ಕವಿ, ವಾಗ್ಮಿ, ಪತ್ರಕರ್ತ ಹಾಗೂ ಜನನಾಯಕ ಅಟಲ್ ಬಿಹಾರಿ ವಾಜಪೇಯಿ ಬದುಕಿನ ಕಿರು ಚಿತ್ರ..

(ಜನನ ಡಿಸೆಂಬರ್ 25, 1924) ಅಟಲ್ ಅವರು ಹುಟ್ಟಿದ್ದು ಕ್ರಿಸ್‍ಮಸ್ ದಿನದಂದು, ಭಾರತದ ರಾಜಕೀಯದಲ್ಲಿ ಬಹುಕಾಲದಿಂದ ಸಕ್ರಿಯ ರಾಜಕಾರಣಿಯಾಗಿ ದೇಶಕ್ಕೆ ತಮ್ಮ ಅಪೂರ್ವ ಯೋಗದಾನವನ್ನು ನೀಡಿದ್ದಾರೆ. ಅವರೊಬ್ಬ ಕವಿ, ಹೆಸರಾಂತ ಪತ್ರಕರ್ತ, ಶ್ರೇಷ್ಠ ವಾಗ್ಮಿ ಕೂಡಾ ಆಗಿದ್ದರು.
ಅಟಲ್ ರವರು, 1924 ರಲ್ಲಿ ಕೃಷ್ಣದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ಅವರಿಗೆ ಮಗನಾಗಿ ಮಧ್ಯ ಪ್ರದೇಶದ ಗ್ವಾಲಿಯರ್ ಹತ್ತಿರದ ಶಿಂದೆ ಕಿ ಚವ್ವಾಣಿ ಎನ್ನುವ ಗ್ರಾಮದಲ್ಲಿ ಜನಿಸಿದರು.  ತಂದೆ ಒಬ್ಬ ಕವಿ, ಮಾತ್ತು ಸಾಮಾನ್ಯ ಶಾಲೆಯ ಉಪಾಧ್ಯಾಯರು. ಅಟಲ್ ಅವರ ‘ಅಜ್ಜ ಪಂಡಿತ್ ಶ್ಯಾಮ್ ಲಾಲ್ ವಾಜಪೇಯಿ’ ರವರು ಊರಿನಲ್ಲಿ ಹೆಸರುವಾಸಿಯಾಗಿದ್ದರು.


ಅಟಲ್ ಅವರ ಪದವಿಯನ್ನು ವಿಕ್ಟೋರಿಯಾ ಕಾಲೇಜಿನಿಂದ (ಈಗ ಲಕ್ಷ್ಮಿ ಬಾಯಿ ಕಾಲೇಜು) ಪಡೆದರು. ಹಿಂದಿ, ಇಂಗ್ಲೀಷ್ ಹಾಗೂ ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಗಳಿಸಿದ ಅಟಲ್ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನ ಕಾನ್ಪುರದ ಡಿ.ಎ.ವಿ ಕಾಲೇಜಿನಿಂದ ಪಡೆದರು.
ಕಾನ್ಪುರದ ಲಕ್ಷ್ಮೀಬಾಯಿ ಕಾಲೇಜಿನಲ್ಲಿ ರಾಜಕೀಯ ಶಾಸ್ತ್ರದಲ್ಲಿ ಮಾಸ್ಟರ್ ಡಿಗ್ರಿ ಪಡೆದ ಅಟಲ್ 1942ರಲ್ಲಿ ಕ್ವಿಟ್ ಇಂಡಿಯ ಚಳವಳಿಯ ಮೂಲಕ, ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ನಿಕಟವರ್ತಿಯಾಗಿ ಬೆಳೆದರು. ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್.ಎಸ್)ವನ್ನು ಸೇರಿದರು. ‘ವೀರ ಅರ್ಜುನ’ ಹಾಗೂ ‘ಪಾಂಚಜನ್ಯ’ ಎನ್ನುವ ಎರಡು ಪತ್ರಿಕೆಗಳಿಗೆ ಪತ್ರಕರ್ತರಾಗಿ ಕವಿಯಾಗಿ ಸೇವೆ ಸಲ್ಲಿಸಿದರು.
ಭಾರತದ ರಾಜಕೀಯದಲ್ಲಿ ಬಹುಕಾಲದಿಂದ ಸಕ್ರಿಯರಾದವರು. ಇವರು ಭಾರತೀಯ ಜನ ಸಂಘದ ಸಂಸ್ಥಾಪಕರಲ್ಲಿ ಒಬ್ಬರು. 1968 ಹಾಗೂ 1973ರಲ್ಲಿ ಇವರು ಇದರ ಮುಖ್ಯಸ್ಥರಾಗಿದ್ದರು. ಶ್ರೀ ವಾಜಪೇಯಿ ಯವರು ಲೋಕಸಭೆಗೆ 1957ರಲ್ಲಿ ಮೊದಲು ಆಯ್ಕೆಯಾದರು.]1977ರಲ್ಲಿ ಜನತಾ ಪಕ್ಷ ಸ್ಥಾಪನೆಯಾಗುವವರೆಗೂ ಜನಸಂಘದ ನಾಯಕರಾಗಿದ್ದರು.

