ವದಲ್ಲಿ ಬೇಸರ ತರಿಸಿದ ಸಂಗತಿ ಎಂದರೆ ಆಗ ಜಗದ್ವಿಖ್ಯಾತ ಆಫ್ ಸ್ಪಿನ್ನರ್ ಇಎಎಸ್ ಪ್ರಸನ್ನ ಅವರನ್ನು ಕಡೆಗಣಿಸಿ ವೆಂಕಟರಾಘವನ್ ಅವರನ್ನು ಮುಂದೆ ತಂದರು.

Image result for ajith wadekar

ನಂತರ ಭಾರತೀಯ ಟೀಮಿನ ಕೋಚ್, ಮ್ಯಾನೇಜರ್ ಹಾಗೂ ಸೆಲೆಕ್ಟರ್ ಆಗಿದ್ದರು. ಅಜರುದ್ದೀನ್ ಅವರೊಂದಿಗೆ ಗಾಢ ಸಂಬಂಧ, ಕೋಚ್ ಆಗಿ ಐತಿಹಾಸಿಕ 1992 ರ ಸೌತ್ ಆಫ್ರಿಕಾ ಪ್ರವಾಸ, ಮನೆಯಂಗಳದಲ್ಲಿ ಇಂಗ್ಲೆಂಡ್ ವಿರುದ್ಧ ಸಿರೀಸ್ ಜಯ. ಅಜರ್ ಹಾಗೂ ಇವರದ್ದು ಭಲೇ ಜೋಡಿ ವಾಡೇಕರ್ ಅವರ ಸೆನ್ಸ್ ಆಫ್ ಹ್ಯೂಮರ್ ಅಗಾಧವಾಗಿತ್ತು. ಶಾರ್ಜಾದ ಒಂದು ಟೂರ್ನಮೆಂಟ್ ನಲ್ಲಿ ಅವರಿಗೆ ಲಘು ಹೃದಯಾಘಾತ ಆಗಿತ್ತು ಅಲ್ಲೇ ಆಸ್ಪತ್ರೆಗೆ ಸೇರಿಸಿದ್ದರು ಇವರನ್ನು ಆಸ್ಪತ್ರೆಯಲ್ಲಿ ನೋಡಲು ಬಂದ ತಂಡದ ಫಿಸಿಯೊ ಅಲಿ ಇರಾನಿ ಅವರಿಗೆ ‘ನನ್ನ ಹೋಟೆಲ್ ರೂಮ್ನಲ್ಲಿ ಸಿಗರೇಟ್ ಪ್ಯಾಕ್ ಇದೆ ತೆಗೆದುಕೊಂಡು ಬಾ’ ಎಂದಿದ್ದರು.

Image result for ajith wadekar

1996 ರ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆದಾಗ ಪಾಕಿಸ್ತಾನ ವಿರುದ್ಧ ಬೆಂಗಳೂರಿನಲ್ಲಿ ಕ್ವಾರ್ಟರ್ ಫೈನಲ್ಸ್ ನಡೆಯಲಿತ್ತು. ನನಗೆ ಆಲ್ ಇಂಡಿಯಾ ರೇಡಿಯೋದವರು ವಾಡೇಕರ್ ಅವರ ಸಂದರ್ಶನ ಅರ್ಜೆಂಟ್ ಆಗಿ ಬೇಕು ಎಂದರು. ಆಗಿನ ಕೆಎಸ್ಸಿಎ ಪದಾಧಿಕಾರಿ ಶ್ರೀ ಸತ್ಯ ಜಿ ರಾವ್ ಅವರ ನೆರವಿನಿಂದ ವಾಡೇಕರ್ ಅವರನ್ನು ಸ್ಟೇಡಿಯಂನ ಒಂದು ಮೂಲೆಯಲ್ಲಿ ( ಸ್ಟೇಡಿಯಂನಲ್ಲಿ ರಿನೋವೇಷನ್ ನಡೆಯುತ್ತಲಿತ್ತು) ಕೂರಿಸಿ ಸಂದರ್ಶನ ಮಾಡಿದೆ. ನನ್ನ ಮೂರು ಪುಟಗಳ ಪ್ರಶ್ನೆಯನ್ನು ನೋಡಿ ನಸು ನಕ್ಕು ವಾಡೇಕರ್ ‘ನಿಮ್ಮ ಇಷ್ಟು ಪ್ರಶ್ನೆಗಳಿಗೆ ಉತ್ತರ ನೀಡುವ ಹೊತ್ತಿಗೆ ವಿಶ್ವಕಪ್ ಮುಗಿದಿರುತ್ತದೆ’ ಎಂದರು. ಆಟಗಾರರು ಹೇಳುವ ಹಾಗೆ ಬರೆಯುತ್ತಿರುವಾಗಲೂ ನಸುನಗುತ್ತಲೇ ಹೇಳುತ್ತಿದ್ದರು.

