ಮಂಗಳೂರು : ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ದೇಶದ ಗಡಿಯುದ್ದಕ್ಕೂ ಸಾಹಸ ಯಾತ್ರೆ..

ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಪ್ರತಿ ನಿತ್ಯ ಅನೇಕ ಜನರು ನಡುಬೀದಿಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿದ್ದು, ದೇಶದ ನಾಗರಿಕರಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ.

ದೇಶದ ಜನತೆಗೆ ರಸ್ತೆ ಸುರಕ್ಷತೆಯ ಕುರಿತಾಗಿ ಅರಿವು ಮೂಡಿಸುವ ನಿಟ್ಟಿನಲ್ಲಿ ಮಂಗಳೂರಿನ ಕಿಶನ್ ಶೆಟ್ಟಿ ಹಾಗೂ ಪ್ರವೀಣ್ ಕುಮಾರ್ ಶೆಟ್ಟಿ ಎಂಬುವವರು ಸಾಹಸ ಯಾತ್ರೆಯನ್ನು ಕೈಗೊಂಡಿದ್ದಾರೆ. ಸದುದ್ದೇಶವನ್ನು ಹೊಂದಿರುವ ಈ ಯಾತ್ರೆಗೆ ಮಂಗಳೂರಿನ ಎಸ್ ಪಿ ಅವರು ಬುಧವಾರ ಮಂಗಳೂರಿನಲ್ಲಿ ಚಾಲನೆ ನೀಡಿದ್ದು, ಯಾತ್ರಿಕರಿಗೆ ಶುಭ ಹಾರೈಸಿದ್ದಾರೆ.

ಸುಮಾರು 60 ದಿನಗಳವರೆಗೆ ದೇಶದ ಗಡಿಯುದ್ದಕ್ಕೂ ಸಾಗಲಿರುವ ಈ ಸಾಹಸ ಯಾತ್ರೆಯಲ್ಲಿ 16000 ಕ್ಕೂ ಹೆಚ್ಚು ಕಿಲೋ ಮೀಟರ್ ದೂರವನ್ನು ಕ್ರಮಿಸಲಿದ್ದಾರೆ. ಗುಜರಾತ್, ರಾಜಸ್ಥಾನ, ಪಂಜಾಬ್, ಹರಿಯಾಣ, ಕಾಶ್ಮೀರ, ಉತ್ತರ ಪ್ರದೇಶ, ಈಶಾನ್ಯ ರಾಜ್ಯಗಳು ಹಾಗೂ ಪೂರ್ವ ಕರಾವಳಿ ಭಾಗಗಳಲ್ಲಿ ಸಂಚರಿಸಿ ಪುನಃ ಮಂಗಳೂರಿಗೆ ಬಂದು ಸೇರಲಿದ್ದಾರೆ.

‘ ದೇಶದ ಅಮೂಲ್ಯ ಸಂಪತ್ತಾಗಿರುವ ಯುವ ಜನತೆ ತಮ್ಮದಲ್ಲದ ತಪ್ಪಿಗಾಗಿ ಅಕಾಲ ಮರಣ ಹೊಂದುವುದನ್ನು ನಾವೆಲ್ಲರೂ ತಡೆಯಬೇಕಿದೆ. ಅಪಘಾತ ಸಂಭವಿಸಲು ಕುಡಿದ ನಶೆಯಲ್ಲಿ ಅಥವಾ ವೇಗವಾಗಿ ವಾಹನ ಚಲಾಯಿಸುವುದು ಇವುಗಳಷ್ಟೇ ಕಾರಣವಾಗಿರುವುದಿಲ್ಲ. ಬದಲಾಗಿ ರಸ್ತೆ ಸುರಕ್ಷೆ ಎನ್ನುವುದು ವಾಹನಗಳ ವಿನ್ಯಾಸ ಹಾಗೂ ರಸ್ತೆಗಳ ನಿರ್ಮಾಣವನ್ನೂ ಅವಲಂಬಿಸಿದೆ ‘ ಎಂಬುದನ್ನು ಜನರಿಗೆ ಮನಗಾಣಿಸುವ ಮಹತ್ತರ ಉದ್ದೇಶ ಕಿಶನ್ ಶೆಟ್ಟಿ, ಪ್ರವೀಣ್ ಕುಮಾರ್ ಶೆಟ್ಟಿ ಅವರದ್ದಾಗಿದೆ.

 

Leave a Reply

Your email address will not be published.