ಮೊರಾರ್ಜಿ ದೇಸಾಯಿಯವರ ಸರಕಾರದಲ್ಲಿ ಮಾರ್ಚ್ 1977 ರಿಂದ ಜುಲೈ 1979 ರವರೆಗೆ ವಿದೇಶ ಮಂತ್ರಿಯಾಗಿ ಕಾರ್ಯನಿರ್ವಹಿಸಿದರು. 1980ರಲ್ಲಿ ಇವರು ಜನತಾಪಾರ್ಟಿಯನ್ನು ತೊರೆದು ಭಾರತೀಯ ಜನತಾ ಪಕ್ಷ ನಿರ್ಮಿಸುವಲ್ಲಿ ಸಹಾಯ ಮಾಡಿದರು. ಈ ನಿರ್ಣಯ ಆರ್‌.ಎಸ್‌.ಎಸ್‌ ನ ಒತ್ತಡದ ಮೇರೆಗೆ ಬಂದಿತೆಂದು ಹೇಳಲಾಗುತ್ತದೆ. ಬಿಜೆಪಿ ಪಾರ್ಲಿಮೆಂಟರಿ ಪಾರ್ಟಿಯ ನಾಯಕರಾಗಿ ವಾಜಪೇಯಿಯವರು 1980ರಿಂದ 1984 ರವರೆಗೆ ಹಾಗೂ 1986 ರಿಂದ 1993 ಮತ್ತು 1996ರಲ್ಲಿ ಕಾರ್ಯ ನಿರ್ವಹಿಸಿದರು. 11ನೇ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ಇವರು ಸೇವೆ ಸಲ್ಲಿಸಿದರು. ಸ್ವಾತಂತ್ರ್ಯ ನಂತರ ಪಂಡಿತ ಜವಹಾರಲಾಲ್ ನೆಹರು ಹಾಗೂ ಇಂದಿರಾ ಗಾಂಧಿ ನಂತರ ಈ ದೇಶದ ಜನಮಾನಸವನ್ನು ಅಷ್ಟೊಂದು ವ್ಯಾಪಕವಾಗಿ ಮುಟ್ಟಿದ, ತಟ್ಟಿದ ಮತ್ತೊಬ್ಬ ವ್ಯಕ್ತಿಯಿದ್ದರೆ ಅವರು ವಾಜಪೇಯಿ.