Image result for ajith wadekar

ಮುಂಬೈ ಕ್ರಿಕೆಟ್ ಗೆ ಹಾಗೂ ಭಾರತೀಯ ಕ್ರಿಕೆಟ್ ರಂಗಕ್ಕೆ ಅವರು ಶತಕ ಹಾಗೂ ರನ್ ಗಿಂತ ನೀಡಿದ್ದು ಮಾನವೀಯತೆ. ಅದಕ್ಕೆ ಅಷ್ಟು ಜನಪ್ರಿಯರಾಗಿದ್ದರು. ಈ ವರ್ಷದ ಐಪಿಎಲ್ ಗೆ ಕನ್ನಡ ಕಾಮೆಂಟರಿ ನೀಡಲು ನಾವು ಮುಂಬೈನಲ್ಲಿದ್ದಾಗ, ಜಿಆರ್ ವಿಶ್ವನಾಥ್ ಅವರೊಂದಿಗೆ ನಮ್ಮ ಹೊಟೇಲ್ ನಿಂದ ಲಿಂಕ್ ಮೆಲಿಂಡಾ ವರ್ಲಿ ಸೀ ಫೇಸ್ ಎದುರು ಹೋಗುವಾಗ, ಜಿಆರ್ವಿ ವಾಡೇಕರ್ ಅವರ ಮನೆ ತೋರಿಸಿದ್ದರು. ವಾಡೇಕರ್ ತಮ್ಮ ಬ್ಯಾಂಕ್ ಹಾಗೂ ರಾಜಕೀಯ ಇನ್ಫ್ಲುಯೆನ್ಸ್ ನಿಂದಾಗಿವರ್ಲಿ ಸೀ ಫೇಸ್ ನಂತಹ ಪೋಷ್ ಸ್ಥಳದಲ್ಲಿ ದೊಡ್ಡ ಸ್ಥಳ ತೆಗೆದುಕೊಂಡು ಎಂಟು ಫ್ಲ್ಯಾಟ್ ಕಟ್ಟಿಸಿಕೊಂಡು ತಾವು, ಗವಾಸ್ಕರ್, ವೆಂಗ್ ಸರ್ಕಾರ್, ಕರ್ಸನ್ ಘಾವ್ರಿ, ಹಾಕಿ ಒಲಿಂಪಿಯನ್ ಟಿವಿ ಸೋಮಯ್ಯ ಎಲ್ಲರೂ ಒಟ್ಟಿಗೆ ಇದ್ದರು .

Image result for ajith wadekar

ವಾಡೇಕರ್ ತಾವು ಕಾಲೇಜಿನಲ್ಲಿ ಇದ್ದಾಗ ರೇಖಾ ಎಂಬ ಹುಡುಗಿ (ನಂತರ ಪತ್ನಿ)ಯೊಂದಿಗೆ ಶಿವಾಜಿ ಪಾರ್ಕ್ನಲ್ಲಿ, ಉಡುಪಿ ಹೋಟೆಲ್ನಲ್ಲಿ ವಡೆ ಕಾಫಿ ಸೇವಿಸುವ ತಮ್ಮ ಆತ್ಮಚರಿತ್ರೆಯಲ್ಲಿ ವಿವರಿಸಿದ ಪ್ರಸಂಗಗಳು ನನ್ನ ಮನದಲ್ಲಿ ಇನ್ನೂ ಹಚ್ಚಹಸಿರಾಗಿದೆ. ವೆಸ್ಟ್ ಇಂಡೀಸ್ ಫಾಸ್ಟ್ ಬೌಲರ್ಸ್ ಗೆ ಹುಕ್ ಮಾಡಿ ಬೌಂಡರಿ ಬಾರಿಸಿದ ಭಾವಚಿತ್ರಗಳು ನನ್ನಲ್ಲಿ ಅನೇಕ ವರ್ಷ ಇದ್ದವು ಈಗಿನ ಆಟಗಾರರ ತರಹ ಹಣ ಗಳಿಸಿದ್ದರೂ ಎಲ್ಲರ ಮನಗೆದ್ದ ಅಜಿತ್ ಲಕ್ಷ್ಮಣ್ ವಾಡೇಕರ್ ಗಿಂತ ಇನ್ನೂ ಎಷ್ಟೋ ಹಿರಿಯರು ಇರುವಾಗ ಎಪ್ಪತ್ತು ಏಳನೇ ವಯಸ್ಸಿನಲ್ಲಿ ಅಸ್ತಂಗತವಾಗಿದ್ದು, ತುಂಬಲಾಗದ ನಷ್ಟವಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com