ಜನನ: ಡಿಸೆಂಬರ್ 25, 1924
ಹುಟ್ಟಿದೂರು: ಗ್ವಾಲಿಯರ್, ಮಧ್ಯಪ್ರದೇಶ
ಭಾರತದ ಪ್ರಧಾನ ಮಂತ್ರಿ
ಅಧಿಕಾರಕ್ಕೆ ಬಂದದ್ದು: 11ನೇ ಪ್ರಧಾನಮಂತ್ರಿಯಾಗಿ
ರಾಜಕೀಯ ಪಕ್ಷ: ಭಾರತೀಯ ಜನತಾ ಪಕ್ಷ
ಮೊದಲನೆಯ ಕಾರ್ಯಾವಧಿ
ಅಧಿಕಾರ ವಹಿಸಿಕೊಂಡದ್ದು: ಮೇ 16, 1996
ಅಧಿಕಾರ ಬಿಟ್ಟುಕೊಟ್ಟದ್ದು: ಜೂನ್ 1, 1996
ಪೂರ್ವಾಧಿಕಾರಿ: ನರಸಿಂಹರಾವ್
ಉತ್ತರಾಧಿಕಾರಿ: ದೇವೇಗೌಡ
ಎರಡನೆಯ ಕಾರ್ಯಾವಧಿ
ಅಧಿಕಾರ ವಹಿಸಿಕೊಂಡದ್ದು: ಮಾರ್ಚ್ 19, 1998
ಅಧಿಕಾರ ಬಿಟ್ಟುಕೊಟ್ಟದ್ದು: ಮೇ 22, 2004
ಪೂರ್ವಾಧಿಕಾರಿ: ಐ ಕೆ ಗುಜ್ರಾಲ್
ಉತ್ತರಾಧಿಕಾರಿ: ಡಾ. ಮನಮೋಹನ್ ಸಿಂಗ್

ಪ್ರಧಾನಮಂತ್ರಿಯಾಗಿ ಮೊದಲ ಕಾರ್ಯಾವಧಿ
1996ರಲ್ಲಿ ನಡೆದ ಲೋಕ ಸಭಾ ಚುನಾವಣೆಯಲ್ಲಿ ಬಿ ಜೆ ಪಿ ಹೆಚ್ಚು ಮತಗಳನ್ನು ಪಡೆದ ಏಕ ಪಕ್ಷವಾಗಿ ಹೊರ ಹೊಮ್ಮಿತು. 519 ಸೀಟುಗಳ ಪೈಕಿ ಬಿ ಜೆ ಪಿ 187 ಸೀಟುಗಳನ್ನು ಗೆದ್ದರೆ ಕಾಂಗ್ರೆಸ್ 140 ಹಾಗು ಬಿ ಜೆ ಪಿಯೇತರ, ಕಾಂಗ್ರೆಸ್ಸೇತರ ಪಕ್ಷಗಳ ಸಂಘ ಯುನೈಟೆಡ್ ಫ್ರಂಟ್ 192 ಸೀಟುಗಳನ್ನು ಗೆದ್ದುಕೊಂಡಿತು. ಹೆಚ್ಚು ಸೀಟು ಪಡೆದ ಏಕೈಕ ಪಕ್ಷವಾದ ಕಾರಣ ಬಿ ಜೆ ಪಿ ಗೆ ಸರ್ಕಾರ ರಚಿಸಲು ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಆಹ್ವಾನವಿತ್ತರು.
ಸ್ಥಳೀಯ ಹಾಗೂ ಕಾಂಗ್ರೆಸ್ಸೇತರ ಪಕ್ಷಗಳು ಬಿ ಜೆ ಪಿ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಬಹುದೆಂದು ಭಾವಿಸಿ ವಾಜಪೇಯಿ ಭಾರತದ ಹತ್ತನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಬಿ ಜೆ ಪಿ ನಾಯಕತ್ವದಲ್ಲಿ ಸರ್ಕಾರ ರಚನೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದರು. ಆದರೆ ಯುನೈಟೆಡ್ ಫ್ರಂಟ್ ಬಹುಮತ ಸಾಧಿಸಲು ಕಾಂಗ್ರೆಸ್ ಅನ್ನು ಬಾಹ್ಯ ಬೆಂಬಲಕ್ಕಾಗಿ ಯಾಚಿಸಿತು.
ಕಾಂಗ್ರೆಸ್ ಇದಕ್ಕೆ ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದರಿಂದ ವಾಜಪೇಯಿ ಕೇಂದ್ರದಲ್ಲಿ ಬಹುಮತ ಸಾಧಿಸಲು ಸಾಧ್ಯವಾಗಲಿಲ್ಲ. ಯುನೈಟೆಡ್ ಫ್ರಂಟ್ ಊ.ಆ.ದೇವೇಗೌಡರ ಮುಂದಾಳತ್ವದಲ್ಲಿ ಸರ್ಕಾರ ರಚನೆ ಮಾಡಲು ಮುಂದಾದಾಗ ಕೇವಲ ಹದಿಮೂರು ದಿನವಾಗಿದ್ದ ವಾಜಪೇಯಿ ಸರ್ಕಾರ ಪತನಗೊಂಡಿತು.
ಪ್ರಧಾನಮಂತ್ರಿಯಾಗಿ ಎರಡನೇ ಕಾರ್ಯಾವಧಿ
1998 ರಲ್ಲಿ ಚುನಾವಣೆಗಳು ನಡೆದಾಗ ಮತ್ತೆ ಬಿ ಜೆ ಪಿ ಯೇ ಮಿಕ್ಕ ಪಕ್ಷಗಳಿಗಿಂತ ಮುನ್ನಡೆ ಸಾಧಿಸಿತಾದರೂ ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗಲಿಲ್ಲ. ಕೂಡಲೇ ಸಮಾನ ಮನಸ್ಕ ಪಕ್ಷಗಳ ಒಡಗೂಡಿ ಎನ್ ಡಿ ಎ ಮೈತ್ರಿ ಕೂಟ ರಚಿಸಿತು.ಮೈತ್ರಿ ಕೂಟದ ಮೂಲಕ ಬಹುಮತ ಸಾಧಿಸಿದ ಕಾರಣ 10 ಮಾರ್ಚ್ 1998 ರಂದು ವಾಜಪೇಯಿ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಲಾಯಿತು.
ಈ ಅವಧಿಯಲ್ಲಿಯೇ ದೇಶ ಕಾರ್ಗಿಲ್ ಯುದ್ಧವನ್ನು ಎದುರಿಸಿತು. ಎನ್ ಡಿ ಎ ಮೈತ್ರಿ ಕೂಟದಲ್ಲಿದ್ದ ಒಂದು ಮುಖ್ಯ ಪಕ್ಷ ತಮಿಳುನಾಡಿನ ಎ ಐ ಎ ಡಿ ಎಂ ಕೆ. 1999 ರಲ್ಲಿ ಬಿ ಜೆ ಪಿ ಪಕ್ಷವು ಜಯಲಲಿತಾ ಕೆಲವು ಭ್ರಷ್ಟಾಚಾರ ಸಂಬಂಧಿ ದೂರುಗಳಲ್ಲಿ ನಿಯಂತ್ರಣ ಕಾಯ್ದುಕೊಳ್ಳಲು ಹವಣಿಸಿರುವ ಬಗ್ಗೆ ಗಂಭೀರ ಆರೋಪ ಮಾಡಿತು. ಎನ್ ಡಿ ಎ ಮೈತ್ರಿ ಕೂಟ ಸರ್ಕಾರ ಪತನವಾಗುವಂತಹ ಯಾವ ಒಪ್ಪಂದಗಳಿಗೂ ಅವಕಾಶವಿಲ್ಲ ಎಂದಿತು.
ಕೂಡಲೇ ಜಯಲಿತಾ ಸರ್ಕಾರಕ್ಕೆ ಕೊಟ್ಟಿದ್ದ ತಮ್ಮ ಬೆಂಬಲವನ್ನು ಹಿಂಪಡೆದರು. ಸರ್ಕಾರ ರಚಿಸಲು ಬೇಕಾದಷ್ಟು ಸೀಟುಗಳ ಸಂಖ್ಯೆಯನ್ನು ವಾಜಪೇಯಿ ಸರ್ಕಾರ ಹೊಂದಿಲ್ಲದ ಕಾರಣ ವಿಶ್ವಾಸ ಮತಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಾಗಿ ನಿರ್ಧರಿಸಲಾಯಿತು. ಆದರೆ ವಿಶ್ವಾಸ ಮತಗಳಲ್ಲಿಯೂ ಅವಶ್ಯ ಸಂಖ್ಯೆಯನ್ನು ತಲುಪಲು ಸಾಧ್ಯವಾಗದ ಕಾರಣ ವಾಜಪೇಯಿ ಸರ್ಕಾರ ಪತನವಾಯಿತು.
ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿಯವರಿಗೆ ಸರ್ಕಾರ ರಚಿಸಲು ಸಾಧ್ಯವಾದ ಪಕ್ಷದಲ್ಲಿ ಮತ್ತೊಂದು ಸರ್ಕಾರ ರಚನೆ ಮಾಡಲು ಸೂಚಿಸಿದರು, ಆದರೆ ಕಾಂಗ್ರೆಸ್ ಪಕ್ಷವು ಬಹುಮತಗಳ ಕೊರತೆಯಿಂದ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದಿತು.
ಯಾವ ಪಕ್ಷಗಳಿಗೂ ಬಹುಮತವಾಗದ ಕಾರಣ ಹನ್ನೆರಡನೆ ಲೋಕಸಭೆಯನ್ನು ವಿಸರ್ಜಿಸಿ ರಾಷ್ಟ್ರಪತಿ ಆದೇಶ ಹೊರಡಿಸಿದರು. ಹಾಗೂ ಮುಂದಿನ ಚುನಾವಣೆಗಳು ನಡೆದು ಫಲಿತಾಂಶ ಪ್ರಕಟವಾಗುವ ವರೆವಿಗೂ ವಾಜಪೇಯಿ ಕಾರ್ಯ ನಿರ್ವಾಹಕ ಪ್ರಧಾನಿಯಾಗಿ ಮುಂದುವರೆಯಲು ಸೂಚಿಸಿದರು.

ಪ್ರಧಾನಮಂತ್ರಿಯಾಗಿ ಮೂರನೇ ಕಾರ್ಯಾವಧಿ
ಕಾರ್ಗಿಲ್ ಯುದ್ಧ ನಡೆದ ಕೆಲವೇ ತಿಂಗಳುಗಳಲ್ಲಿ ನಡೆದ ಹದಿಮೂರನೇ ಲೋಕಸಭಾ ಚುನಾವಣೆಗಳು ನಡೆದು ಮತ್ತೆಯೂ ಬಿ ಜೆ ಪಿ ಪಕ್ಷ ಮುನ್ನಡೆ ಸಾಧಿಸಿತು. ಯುನೈಟೆಡ್ ಫ್ರಂಟ್ ಪಕ್ಷಗಳೂ ಕೂಡ ಮುನ್ನಡೆ ಸಾಧಿಸಿದವು.ಬಿ ಜೆ ಪಿ ನೇತೃತ್ವದ ಎನ್ ಡಿ ಎ 270 ಸೀಟುಗಳನ್ನು ಪಡೆಯಿತು, ಕಾಂಗ್ರೆಸ್ 156 ಸೀಟುಗಳಿಗೆ ತೃಪ್ತಿ ಪಟ್ಟುಕೊಂಡು ವಿರೋಧ ಪಕ್ಷದಲ್ಲಿ ಕೂರಬೇಕಾಯಿತು.
ಎನ್ ಡಿ ಎ ಸಮಾನ ಮನಸ್ಕ ಪಕ್ಷಗಳನ್ನು ಒಟ್ಟುಗೂಡಿಸಿ ಬಹುಮತ ಸಾಧಿಸಿತು.ಇದರ ಫಲವಾಗಿ ವಾಜಪೇಯಿ ನೇತೃತ್ವದಲ್ಲಿ ಸರ್ಕಾರ ರಚನೆಯಾಯಿತು. ಅಕ್ಟೋಬರ್ 1999 ರಲ್ಲಿ ವಾಜಪೇಯಿ ಮೂರನೇ ಬಾರಿಗೆ ಪ್ರಧಾನಿಯಾದರು.ಸಂಪೂರ್ಣ ಐದು ವರ್ಷ ಅವಧಿಯನ್ನು ಪೂರೈಸಿದ ಕಾಂಗ್ರೆಸ್ಸೇತರ ಮೊದಲ ಸರಕಾರವೆಂಬ ಪಾತ್ರಕ್ಕೂ ವಾಜಪೇಯಿ ಸರ್ಕಾರ ಭಾಜನವಾಯಿತು.

ಡಿಸೆಂಬರ್ 2005 ರಲ್ಲಿ ರಾಜಕೀಯ ನಿವೃತ್ತಿ ಘೋಷಿಸಿದ ವಾಜಪೇಯಿ ಮುಂದಿನ ಯಾವ ಚುನಾವನೆಯಲ್ಲಿಯೂ ಸ್ಪರ್ಧಿಸುವುದಿಲ್ಲ ಎಂದು ಸೂಚ್ಯವಾಗಿ ತಿಳಿಸಿದರು. ಬಿ ಜೆ ಪಿ ಪಕ್ಷದ ಬೆಳ್ಳಿ ಹಬ್ಬದ ಅಂಗವಾಗಿ ಮುಂಬೈನ ಶಿವಾಜಿ ಪಾರ್ಕ್‍ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ವಾಜಪೇಯಿ “ನನ್ನ ನಂತರ ಲಾಲ್‍ಕೃಷ್ಣ ಅಡ್ವಾಣಿ ಹಾಗೂ ಪ್ರಮೋದ್ ಮಹಾಜನ್ ಬಿ.ಜೆ.ಪಿ ಗೆ ರಾಮ ಲಕ್ಷ್ಮಣರಂತೆ ಇರಲಿದ್ದಾರೆ” ಎಂದು ಹೇಳುವ ಮೂಲಕ ತಮ್ಮ ನಂತರ ಪಕ್ಷವನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದನ್ನು ಸೂಚಿಸಿದ್ದರು. ಮುಂದೆ ಆರೋಗ್ಯ ಸಮಸ್ಯೆಯಿಂದ ಬಳಲಿದ ವಾಜಪೇಯಿ ದೆಹಲಿಯ ಉನ್ನತ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರು. ದಿನದಿಂದ ದಿನಕ್ಕೆ ಆರೋಗ್ಯ ಕ್ಷೀಣಿಸಿದ ಪರಿಣಾಮ 2009 ರ ಲೋಕಸಭಾ ಚುನಾವಣೆಯ ಯಾವ ಪ್ರಚಾರ ಕಾರ್ಯಗಳಲ್ಲಿಯೂ ಅವರು ಭಾಗಿಯಾಗಲಿಲ್ಲ.

ಆರೋಗ್ಯ ಸಮಸ್ಯೆಗಳು
ವಾಜಪೇಯಿ 2001 ನೇ ಇಸವಿಯಲ್ಲಿ ಮುಂಬೈನ ಹೆಸರಾಂತ ಆಸ್ಪತ್ರೆಯೊಂದರಲ್ಲಿ ಮಂಡಿ ಚಿಪ್ಪು ಬದಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. 2009 ರಲ್ಲಿ ಪಾರ್ಶ್ವ ವಾಯುವಿಗೆ ತುತ್ತಾದ ವಾಜಪೇಯಿ ಸ್ಪಷ್ಟವಾಗಿ ಮಾತನಾಡುವ ಶಕ್ತಿ ಕಳೆದುಕೊಂಡರು.
ದೀರ್ಘ ಕಾಲೀನ ಸಕ್ಕರೆ ಖಾಯಿಲೆಯಿಂದಲೂ ಬಳಲುತ್ತಿದ್ದು ಇತ್ತೀಚಿಗೆ ಯಾವ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸುವುದಿಲ್ಲ. ಮನೆಯಿಂದ ಹೊರಗೆ ಬರಲು ಸಾಧ್ಯವಿಲ್ಲ, ದೆಹಲಿಯ ಎ ಐ ಐ ಎಂ ಎಸ್ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯಲು ಮಾತ್ರವೇ ಮನೆಯಿಂದ ಹೊರಗೆ ಬರುವಷ್ಟು ಅವರ ಆರೋಗ್ಯ ಸ್ಥಿತಿ ವಿಷಮಿಸಿತ್ತು.

Leave a Reply

Your email address will not be published.

Social Media Auto Publish Powered By : XYZScripts.com